CET ರ‍್ಯಾಂಕ್ ವಿವಾದ | ವಾಸ್ತವಿಕ ಕೌನ್ಸೆಲಿಂಗ್ ಪ್ರಕ್ರಿಯೆ ಆರಂಭಿಸುವುದಿಲ್ಲ: ಹೈಕೋರ್ಟ್ ಗೆ ಸರಕಾರದ ಮಾಹಿತಿ

Update: 2022-08-08 17:40 GMT

ಬೆಂಗಳೂರು, ಆ.8: ಪ್ರಸ್ತುತ ಸಾಲಿನಲ್ಲಿ ವೃತ್ತಿಪರ ಕೋರ್ಸ್‍ಗಳ ಪ್ರವೇಶಕ್ಕೆ ನಡೆದ ಸಾಮಾನ್ಯ ಪ್ರವೇಶ ಪರೀಕ್ಷೆಗೆ(CET) 2020-21ನೆ ಸಾಲಿನ ದ್ವಿತೀಯ ಪಿಯು ಪರೀಕ್ಷೆಯ ಅಂಕಗಳನ್ನು ಪರಿಗಣಿಸದೇ ಇರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ(ಕೆಇಎ) ಕ್ರಮವನ್ನು ಪ್ರಶ್ನಿಸಿ ಸಿಇಟಿ ಪುನರಾವರ್ತಿತ ವಿದ್ಯಾರ್ಥಿಗಳು ಸಲ್ಲಿಸಿದ್ದ ಅರ್ಜಿ ಸಂಬಂಧ ಮುಂದಿನ ವಿಚಾರಣೆವರೆಗೆ ಕೆಇಎ ವಾಸ್ತವಿಕ ಕೌನ್ಸೆಲಿಂಗ್ ಪ್ರಕ್ರಿಯೆ ಆರಂಭಿಸುವುದಿಲ್ಲ ಎಂದು ಹೈಕೋರ್ಟ್‍ಗೆ ರಾಜ್ಯ ಸರಕಾರವು ಹೇಳಿದೆ.  

ಚಿಕ್ಕಮಗಳೂರಿನ ಆರ್.ಈಶ್ವರ್ ಸೇರಿ ಎಂಟು ವಿದ್ಯಾರ್ಥಿಗಳು ಸಲ್ಲಿಸಿದ್ದ ರಿಟ್ ಅರ್ಜಿ ವಿಚಾರಣೆ ಸೋಮವಾರ ನ್ಯಾಯಮೂರ್ತಿ ಎಸ್.ಆರ್.ಕೃಷ್ಣಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠದಲ್ಲಿ ನಡೆಯಿತು.

ರಾಜ್ಯ ಸರಕಾರದ ಪರ ವಾದಿಸಿದ ವಕೀಲರು, ವೃತ್ತಿಪರ ಕೋರ್ಸ್‍ಗಳ ಪ್ರವೇಶಕ್ಕೆ ಸಂಬಂಧಿಸಿದಂತೆ ನೈಜ ಕೌನ್ಸೆಲಿಂಗ್ ಪ್ರಕ್ರಿಯೆ ಇನ್ನೂ ಪ್ರಾರಂಭವಾಗಿಲ್ಲ. ಸದ್ಯ ದಾಖಲೆ ಪರಿಶೀಲನೆ ನಡೆಯುತ್ತಿದೆ. ಮುಂದಿನ ವಿಚಾರಣೆಯವರೆಗೆ ಕೆಇಎ ವಾಸ್ತವಿಕ ಕೌನ್ಸೆಲಿಂಗ್ ಪ್ರಕ್ರಿಯೆ ಆರಂಭಿಸುವುದಿಲ್ಲ ಎಂದು ಪೀಠಕ್ಕೆ ತಿಳಿಸಿದರು. ಇದನ್ನು ಪರಿಗಣಿಸಿದ ನ್ಯಾಯಪೀಠವು, ವಾದದ ಹೇಳಿಕೆಯನ್ನು ದಾಖಲೆಯಲ್ಲಿ ಉಲ್ಲೇಖಿಸಲಾಗಿದೆ. ಅಲ್ಲದೆ, ಕೆಇಎ ದಾಖಲೆಗಳನ್ನು ಪರಿಶೀಲಿಸುವುದು ಅರ್ಜಿದಾರರ ಹಕ್ಕಿಗಾಗಲಿ, ವಾದಕ್ಕಾಗಲಿ ಪೂರ್ವಗ್ರಹಕ್ಕೆ ಎಡೆಮಾಡಿ ಕೊಡುವಂತಿರಬಾರದು ಎಂದು ಪೀಠವು ಆದೇಶದಲ್ಲಿ ತಿಳಿಸಿದೆ. ವಿಚಾರಣೆಯನ್ನು ಆ.18ಕ್ಕೆ ಮುಂದೂಡಿತು. 

ಪ್ರಕರಣದ ಹಿನ್ನೆಲೆ: ಜುಲೈ 30ರಂದು ಆದೇಶ ಹೊರಡಿಸಿದ್ದ ಕೆಇಎ ಪ್ರಸಕ್ತ ಸಾಲಿನಲ್ಲಿ ಉತ್ತೀರ್ಣರಾಗಿರುವ ಪಿಯು ವಿದ್ಯಾರ್ಥಿಗಳ ಅಂಕಗಳನ್ನಷ್ಟೇ ಸಿಇಟಿ ರ್ಯಾಂಕ್‍ಗೆ ಪರಿಗಣಿಸಲಾಗುವುದು. 2020-21ನೆ ಸಾಲಿನ ಪುನರಾವರ್ತಿತ ವಿದ್ಯಾರ್ಥಿಗಳ ಪಿಯು ಅಂಕಗಳನ್ನು ಸಿಇಟಿ ರ್ಯಾಂಕ್‍ಗೆ ಪರಿಗಣಿಸುವುದಿಲ್ಲ ಎಂದಿತ್ತು. ಸರಕಾರದ ಈ ಕ್ರಮ ಪ್ರಶ್ನಿಸಿ ಸಿಇಟಿ ಪುನರಾವರ್ತಿತ ವಿದ್ಯಾರ್ಥಿಗಳು ಹೈಕೋರ್ಟ್ ಮೆಟ್ಟಿಲೇರಿದ್ದಾರೆ. 

  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News