'ಅಧಿಕಾರಕ್ಕಾಗಿ ಎಲ್ಲಿಗೆ ಬೇಕಾದರೂ ಜಂಪ್ ಮಾಡುವ ಸುಧಾಕರ್': ಕಾಂಗ್ರೆಸ್ ತಿರುಗೇಟು

Update: 2022-08-09 14:41 GMT

ಬೆಂಗಳೂರು, ಆ.9: ಅವಕಾಶವಾದಿ ಸಚಿವ ಡಾ.ಕೆ.ಸುಧಾಕರ್ ಅವರೇ, ಇತ್ತೀಚಿನವರೆಗೂ ಗಾಂಧಿ ಪರಿವಾರವನ್ನು ಹೊಗಳುತ್ತಿದ್ದಿರಿ, ಈಗ ‘ನಾಗಪುರದ ನೌಕರರ ಸೇನೆ'ಗೆ ಸೇರಿದ ಮಾತ್ರಕ್ಕೆ ತಮ್ಮನ್ನು ನಡುಮನೆಗೆ ಬಿಟ್ಟುಕೊಳ್ಳುವುದಿಲ್ಲ ಕೇಶವಕೃಪ. ಸಮಾಧಾನವಿರಲಿ. ಕೋವಿಡ್ ಹೆಸರಲ್ಲಿ ಲೂಟಿ ನಡೆಸಿ ಸಾರ್ವಜನಿಕ ಲೆಕ್ಕಪತ್ರ ಸಮಿತಿ(ಪಿಎಸಿ)ಗೆ ಲೆಕ್ಕ ನೀಡದೆ ತಲೆತಪ್ಪಿಸಿಕೊಂಡ ಮಾತ್ರಕ್ಕೆ ತಾವು ‘ಸಾಚಾ' ಆಗಲಾರಿರಿ ಎಂದು ಕಾಂಗ್ರೆಸ್ ತಿರುಗೇಟು ನೀಡಿದೆ.

ಈ ಸಂಬಂಧ ಟ್ವೀಟ್‍ಗಳನ್ನು ಮಾಡಿರುವ ಕಾಂಗ್ರೆಸ್, ಅಧಿಕಾರಕ್ಕಾಗಿ ಎಲ್ಲಿಗೆ ಬೇಕಾದರೂ ಜಂಪ್ ಮಾಡುವ ಸಿದ್ಧಾಂತವಿಲ್ಲದ ‘ಜಂಪಿಂಗ್ ಸ್ಟಾರ್' ಸುಧಾಕರ್ ಅವರೇ, ಈ ಸರಕಾರದ ಭ್ರಷ್ಟಾಚಾರ ಪರ್ವದಲ್ಲಿ ನಿಮ್ಮದೇ ಸಿಂಹಪಾಲು, ಈ ಸರಕಾರಕ್ಕೆ ಸೋಂಕಿತ ಸರಕಾರ ಎಂಬ ಬಿರುದು ಬಂದಿದ್ದು ನಿಮ್ಮಿಂದಲೇ ಅಲ್ಲವೇ? ಕೋವಿಡ್ ಸಂದರ್ಭದಲ್ಲಿ ಹೆಣದ ಮೇಲೆ ಹಣ ಮಾಡಿದ ತಮಗೆ ಪಾಪಪ್ರಜ್ಞೆ ಕಾಡದಿರುವುದು ದುರಂತ ಎಂದು ಆಕ್ರೋಶ ವ್ಯಕ್ತಪಡಿಸಿದೆ.

ಇದನ್ನೂ ಓದಿ: ರಾಜ್ಯದಲ್ಲಿ ಮತ್ತೆ ಸಿಎಂ ಬದಲಾವಣೆ ಎಂಬುದು ಕಾಂಗ್ರೆಸ್ ಕಾಣುತ್ತಿರುವ ಕನಸು: ಸಚಿವ ಸುಧಾಕರ್ 

ಜನ ಸಾಯುವಾಗ ಸ್ವಿಮ್ಮಿಂಗ್ ಪೂಲ್‍ನಲ್ಲಿ ಮೋಜಿಗೆ ಇಳಿದಿದ್ದ ‘ಸ್ವಿಮ್ಮಿಂಗ್ ಸ್ಟಾರ್' ಸುಧಾಕರ್ ಅವರೇ, ಬೆಲ್ಲ ಇರುವಲ್ಲಿ ಇರುವೆ ಎಂಬಂತೆ ಯಾರೇ ಸಿಎಂ ಆದರೂ ಅವರ ಹಿಂದೆ ಸುತ್ತುವುದು ನಿಮ್ಮ ಹಳೆ ಚಾಳಿ. ತಾವೆಷ್ಟೇ ನವರಂಗಿ ನಾಟಕವಾಡಿದರೂ ಬಿಜೆಪಿಯಲ್ಲಿ ತಾವು ಸದಾ ‘ವಲಸಿಗ'ನೇ. ಅಂದಹಾಗೆ, ಮುಂದೆ ಅಧಿಕಾರಕ್ಕಾಗಿ ಯಾವ ಕಡೆ ನಿಮ್ಮ ಜಂಪ್? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

