ಸಾಗರ; 'ಬಾವುಟ ಬೇಡ, ಭೂಮಿಹಕ್ಕು ಕೊಡಿ': ಆ. 15ರಂದು ಮಲೆನಾಡು ರೈತ ಹೋರಾಟ ವೇದಿಕೆಯಿಂದ ಪ್ರತಿಭಟನೆಗೆ ನಿರ್ಧಾರ

Update: 2022-08-09 11:21 GMT
(ಸುದ್ದಿಗೋಷ್ಟಿಯಲ್ಲಿ ಮಾತನಾಡುತ್ತಿರುವ ರೈತ ಮುಖಂಡರು)

ಸಾಗರ,ಆ.9: ಜಿಲ್ಲೆಯ ಮೂರು ಲಕ್ಷಕ್ಕೂ ಹೆಚ್ಚು ಕುಟುಂಬಗಳಿಗೆ ಭೂಮಿಹಕ್ಕು ನೀಡದೆ ಸತಾಯಿಸುತ್ತಿರುವ ರಾಜ್ಯ ಸರ್ಕಾರದ ಧೋರಣೆ ಖಂಡಿಸಿ ಆ. 15ರಂದು ಮಲೆನಾಡು ರೈತ ಹೋರಾಟ ವೇದಿಕೆ ವತಿಯಿಂದ ಬಾವುಟ ಬೇಡ, ಭೂಮಿಹಕ್ಕು ಕೊಡಿ ಎನ್ನುವ ವಿನೂತನ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ವೇದಿಕೆಯ ಜಿಲ್ಲಾ ಸಂಚಾಲಕ ತೀ.ನ.ಶ್ರೀನಿವಾಸ್ ತಿಳಿಸಿದ್ದಾರೆ. 

ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಆಗಸ್ಟ್ 14ರೊಳಗೆ ಶರಾವತಿ ಮುಳುಗಡೆ ಸಂತ್ರಸ್ತರಿಗೆ, ಅರಣ್ಯಭೂಮಿ ವಾಸಿಗಳಿಗೆ, ಬಗರ್‍ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ನೀಡಬೇಕು. ಇಲ್ಲವಾದಲ್ಲಿ ಜಿಲ್ಲೆಯ ಸಂತ್ರಸ್ತ 3ಲಕ್ಷಕ್ಕೂ ಅಧಿಕ ಕುಟುಂಬಗಳು ಮನೆಯ ಮೇಲೆ ರಾಷ್ಟ್ರಧ್ವಜ ಹಾರಿಸದೆ ತಮ್ಮ ಪ್ರತಿರೋಧ ವ್ಯಕ್ತಪಡಿಸುವ ಮೂಲಕ ಸ್ವಾತಂತ್ರ್ಯ ಅಮೃತ ಮಹೋತ್ಸವವನ್ನು ಬಹಿಷ್ಕರಿಸುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಿದರು. 

ನಮಗೆ ಬಾವುಟದ ಮಹತ್ವವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರ ತಿಳಿಸುವ ಅಗತ್ಯವಿಲ್ಲ. ನಮ್ಮ ಎದೆಯಲ್ಲಿ ಬಾವುಟದ ಬಗ್ಗೆ ಅಪಾರ ಗೌರವವಿದೆ. ನಮಗೆ ಬೇಕಾಗಿರುವುದು ಭೂಮಿಹಕ್ಕು. ಕೇಂದ್ರ ಮತ್ತು ರಾಜ್ಯದಲ್ಲಿ ಎರಡೂ ಕಡೆ ಬಿಜೆಪಿ ಸರ್ಕಾರ ಇದ್ದರೂ ಅನೇಕ ವರ್ಷಗಳಿಂದ ನಮ್ಮ ಸಮಸ್ಯೆಯನ್ನು ಜೀವಂತವಾಗಿ ಇರಿಸುವ ಮೂಲಕ ನಮ್ಮನ್ನು ಸತಾಯಿಸುತ್ತಿರುವ ಕ್ರಮ ಖಂಡನೀಯ. ಈ ಹಿನ್ನೆಲೆಯಲ್ಲಿ ಆ. 15ರಂದು ಬಾವುಟ ಬೇಡ, ಭೂಮಿಹಕ್ಕು ಕೊಡಿ ಎಂಬ ಹಕ್ಕೊತ್ತಾಯದ ಕರೆ ಜಿಲ್ಲಾದ್ಯಂತ ನೀಡಲಾಗಿದ್ದು, ಸಂತ್ರಸ್ತ ರೈತರು ಇದಕ್ಕೆ ಕೈಜೋಡಿಸಬೇಕು ಎಂದು ಕರೆ ನೀಡಿದರು. 

