ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಇಲ್ಲ, ಕಾಂಗ್ರೆಸ್ ಟ್ವೀಟ್ ಹಾಸ್ಯಾಸ್ಪದ: ಸಚಿವ ಆರ್.ಅಶೋಕ್

Update: 2022-08-09 14:43 GMT

ಬೆಂಗಳೂರು, ಆ.9: ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಯಾಗುವ ಪ್ರಶ್ನೆಯೇ ಇಲ್ಲ. ಮುಂದಿನ ವಿಧಾನಸಭೆ ಚುನಾವಣೆಯಲ್ಲೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ನೇತೃತ್ವ ವಹಿಸಲಿದ್ದಾರೆ ಎಂದು ಕಂದಾಯ ಸಚಿವ ಆರ್.ಅಶೋಕ್ ಸ್ಪಷ್ಟಪಡಿಸಿದ್ದಾರೆ.

ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಮೂರನೆ ಮುಖ್ಯಮಂತ್ರಿ ಪ್ರತಿಷ್ಠಾಪನೆ ಮಾಡಲಾಗುತ್ತದೆ ಎಂದು ಕಾಂಗ್ರೆಸ್ ಪಕ್ಷ ಮಾಡಿರುವ ಟ್ವೀಟ್‍ಗೆ ಆಕ್ರೋಶ ವ್ಯಕ್ತಪಡಿಸಿದರು. 

ಕಾಂಗ್ರೆಸ್ ಪಕ್ಷದವರು ಮುಖ್ಯಮಂತ್ರಿ ವಿಚಾರದಲ್ಲಿ ಮಾಡಿರುವ ಟ್ವೀಟ್ ಹಾಸ್ಯಾಸ್ಪದ. ರಾಜ್ಯ ಸರಕಾರದ ನೇತೃತ್ವವನ್ನು ವಹಿಸಿರುವ ಬಸವರಾಜ ಬೊಮ್ಮಾಯಿ ಅವರೇ ಈಗಲೂ ಮುಖ್ಯಮಂತ್ರಿ, ಮುಂದಿನ ಚುನಾವಣೆಯನ್ನು ಅವರ ನೇತೃತ್ವದಲ್ಲಿ ಎದುರಿಸುತ್ತೇವೆ. ನಂತರವೂ ಅವರೇ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಅಶೋಕ್ ಹೇಳಿದರು.

ಕಾಂಗ್ರೆಸ್ ಪಕ್ಷದಲ್ಲಿ ಯಾರು ನಾಯಕರು ಎಂಬ ವಿಚಾರದಲ್ಲಿ ಪ್ರತಿನಿತ್ಯ ಜಗಳ ನಡೆಯುತ್ತಿದೆ. ಆದರೆ, ಬಿಜೆಪಿಯಲ್ಲಿ ನಾಯಕತ್ವದ ವಿಚಾರದಲ್ಲಿ ಯಾವುದೆ ಗೊಂದಲಗಳು ಇಲ್ಲ. ಇತ್ತೀಚೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಬೆಂಗಳೂರಿಗೆ ಬಂದಿದ್ದಾಗಲೂ ರಾಜ್ಯ ಸರಕಾರದ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News