ಡಿಕೆಶಿ ವಿರುದ್ಧ ಅಕ್ರಮ ಆಸ್ತಿ ಸಂಪಾದನೆ ಪ್ರಕರಣ: ಆಕ್ಷೇಪಣೆ ಸಲ್ಲಿಸಲು ಸಿಬಿಐಗೆ ಹೈಕೋರ್ಟ್ ನಿಂದ ಕಾಲಾವಕಾಶ

Update: 2022-08-08 17:35 GMT

ಬೆಂಗಳೂರು, ಆ.8: ಆದಾಯಕ್ಕೂ ಮೀರಿದ ಆಸ್ತಿ ಸಂಪಾದನೆ ಆರೋಪ ಕುರಿತು ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣ ರದ್ದುಪಡಿಸುವಂತೆ ಕೋರಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಲ್ಲಿಸಿದ್ದ ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಸಿಬಿಐಗೆ ಹೈಕೋರ್ಟ್ ಕಾಲಾವಕಾಶ ನೀಡಿದೆ. 

ಕೇಂದ್ರೀಯ ತನಿಖಾ ದಳವು ತಮ್ಮ ವಿರುದ್ಧ ಅಕ್ರಮ ಆಸ್ತಿ ಸಂಪಾದನೆ ಆರೋಪಕ್ಕೆ ಸಂಬಂಧಿಸಿದಂತೆ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ದಾಖಲಿಸಿರುವ ಎಫ್‌ಐಆರ್ ರದ್ದುಪಡಿಸಬೇಕೆಂದು ಕೋರಿ ಡಿಕೆಶಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ಸುನೀಲ್ ದತ್ ಯಾದವ್ ನೇತೃತ್ವದ ಏಕ ಸದಸ್ಯ ಪೀಠ, ಸಿಬಿಐಗೆ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡಿತು. 

ಡಿಕೆಶಿ ವಿರುದ್ಧ ಸಕ್ಷಮ ಪ್ರಾಧಿಕಾರದ ಪೂರ್ವಾನುಮತಿ ಪಡೆಯದೇ ಆದಾಯ ಮೀರಿದ ಆಸ್ತಿ ಗಳಿಕೆ ಆರೋಪ ಕುರಿತು ಭ್ರಷ್ಟಾಚಾರ ನಿಯಂತ್ರಣ ಕಾಯಿದೆ ಅಡಿ ಎಫ್‌ಐಆರ್ ದಾಖಲಿಸಿರುವುದು ಕಾನೂನು ಬಾಹಿರವಾಗಿದೆ. ಎಫ್‌ಐಆರ್ ದಾಖಲಿಸುವ ವೇಳೆ ಆದಾಯ ಮೀರಿದ ಆಸ್ತಿ ಗಳಿಕೆ ಪ್ರಕರಣಗಳಲ್ಲಿ ಅನುಸರಿಸಬೇಕಾದ ನಿಯಮ ಪಾಲಿಸಿಲ್ಲ. ಪ್ರಾಥಮಿಕ ತನಿಖೆಯ ಅಂಶಗಳೇನು ಎಂಬುದನ್ನೂ ಎಫ್‌ಐಆರ್‌ನಲ್ಲಿ ವಿವರಿಸಿಲ್ಲ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. 

ಡಿ.ಕೆ.ಶಿವಕುಮಾರ್ ಅವರು ಕೃಷಿ ಕುಟುಂಬಕ್ಕೆ ಸೇರಿದವರಾಗಿದ್ದಾರೆ. ಅಷ್ಟೇ ಅಲ್ಲ ರಿಯಲ್ ಎಸ್ಟೇಟ್, ಶಿಕ್ಷಣ ಕೇತ್ರ ಸೇರಿದಂತೆ ಇತರ ವ್ಯವಹಾರಗಳ ಮೂಲಕವೂ ಆದಾಯದ ಮೂಲ ಹೊಂದಿದ್ದಾರೆ. ಡಿಕೆಶಿ ಕುಟುಂಬದ ಇತರ ಸದಸ್ಯರ ಆದಾಯವನ್ನೂ ಸಹ ಅವರ ಲೆಕ್ಕಕ್ಕೇ ಸೇರಿಸಲಾಗಿದೆ ಇದು ಕಾನೂನುಬಾಹಿರ ಕ್ರಮವಾಗಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ. ಸಿಬಿಐ ದಾಖಲು ಮಾಡಿರುವ ಪ್ರಕರಣ ರದ್ದುಗೊಳಿಸಬೇಕು ಎಂದು ಕೋರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News