ಚಿಕ್ಕಮಗಳೂರು: ಅಕ್ರಮ ಗೋಮಾಂಸ ಮಾರಾಟ ಆರೋಪ; ಆರೋಪಿ ಯಶ್‍ಪಾಲ್ ಮನೆಯ ವಿದ್ಯುತ್, ನೀರಿನ ಸಂಪರ್ಕ ಕಡಿತಗೊಳಿಸಿದ ನಗರಸಭೆ

Update: 2022-08-08 15:57 GMT

ಚಿಕ್ಕಮಗಳೂರು, ಆ.8 : ಗೋ ಮಾಂಸ ಮಾರಾಟ ಮಾಡುತ್ತಿದ್ದ ಮನೆಯ ಮೇಲೆ ನಗರಸಭೆ ಅಧಿಕಾರಿಗಳು ದಾಳಿ ನಡೆಸಿ ವಿದ್ಯುತ್ ಸಂಪರ್ಕ ಮತ್ತು ಮನೆಯ ನೀರಿನ ಸಂಪರ್ಕವನ್ನು ಕಡಿತಗೊಳಿಸಿದೆ. ಅಲ್ಲದೇ ಮನೆಯ ದಾಖಲೆಗಳನ್ನು ರದ್ದು ಮಾಡಿ ನಗರಸಭೆ ಆಸ್ತಿ ಎಂದು ಪರಿವರ್ತನೆ ಮಾಡಲು ಸಿದ್ಧತೆ ನಡೆಸಲಾಗುತ್ತಿದೆ ಎನ್ನಲಾಗುತ್ತಿದೆ.

ಚಿಕ್ಕಮಗಳೂರು (Chikkamagaluru) ನಗರದಲ್ಲಿ ಗೋಹತ್ಯೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ನಗರಸಭೆ ಕಠಿಣ ಕ್ರಮಗಳನ್ನು ಕೈಗೊಂಡಿದ್ದು, ಇತ್ತೀಚೆಗೆ ನಗರದಲ್ಲಿ ಅಕ್ರಮ ಕಸಯಿಖಾನೆಗಳ ಮೇಲೆ ದಾಳಿ ನಡೆಸಿ ಮಾಂಸ ಮಾರಾಟ ಮಾಡುತ್ತಿದ್ದ ಶೆಡ್‍ಗಳಿಗೆ ನೋಟಿಸ್ ಅಂಟಿಸಿ ನಗರಸಭೆ ಅಧಿಕಾರಿಗಳು ಮುನ್ನೆಚ್ಚರಿಕೆ ನೀಡಿದ್ದರು. ಕೆಲ ಅಕ್ರಮ ಶೆಡ್‍ಗಳನ್ನು ತೆರವುಗೊಳಿಸಿದ್ದರು.

ಅಕ್ರಮವಾಗಿ ಗೋಮಾಂಸ ಮಾರಾಟ ಮಾಡಿದಲ್ಲಿ ಅಂತವರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವುದಾಗಿ ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ಈ ಹಿಂದೆ ಎಚ್ಚರಿಕೆಯನ್ನು ನೀಡಿದ್ದರು. ಪೊಲೀಸ್ ಅಧಿಕಾರಿಗಳು ಗೋಮಾಂಸ ಮಾರಾಟಗಾರರ ಪೇರೆಡ್ ನಡೆಸಿ ಈ ಸಂಬಂಧ ಸೂಕ್ತ ತಿಳುವಳಿಕೆ, ಎಚ್ಚರಿಕೆಯನ್ನೂ ನೀಡಿದ್ದರು.

ಆದರೆ ನಗರದಲ್ಲಿ ಕೆಲ ವ್ಯಕ್ತಿಗಳು ಅಕ್ರಮವಾಗಿ ಗೋಮಾಂಸ ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಪಡೆದ ನಗರಸಭೆ ಅಧಿಕಾರಿಗಳು, ಪೊಲೀಸರು ರವಿವಾರ ಸಂಜೆ ನಗರದ ತಮಿಳು ಕಾಲನಿಯಲ್ಲಿ ಯಶ್‍ಪಾಲ್ ಎಂಬವರಿಗೆ ಸೇರಿದ ಮನೆಯ ಮೇಲೆ ದಾಳಿ ಮಾಡಿ ಗೋಮಾಂಸ ವಶಪಡಿಸಿಕೊಂಡಿದ್ದಾರೆ. ಅಲ್ಲದೇ ನಗರಸಭೆ ಅಧಿಕಾರಿಗಳು ಗೋಮಾಂಸ ಮಾರಾಟಗಾರರ ಮನೆಯ ವಿದ್ಯುತ್ ಸಂಪರ್ಕ ಮತ್ತು ನೀರಿನ ಸಂಪರ್ಕವನ್ನು ಕಡಿತಗೊಳಿಸಿದ್ದು, ಮನೆಯ ದಾಖಲೆಗಳನ್ನು ರದ್ದು ಮಾಡಿ ನಗರಸಭೆ ಆಸ್ತಿ ಎಂದು ಪರಿವರ್ತನೆ ಮಾಡಲು ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆಂದು ತಿಳಿದು ಬಂದಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News