ರಾಜ್ಯದಲ್ಲಿ ಮತ್ತೆ ಸಿಎಂ ಬದಲಾವಣೆ ಎಂಬುದು ಕಾಂಗ್ರೆಸ್ ಕಾಣುತ್ತಿರುವ ಕನಸು: ಸಚಿವ ಸುಧಾಕರ್

Update: 2022-08-09 11:18 GMT

ಬೆಂಗಳೂರು: 'ರಾಜ್ಯದಲ್ಲಿ ಮತ್ತೆ ಮುಖ್ಯಮಂತ್ರಿ ಬದಲಾವಣೆ ಎಂಬುದು ಕಾಂಗ್ರೆಸ್ ಕಾಣುತ್ತಿರುವ ಕನಸು. ಬೊಮ್ಮಾಯಿ ಅವರ ದಕ್ಷ ನಾಯಕತ್ವದಲ್ಲಿ ಬಿಜೆಪಿ ಸರಕಾರ ಸುಭದ್ರವಾಗಿದೆ. ಆದರೆ ಕಾಂಗ್ರೆಸ್ ನ ಡಬಲ್ ಡೋರ್ ಬಸ್ಸಿನಿಂದ ಯಾರು, ಯಾರನ್ನು ಕೆಳಗಿಳಿಸುತ್ತಾರೆ ಎಂಬುದು ಸದ್ಯದಲ್ಲೇ ಗೊತ್ತಾಗುತ್ತದೆ' ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಕಾಂಗ್ರೆಸ್ ಗೆ ತಿರುಗೇಟು ನೀಡಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ''ಮುಖ್ಯಮಂತ್ರಿ ಸ್ಥಾನದ ಘನತೆ- ಗೌರವಗಳನ್ನು ಹಾಳುಗೆಡವಿದ್ದೇ ಕಾಂಗ್ರೆಸ್. ಇಂದಿರಾ ಗಾಂಧಿ, ರಾಜೀವ್ ಗಾಂಧಿ ಮನೆಯ ಗೇಟ್ ಕೀಪರ್ ಗಳ ರೀತಿ ಕಾಂಗ್ರೆಸ್ ಮುಖ್ಯಮಂತ್ರಿಗಳು ವರ್ತಿಸಿದ್ದು ಇತಿಹಾಸ. ಆದರೆ ಮುಖ್ಯಮಂತ್ರಿ ಗಾದಿಯ ಕನಸು ಕಾಣುತ್ತಿರುವ ರಾಜ್ಯದ ಇಬ್ಬರು ಹಿರಿಯ ನಾಯಕರು ಈಗಲೇ ಗಾಂಧಿ ಕುಟುಂಬದ ಗೇಟ್ ಕಾಯುತ್ತಿರುವುದು ವರ್ತಮಾನ'' ಎಂದು ಟೀಕಿಸಿದ್ದಾರೆ.

ಇದನ್ನೂ ಓದಿ... ರಾಜ್ಯದಲ್ಲಿ 3ನೇ ಸಿಎಂ ಪ್ರತಿಷ್ಠಾಪನೆಗೆ ಬಿಜೆಪಿ ಕಸರತ್ತು ನಡೆಸುತ್ತಿದೆ: ಕಾಂಗ್ರೆಸ್ 

''ಕಾಂಗ್ರೆಸ್ ಆಳ್ವಿಕೆ ಕಾಲದಲ್ಲಿ ಸಿಎಂ ಎಂದರೆ ಚೀಫ್ ಮಿನಿಸ್ಟರ್ ಬದಲು ಚೀಟಿ ಮಿನಿಸ್ಟರ್ ಎಂಬಂತಾಗಿತ್ತು. ದಿಲ್ಲಿ ಪೋಸ್ಟ್ ಮ್ಯಾನ್ ಗಳು ಕಳುಹಿಸಿದ ಚೀಟಿ ಆಧಾರದ ಮೇಲೆ ಕಾಂಗ್ರೆಸ್ ಬದಲಾಯಿಸಿದ ಮುಖ್ಯಮಂತ್ರಿಗಳ ಸಂಖ್ಯೆಯ ಲೆಕ್ಕ ಕೊಡಬೇಕೆ? '' ಎಂದು ಪ್ರಶ್ನೆ ಮಾಡಿದ್ದಾರೆ. 

''ಗಾಜಿನ ಮನೆಯಲ್ಲಿ ನಿಂತು ಅನ್ಯರತ್ತ ಕಲ್ಲು ತೂರುತ್ತಿರುವ ಕಾಂಗ್ರೆಸಿಗರ ಮನಃಸ್ಥಿತಿಯ ಬಗ್ಗೆ ಅಯ್ಯೋ ಎನ್ನಿಸುತ್ತಿದೆ. ದಿಲ್ಲಿ ಮಾಲೀಕರು ಕಳುಹಿಸಿದ ಚೀಟಿ ಆಧಾರದ ಮೇಲೆ ಮುಖ್ಯಮಂತ್ರಿಗಳನ್ನು ಬದಲಾಯಿಸಿದ ಘನ ಉದಾಹರಣೆ ನಿಮ್ಮ ಪಕ್ಷಕ್ಕೆ ಮಾತ್ರ ಇದೆ'' ಎಂದು ಕಾಂಗ್ರೆಸ್ ವಿರುದ್ಧ ಸಚಿವ ಸುಧಾಕರ್ ಕಿಡಿಗಾರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News