''ಶರಾವತಿ ಮುಳುಗಡೆ ಸಂತ್ರಸ್ತರಿಗೆ ಭೂಮಿಹಕ್ಕು ಕೊಡಲು 2021ರ ಸೆಪ್ಟೆಂಬರ್ 23ಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸಭೆಯಲ್ಲಿ ತೀರ್ಮಾನ ಕೈಗೊಂಡು ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲು ತೀರ್ಮಾನಿಸಲಾಗಿತ್ತು. ಈ ತನಕ ಪ್ರಸ್ತಾವನೆ ಕೇಂದ್ರಕ್ಕೆ ಸಲ್ಲಿಸಿಲ್ಲ. ಸಭೆಯ ನಡಾವಳಿಯನ್ನು ದಾಖಲಿಸುವ ಕೆಲಸ ಸಹ ಸರ್ಕಾರ ಮಾಡಿಲ್ಲ. ನಾಡಿಗೆ ಬೆಳಕು ನೀಡಿದ ಸಂತ್ರಸ್ತರಿಗೆ 9600 ಎಕರೆ ಭೂಮಿ ಕೊಡಲು ಡಿನೋಟಿಫಿಕೇಶನ್ ಮಾಡಲಾಗಿದೆ. ಆದರೆ ನ್ಯಾಯಾಲಯ ಕೇಂದ್ರದ ಅನುಮತಿ ಪಡೆಯದೆ ಈ ನಿರ್ಣಯ ಕೈಗೊಳ್ಳಲಾಗಿದೆ. ಇದು ಕಾನೂನುಬಾಹಿರ ಎಂದು 2021ರ ಮಾರ್ಚ್ 4ಕ್ಕೆ ತೀರ್ಪು ನೀಡಿದೆ. ಆದರೆ 18 ತಿಂಗಳು ಕಳೆದರೂ ರಾಜ್ಯ ಸರ್ಕಾರದ ವಕೀಲರು ಸಂತ್ರಸ್ತ ರೈತರ ಪರವಾಗಿ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿಲ್ಲ ಎಂದು ದೂರಿದ ಅವರು, ಕಸ್ತೂರಿ ರಂಗನ್ ವರದಿ ಜಾರಿಗೆ ಬೇಡ ಎಂದು ನವದೆಹಲಿಗೆ ನಿಯೋಗ ಹೋಗಿದ್ದ ಮಲೆನಾಡಿನ ಸಂಸದರು ಮತ್ತು ಶಾಸಕರಿಗೆ ಶರಾವತಿ ಮುಳುಗಡೆ ಸಂತ್ರಸ್ತರ ಕಷ್ಟ ಕಾಣಿಸದೆ ಇರುವುದು ದುರದೃಷ್ಟಕರ'' ಎಂದರು. 

''ಒಂದರ್ಥದಲ್ಲಿ ಜಿಲ್ಲೆಯ ಸಚಿವರು, ಶಾಸಕರು ತುರ್ತು ನಿಗಾ ಘಟಕದಲ್ಲಿ ಇರುವಂತೆ ವರ್ತಿಸುತ್ತಿದ್ದಾರೆ. ಇವರಿಗೆ ಮಲೆನಾಡು ಭಾಗದ ರೈತರ ಬಗ್ಗೆ ಕಿಂಚಿತ್ ಕಾಳಜಿ ಇಲ್ಲ. ನ್ಯಾಯಾಲಯಕ್ಕೆ ವಾಸ್ತವ ಸ್ಥಿತಿಯನ್ನು ವಿವರಿಸಿ ಸಂತ್ರಸ್ತ ರೈತರನ್ನು ರಕ್ಷಣೆ ಮಾಡುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಅರಣ್ಯಹಕ್ಕು ಕಾಯ್ದೆಯಡಿ ಭೂಹಕ್ಕು ಕೋರಿ ಅರ್ಜಿ ಸಲ್ಲಿಸಿದ್ದ 60ಸಾವಿರ ಅರ್ಜಿಯನ್ನು ವಜಾ ಮಾಡಲಾಗಿದೆ. ನಮ್ಮನ್ನು ಪ್ರತಿನಿಧಿಸುವ ಜನಪ್ರತಿನಿಧಿಗಳಿಗೆ ಇಚ್ಛಾಸಕ್ತಿಯ ಕೊರತೆ ಇದೆ. ಭೂಕಬಳಿಕೆ ಹಿನ್ನೆಲೆಯಲ್ಲಿ ಅಮಾಯಕ ರೈತರಿಗೆ ನೋಟಿಸ್ ನೀಡಲಾಗುತ್ತಿದೆ. ವರಾಹಿ, ಚಕ್ರ, ಸಾವೆಹಕ್ಲು ಮುಳುಗಡೆ ಸಂತ್ರಸ್ತರಿಗೆ ನ್ಯಾಯ ಕೊಡಿಸಲು ಗೃಹ ಸಚಿವ ಅರಗ ಜ್ಞಾನೇಂದ್ರ 20ಕ್ಕೂ ಹೆಚ್ಚು ಸಭೆಗಳನ್ನು ನಡೆಸಿದರೂ ಪ್ರಯೋಜನವಾಗಿಲ್ಲ. ಒಟ್ಟಾರೆ ಸರ್ಕಾರದ ಭೂಹೀನರ ವಿರುದ್ದ ನೀತಿ ಅತ್ಯಂತ ಮಾರಕವಾಗಿ ಪರಿಣಮಿಸಿದೆ'' ಎಂದರು. 

ಗೋಷ್ಟಿಯಲ್ಲಿ ವೇದಿಕೆ ಪ್ರಮುಖರಾದ ಪರಶುರಾಮ್, ಅಶೋಕ್, ನಾಗರಾಜ್, ವೀರೇಶಪ್ಪ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News