VIDEO- ಕಡೂರು: ಹಳ್ಳದಲ್ಲಿ ಕೊಚ್ಚಿ ಹೋಗುತ್ತಿದ್ದ ಕಾರಿನಲ್ಲಿದ್ದವರನ್ನು ರಕ್ಷಣೆ ಮಾಡಿದ ಸ್ಥಳೀಯರು

Update: 2022-08-09 13:56 GMT

ಕಡೂರು, ಆ.9: ತಾಲೂಕಿನಾದ್ಯಂತ ಮಳೆಯ ಅಬ್ಬರ ಹೆಚ್ಚಾಗಿದ್ದು, ಹಳ್ಳದಲ್ಲಿ ಕೊಚ್ಚಿ ಹೋಗುತ್ತಿದ್ದ ಕಾರೊಂದನ್ನು ಜೆಸಿಬಿ ಸಹಾಯದಿಂದ ಮೇಲೆತ್ತಿದ ಸ್ಥಳೀಯರು ಕಾರಿನಲ್ಲಿದ್ದ ಇಬ್ಬರ ಪ್ರಾಣ ಕಾಪಾಡಿರುವ ಘಟನೆ ಮಂಗಳವಾರ ಮಂಜಾನೆ ತಾಲೂಕಿನ ಪಿಳ್ಳೇನಹಳ್ಳಿ ಗ್ರಾಮದಲ್ಲಿ ವರದಿಯಾಗಿದೆ.

ತಾಲೂಕಿನ ಸಖರಾಯಪಟ್ಟಣ ಸಮೀಪದ ಪಿಳ್ಳೇನಹಳ್ಳಿಯ ಮಸಣದಹಳ್ಳದಲ್ಲಿ ರಸ್ತೆಯ ಮೇಲೆ 5 ಅಡಿಯಷ್ಟು ಎತ್ತರಕ್ಕೆ ನೆರೆ ನೀರು ರಭಸವಾಗಿ ಹರಿಯುತ್ತಿದ್ದು, ಕಾರು ಚಾಲಕನೋರ್ವ ಹುಚ್ಚಾಟ ಮಾಡಲು ಹೋಗಿ ಅಪಾಯಕ್ಕೆ ಸಿಲುಕಿಕೊಂಡಿದ್ದ. ತುಂಬಿ ಹರಿಯುತ್ತಿದ್ದ ಹಳ್ಳ ದಾಟಲು ಕಾರನ್ನು ನೀರಿಗಿಳಿಸಿದ್ದು, ಈ ವೇಳೆ ನೀರಿನ ರಭಸಕ್ಕೆ ಕಾರು ಕೊಚ್ಚಿ ಹೋಗಲಾರಂಭಿಸಿತ್ತು.

ಇದನ್ನು ಗಮನಿಸಿದ ಸ್ಥಳೀಯರು ಸಿನಿಮೀಯ ರೀತಿಯಲ್ಲಿ ಕಾರಿನ ಗ್ಲಾಸ್ ಒಡೆದು ಹಗ್ಗ ಕಟ್ಟಿ ಜೆಸಿಬಿ ಮೂಲಕ ಕಾರನ್ನು ಮೇಲೆತ್ತಿ ಕಾರಿನಲ್ಲಿದ್ದ ಇಬ್ಬರನ್ನು ರಕ್ಷಣೆ ಮಾಡಿದ್ದಾರೆ. ಸ್ಥಳೀಯರ ಸಮಯಪ್ರಜ್ಞೆಯಿಂದಾಗಿ ನೀರಿನಲ್ಲಿ ಪ್ರಾಣ ಕಳೆದುಕೊಳ್ಳ ಬೇಕಿದ್ದ ಇಬ್ಬರ ಪ್ರಾಣ ಉಳಿದಿದ್ದು, ರಭಸವಾಗಿ ಹರಿಯುವ ನೀರಿನಲ್ಲಿ ಕಾರು ಚಲಾಯಿಸಿದ ಚಾಲಕನ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಇಬ್ಬರ ಜೀವ ಉಳಿಸಿದ ಸ್ಥಳೀಯರ ಕಾರ್ಯಕ್ಕೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗಿದೆ. ಮಾಹಿತಿ ತಿಳಿದ ತಕ್ಷಣ ಸಖರಾಯಪಟ್ಟಣ ಪೊಲೀಸರು ಸ್ಥಲಕ್ಕೆ ಧಾವಿಸಿ ಸ್ಥಳ ಪರಿಶೀಲನೆ ಮಾಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಕಾರು ಕೇತುಮಾರನಹಳ್ಳಿ ಗ್ರಾಮದ ಗಿರೀಶ್ ಎಂಬವರಿಗೆ ಸೇರಿದ್ದು ಎಂಬುದನ್ನು ಖಚಿತಪಡಿಸಿದ್ದಾರೆ.

ಹಳ್ಳದಲ್ಲಿ ನೀರಿನ ಹರಿವು ಹೆಚ್ಚಾದ ತಕ್ಷಣ ಮುನ್ನೆಚ್ಚರಿಕೆಯ ಕ್ರಮವಾಗಿ ರೈಲ್ವೇ ಅಂಡರ್ ಪಾಸ್ ಬಳಿ ಬ್ಯಾರಿಕೇಡ್ ಹಾಕಲಾಗಿತ್ತು. ಸಾರ್ವಜನಿಕರು ಬ್ಯಾರಿಕೇಡ್ ಪಕ್ಕಕ್ಕೆ ಸರಿಸಿ ಓಡಾಡುತ್ತಿದ್ದರು. ಕಾರು ಚಾಲಕ ಕೂಡಾ ಹರಿಯುವ ನೀರಲ್ಲಿ ಸಾಹಸ ಪ್ರದರ್ಶಿಸಲು ಹೋಗಿ ಸಾವಿನ ದವಡೆಗೆ ಸಿಲುಕಿದ್ದ ಎಂದು ಸಖರಾಯಪಟ್ಟಣ ಪೊಲೀಸ್ ಠಾಣೆಯ ಪಿಎಸ್ಸೈ ನವೀನ್ ತಿಳಿಸಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News