ಮೊದಲ ಸಿಎಂ-2,500 ಕೋಟಿ, ಎರಡನೇ ಸಿಎಂ-2,500 ಕೋಟಿ, ಮೂರನೇ ಸಿಎಂ-2,500 ಕೋಟಿ, ಒಟ್ಟು ಸಂಪಾದನೆ-7,500 ಕೋಟಿ. ಬಿಜೆಪಿ ಪಕ್ಷದ ಹೈಕಮಾಂಡ್ ಸಂಪಾದನೆಗೆ ಅದ್ಬುತ ದಾರಿ ಕಂಡುಕೊಂಡಿದೆ. ಬಸವರಾಜ ಬೊಮ್ಮಾಯಿ ಅವರೇ, ನಿಮ್ಮ ಕಂತು ತೀರಿತೇ? ಅಥವಾ 40 ಪರ್ಸೆಂಟ್ ಕಮಿಷನ್‍ನಲ್ಲಿ ಹೈಕಮಾಂಡ್ ಪಾಲು ತಲುಪಿಸಲು ವಿಫಲರಾದ್ರಾ? ಎಂದು ಕಾಂಗ್ರೆಸ್ ಟೀಕಿಸಿದೆ.

ಹಿಂದೆ ಸಿ.ಟಿ.ರವಿ, ಡಾ.ಸಿ.ಎನ್.ಅಶ್ವತ್ಥ ನಾರಾಯಣ, ಆರ್.ಅಶೋಕ್, ಉಮೇಶ್ ಕತ್ತಿ, ಬಸನಗೌಡ ಪಾಟೀಲ್ ಯತ್ನಾಳ್ ಅವರುಗಳು ಸಿಎಂ ಆಸೆಯನ್ನು ಬಿಚ್ಚಿಟ್ಟಿದ್ದರು. ಈಗ ಬಿಜೆಪಿ ಮಾಜಿ ಶಾಸಕ ಸುರೇಶ್ ಗೌಡ ಸಿಎಂ ಬದಲಾವಣೆಯ ಸುದ್ದಿಗೆ ಅಧಿಕೃತ ಮುದ್ರೆ ಒತ್ತಿದ್ದಾರೆ. ಜನೋತ್ಸವ ಮಾಡಲಾಗದ ಬಸವರಾಜ ಬೊಮ್ಮಾಯಿ ಅವರು ಈಗ ಆತಂಕೋತ್ಸವ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ.

ಬೊಮ್ಮಾಯಿಯವರ ಆಡಳಿತದಲ್ಲಿ ‘ಆಕ್ಷನ್' ಇಲ್ಲದಕ್ಕೆ ಸಿಎಂ ಬದಲಾವಣೆಯ ‘ರಿಯಾಕ್ಷನ್' ಸೃಷ್ಟಿಯಾಗಿದೆ. ಪ್ರವೀಣ್ ಹತ್ಯೆ, ಕಾರ್ಯಕರ್ತರ ರಾಜೀನಾಮೆ, ಬಲಪಂಥೀಯ ಸಂಘಟನೆಗಳ ಆಕ್ರೋಶ, ಗೃಹಸಚಿವರ ಮನೆ ಮೇಲೆ ದಾಳಿ, ಎಲ್ಲವೂ ರಾಜ್ಯ ಬಿಜೆಪಿ ಒಳಗಿನ ಅತೃಪ್ತ ಆತ್ಮಗಳ ಕುರ್ಚಿ ಕಸಿಯುವ ಪೂರ್ವನಿಯೋಜಿತ ಕೃತ್ಯಗಳಾಗಿರಬಹುದೇ ಬಸವರಾಜ ಬೊಮ್ಮಾಯಿ ಅವರೇ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

ಸಿದ್ದರಾಮಯ್ಯನವರ ಅಮೃತ ಮಹೋತ್ಸವದಲ್ಲಿ ಕಾಂಗ್ರೆಸ್‍ಗೆ ಸಿಕ್ಕ ಅಭೂತಪೂರ್ವ ಜನಬೆಂಬಲ, ಕಾಂಗ್ರೆಸ್ ಆಯೋಜಿಸಿರುವ ಸ್ವಾತಂತ್ರ್ಯದ ನಡಿಗೆಗೆ ಸಿಗುತ್ತಿರುವ ಅಪರಿಮಿತ ಯಶಸ್ಸನ್ನು ಕಂಡ ಬಿಜೆಪಿ ಕಂಗಾಲಾಗಿ ಹೋಗಿದೆ. ಚುನಾವಣೆಗೆ ಹೋಗಲು ಮುಖವಿಲ್ಲದ ಕಾರಣ ಸಿಎಂ ಕುರ್ಚಿಯಲ್ಲಿ ಬೇರೆ ಪಪ್ಪೆಟ್ ಸಿಎಂ ಕೂರಿಸಲು ಕಸರತ್ತು ನಡೆಸುತ್ತಿದೆ ರಾಜ್ಯ ಬಿಜೆಪಿ ಎಂದು ಕಾಂಗ್ರೆಸ್ ಟೀಕಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News