ಮಳೆ ಹಾನಿ ಪರಿಹಾರ ವಿತರಣೆಯಲ್ಲಿ ತಾರತಮ್ಯ ಮಾಡಿಲ್ಲ: ಸಿಎಂ ಬಸವರಾಜ ಬೊಮ್ಮಾಯಿ ಸ್ಪಷ್ಟನೆ

Update: 2022-08-08 13:36 GMT

ಬೆಂಗಳೂರು, ಆ. 8: ‘ಮಳೆ ಮತ್ತು ಪ್ರವಾಹ ಪರಿಸ್ಥಿತಿ ಹಿನ್ನೆಲೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸಂಭವಿಸಿರುವ ಅನಾಹುತಕ್ಕೆ ಪರಿಹಾರದಲ್ಲಿ ಯಾವುದೇ ರೀತಿಯ ತಾರತಮ್ಯ ಮಾಡುತ್ತಿಲ್ಲ. ಬದಲಿಗೆ ಅಗತ್ಯಕ್ಕೆ ಅನುಗುಣವಾಗಿ ಕಾಲ ಕಾಲಕ್ಕೆ ಅನುದಾನ ಬಿಡುಗಡೆ ಮಾಡಲಾಗುತ್ತಿದೆ' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸ್ಪಷ್ಟನೆ ನೀಡಿದ್ದಾರೆ.

ಸೋಮವಾರ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್ ಮತ್ತು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಅವರ ಟ್ವೀಟ್‍ಗೆ ಪ್ರತಿಕ್ರಿಯಿಸಿರುವ ಬಸವರಾಜ ಬೊಮ್ಮಾಯಿ, ‘ಪ್ರಕೃತಿ ವಿಕೋಪದ ಪರಿಹಾರ ಕಾರ್ಯಗಳಿಗೆ ಜಿಲ್ಲಾಧಿಕಾರಿಗಳ ಪಿ.ಡಿ.ಖಾತೆಯಲ್ಲಿ ಲಭ್ಯವಿರುವ ಅನುದಾನವನ್ನು ಆಧರಿಸಿ ಹಣ ಬಿಡುಗಡೆ ಮಾಡಲಾಗುತ್ತದೆ. ಇದೇ ಆಗಸ್ಟ್ 2ರ ಮಾಹಿತಿಯಂತೆ ಬೀದರ್ ಜಿಲ್ಲಾಧಿಕಾರಿಗಳ ಪಿ.ಡಿ.ಖಾತೆಯಲ್ಲಿ 20.45 ಕೋಟಿ ರೂ., ಕಲಬುರ್ಗಿ ಜಿಲ್ಲಾಧಿಕಾರಿಗಳ ಬಳಿ 42.07ಕೋಟಿ ರೂ. ಹಾಗೂ ಯಾದಗಿರಿ ಜಿಲ್ಲಾಧಿಕಾರಿಗಳ ಬಳಿ 25.14 ಕೋಟಿ ರೂ. ಅನುದಾನ ಲಭ್ಯವಿದೆ' ಎಂದು ವಿವರಣೆ ನೀಡಿದ್ದಾರೆ.

‘ಪ್ರಕೃತಿ ವಿಕೋಪದ ಪರಿಹಾರ ಕಾರ್ಯಗಳಿಗೆ ಜಿಲ್ಲಾಧಿಕಾರಿಗಳ ಪಿ.ಡಿ.ಖಾತೆಯಲ್ಲಿ ಲಭ್ಯವಿರುವ ಅನುದಾನವನ್ನು ಆಧರಿಸಿ ಹಣ ಬಿಡುಗಡೆ ಮಾಡಲಾಗುತ್ತದೆ. ಇದೇ ಆಗಸ್ಟ್ 2ರ ಮಾಹಿತಿಯಂತೆ ವಿಜಯಪುರ ಜಿಲ್ಲಾಧಿಕಾರಿಗಳ ಪಿ.ಡಿ. ಖಾತೆಯಲ್ಲಿ 28.5 ಕೋಟಿ ರೂ. ಅನುದಾನ ಲಭ್ಯವಿದೆ. ಇತರ 21 ಜಿಲ್ಲೆಗಳಲ್ಲಿ ವಿಜಯಪುರ ಜಿಲ್ಲೆಗಿಂತ ಕಡಿಮೆ ಮೊತ್ತ ಲಭ್ಯವಿದೆ ಎಂಬುದು ಗಮನಿಸಬೇಕಾದ ಅಂಶ' ಎಂದು ಬಸವರಾಜ ಬೊಮ್ಮಾಯಿ ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News