VIDEO - ಶ್ರೀರಂಗಪಟ್ಟಣ: ಪ್ರವಾಹದಲ್ಲೇ ಸಾಗಿ ಅಂತ್ಯಸಂಸ್ಕಾರ ನೆರವೇರಿಸಿದ ಗ್ರಾಮಸ್ಥರು!

Update: 2022-08-08 14:56 GMT

ಶ್ರೀರಂಗಪಟ್ಟಣ, ಆ.8: ಪ್ರವಾಹದ ನೀರಿನಲ್ಲೇ ಶವವನ್ನು ಹೊತ್ತುಕೊಂಡು ಸ್ಮಶಾನಕ್ಕೆ ತೆರಳಿ ಅಂತ್ಯಸಂಸ್ಕಾರ ನೆರವೇರಿಸಿರುವ ಘಟನೆ ತಾಲೂಕಿನ ಮಹದೇವಪುರ ಗ್ರಾಮದಲ್ಲಿ ಸೋಮವಾರ ಬೆಳಗ್ಗೆ ನಡೆದಿದ್ದು, ವಿಡೀಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಕಾವೇರಿ ಜಲಾನಯನ ಪ್ರದೇಶದಲ್ಲಿ ಧಾರಾಕಾರ ಮಳೆ ಸುರಿಯುತ್ತಿರುವುದರಿಂದ ಕೆಆರ್‍ಎಸ್ ಜಲಾಶಯದಿಂದ ಒಂದು ಲಕ್ಷಕ್ಕೂ ಮೀರಿ ನೀರನ್ನು ನದಿಗೆ ಬಿಡುಗಡೆ ಮಾಡಿರುವ ಹಿನ್ನೆಲೆ ಕಾವೇರಿ ನದಿಯಲ್ಲಿ ಪ್ರವಾಹ ಉಂಟಾಗಿದೆ.

ಮಹದೇವಪುರ ಗ್ರಾಮವು ಕಾವೇರಿ ನದಿ ತೀರದಲ್ಲಿದೆ. ಗ್ರಾಮದ ಸ್ಮಶಾನಕ್ಕೆ ತೆರಳುವ ಮಾರ್ಗ ಪ್ರವಾಹದ ನೀರಿನಿಂದ ಜಲಾವೃತಗೊಂಡಿದೆ. ಶವಸಂಸ್ಕಾರಕ್ಕೆ ಪರ್ಯಾಯ ಜಾಗವಿಲ್ಲದ ಕಾರಣ ಮೃತಪಟ್ಟಿದ್ದ ಸುಲೋಚನಾ ಎಂಬುವರ ಶವವನ್ನು ಗ್ರಾಮಸ್ಥರು ಪ್ರವಾಹ ನೀರಿನಲ್ಲೇ ಹೊತ್ತೊಯ್ದು ಶವಸಂಸ್ಕಾರ ನೆರವೇರಿಸಿದ್ದಾರೆ.

ಶವಯಾತ್ರೆಯಲ್ಲಿ ತೆರಳಿದವರು ಎದೆಮಟ್ಟಕ್ಕೆ ನೀರು ಬಂದಿದೆ. ಆದರೂ, ಜೀವದ ಹಂಗು ತೊರೆದು ಗ್ರಾಮಸ್ಥರು ಶವಸಂಸ್ಕಾರ ನಡೆಸಿದ್ದಾರೆ. ಇದನ್ನು ಗ್ರಾಮದವರು ವಿಡೀಯೋ ಚಿತ್ರೀಕರಣ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

ವಿಷಯ ತಿಳಿದ ತಹಶೀಲ್ದಾರ್ ಸೇರಿದಂತೆ ಇತರೆ ಅಧಿಕಾರಿಗಳ ತಂಡ ಗ್ರಾಮಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. ಈ ನಡುವೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಶಾಸಕ ರವೀಂದ್ರ ಶ್ರೀಕಂಠಯ್ಯ, ಗ್ರಾಮಕ್ಕೆ ಪರ್ಯಾಯ ಸ್ಮಶಾನ ಸ್ಥಳ ಗುರುತಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News