ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಸಾಧ್ಯತೆ: ಬಿಜೆಪಿ ಮಾಜಿ ಶಾಸಕ ಸುರೇಶ್ ಗೌಡ

Update: 2022-08-08 14:59 GMT

ತುಮಕೂರು, ಆ.8: 'ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಮಾಡುವ ವಿಚಾರ ಪಕ್ಷದ ವರಿಷ್ಠರಿಗೆ ಬಿಟ್ಟದ್ದು. ಬದಲಾವಣೆ ಆಗುವುದಿದ್ದರೆ ಆಗಸ್ಟ್ 15ರ ಒಳಗಡೆ ಎಲ್ಲವೂ ಆಗಬಹುದು ಎಂಬ ಅಭಿಪ್ರಾಯ ನಮಗೆ  ಇದೆ ' ಎಂದು ಬಿಜೆಪಿ ಮಾಜಿ ಶಾಸಕ ಬಿ.ಸುರೇಶ್ ಗೌಡ ಹೇಳಿದ್ದಾರೆ. 

ಮುಖ್ಯಮಂತ್ರಿ ಬದಲಾವಣೆ ಕುರಿತ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ''ಈಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಒಳ್ಳೆಯ ಕೆಲಸ ಮಾಡಿದ್ದಾರೆ. ಅವರ ಒಂದು ವರ್ಷದ ಅವಧಿಯಲ್ಲಿ ಕೆರೆ ಕಟ್ಟೆಗಳು ತುಂಬಿವೆ. ಆದರೆ ಪಾರ್ಟಿ ಏನು ನಿರ್ಧಾರ ತೆಗೆದುಕೊಳ್ಳುತ್ತದೆಯೋ ಅದಕ್ಕೆ ನಾವು ಬದ್ಧರಾಗಿದ್ದೇವೆ'' ಎಂದರು.

''ಬಿಜೆಪಿ ಅಧಿಕಾರದಲ್ಲಿರುವ ಕೆಲವು ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ 6 ತಿಂಗಳು ಇದ್ದಾಗಲೂ ಮುಖ್ಯಮಂತ್ರಿ  ಬದಲಾವಣೆ ಮಾಡಿದ್ದಾರೆ. ಎಂಟತ್ತು ತಿಂಗಳು ಇದ್ದಾಗಲೂ ಬದಲಾವಣೆ ಮಾಡಿದ್ದಾರೆ. ಅದು ಕೇಂದ್ರಕ್ಕೆ ಬಿಟ್ಟ ವಿಚಾರ. ಚುನಾವಣೆಯಲ್ಲಿ ಗೆಲ್ಲುವ ದೃಷ್ಟಿಯಿಂದ ಪಾರ್ಟಿಯವರು ನಿರ್ಧಾರ ಕೈಗೊಳ್ಳುತ್ತಾರೆ'' ಎಂದು ತಿಳಿಸಿದರು. 

''ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮುಖ್ಯಮಂತ್ರಿ ಆಗಲಿದ್ದಾರೆ ಎಂಬ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಅವರನ್ನು ಭೇಟಿ ಮಾಡಿದ್ದೆ.  ನಾನು ಮುಖ್ಯಮಂತ್ರಿ ಯಾಗುತ್ತೇನೆ ಎಂದು ಅವರು ಏನನ್ನೂ ಹೇಳಿಲ್ಲ. ಅದೆಲ್ಲ ಮಾಧ್ಯಮದವರ ಸೃಷ್ಟಿ. ಅವರು ಬಂದ್ರೆ ಸಂತೋಷ'' ಎಂದು ಹೇಳಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News