ಶಿಕ್ಷಣದಿಂದ ವಂಚಿತವಾಗುವ ಸಮುದಾಯವನ್ನು ಒಡೆಯುವ ಕೆಲಸನ್ನು ಮಾಡಲಾಗುತ್ತದೆ: ಸಿದ್ದರಾಮಯ್ಯ

Update: 2022-08-07 18:17 GMT

ಮೈಸೂರು: ಯಾವ ಸಮುದಾಯ ಶಿಕ್ಷಣದಿಂದ ವಂಚಿತವಾಗುತ್ತದೊ ಅಂತಹ ಸಮುದಾಯನ್ನು ಒಡೆಯುವ ಕೆಲಸವನ್ನು ಮಾಡಲಾಗುತ್ತದೆ. ಹಾಗಾಗಿ ಎಲ್ಲರೂ ತಮ್ಮ ಮಕ್ಕಳನ್ನು ವಿದ್ಯಾವಂತರಾಗಿ ಮಾಡಬೇಕು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕರೆ ನೀಡಿದರು.

ನಗರದ ಕಲಾಮಂದಿರಲ್ಲಿ ರವಿವಾರ ಆಯೋಜಿಸಿದ್ದ ಶ್ರೀ ವಿಶ್ವಕರ್ಮ ಸೇವಾ ಟ್ರಸ್ಟ್ ಉದ್ಘಾಟನೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಅಂಬೇಡ್ಕರ್ ದಲಿತರು. ಆದರೆ ಅವರು ಶಿಕ್ಷಣ ಪಡೆಯದಿದ್ದರೆ ಸಂವಿಧಾನ ಬರೆಯಲು ಸಾಧ್ಯವಾಗುತ್ತಿತ್ತಾ? ಹಾಗಾಗಿ ಎಲ್ಲಾ ಮಕ್ಕಳನ್ನೂ ವಿದ್ಯಾವಂತರನ್ನಾಗಿ ಮಾಡಬೇಕು. ಯಾರು ವಿದ್ಯಾವಂತರಾಗಿರುವುದಿಲ್ಲವೋ ಹಾಗೂ ಒಗ್ಗಟ್ಟಿನಲ್ಲಿಲ್ಲವೋ ಅಂತಹ ಜಾತಿಯನ್ನು ಒಡೆಯುವ ಪ್ರಯತ್ನ ಮಾಡುತ್ತಾರೆ. ಈ ವ್ಯವಸ್ಥೆ ಬದಲಾಗಬೇಕಾದರೆ ಶಿಕ್ಷಣ, ಸಂಘಟನೆ, ಹೋರಾಟ ಎಂಬ ಅಂಬೇಡ್ಕರ್ ಅವರ ಮಂತ್ರವನ್ನು ಪಾಲಿಸಬೇಕು ಎಂದರು.

12 ನೇ ಶತಮಾನದಲ್ಲಿ ಬಸವಣ್ಣನವರು ಅನುಭವ ಮಂಟಪದ ಮೂಲಕ ಎಲ್ಲರೂ ಸಮಾನರು ಎಂದು ಸಾರಿದರು. ಆದರೆ ಜಾತಿ ವ್ಯವಸ್ಥೆ ಮಾತ್ರ ಹೋಗಿಲ್ಲ. ಪ್ರತಿಯೊಬ್ಬರೂ ಜಾತಿ ಧರ್ಮ ಎಂಬುದನ್ನು ಬಿಟ್ಟು ಮನುಷ್ಯತ್ವವನ್ನು ಬೆಳೆಸಿಕೊಳ್ಳಬೇಕು ಎಂದರು.

ಈ ಸಂದರ್ಭ ವಿಸ್ವಕರ್ಮ ಸೇವಾಟ್ರಸ್ಟ್ ನಾಮಫಲಕವನ್ನು ನಟಿ ಭವ್ಯ ಅನಾವರಣಗೊಳಿಸಿದರು. ಎಸೆಸೆಲ್ಸಿ ಹಾಗೂ ಪಿಯುಸಿಯಲ್ಲಿ ಅತಿಹೆಚ್ಚು ಅಂಕ ಪಡೆದಿರುವ ವಿಶ್ವಕರ್ಮ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಶ್ರೀ.ನೀಲಕಂಠಾಚಾರ್ಯ ಸ್ವಾಮೀಜಿ, ವಿರ್ಶಕರ್ಮ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ನಂದಕುಮಾರ್, ಚಲನಚಿತ್ರ ನಟಿ ಭವ್ಯ, ಶಾಸಕರಾದ ಎಲ್.ನಾಗೇಂದ್ರ, ಅನೀಲ್ ಚಿಕ್ಕಮಾದು, ವಿಧಾನಪರಿಷತ್ ಸದಸ್ಯ ಡಾ.ತಿಮ್ಮಯ್ಯ, ಮುಡಾ ಅಧ್ಯಕ್ಷ ಎಚ್.ವಿ.ರಾಜೀವ್, ವಿಧಾನಪರಿಷತ್ ಸದಸ್ಯ ಪುಟ್ಟಸಿದ್ದಶೆಟ್ಟಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಿ.ಜೆ.ವಿಜಯ್ ಕುಮಾರ್, ಪಾಲಿಕೆ ಸದಸ್ಯರಾದ ಶ್ರೀಧರ್, ರಮೇಶ್, ಕಾಂಗ್ರೆಸ್ ಮುಖಂಡ ಹರೀಶ್ ಗೌಡ, ಪುಟ್ಟಸ್ವಾಮಾಚಾರ್, ಛಾಯಾದೇವಿ ಸೇರಿದಂತೆ ಹಲವರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News