ಲೋಕಾಯುಕ್ತ ಲಂಚ ಪ್ರಕರಣ: ದೂರುದಾರ, ಪೊಲೀಸ್ ಅಧಿಕಾರಿಗಳ ಹೇಳಿಕೆ ದಾಖಲು

Update: 2022-08-09 15:20 GMT

ಬೆಂಗಳೂರು, ಆ.9: ಮಾಜಿ ಲೋಕಾಯುಕ್ತ ನ್ಯಾ.ಭಾಸ್ಕರ್ ರಾವ್ ಹಾಗೂ ಪುತ್ರನ ಲಂಚ ಪಡೆದ ಆರೋಪ ಪ್ರಕರಣ ಸಂಬಂಧ ಲೋಕಾಯುಕ್ತ ವಿಶೇಷ ಕೋರ್ಟ್‍ನಲ್ಲಿ ವಿಚಾರಣೆ ಹಂತ ಮಹತ್ವದ ಘಟ್ಟಕ್ಕೆ ತಲುಪಿದ್ದು, ದೂರುದಾರ ಹಾಗೂ ಪೊಲೀಸ್ ಅಧಿಕಾರಿಗಳ ಹೇಳಿಕೆ ದಾಖಲಿಸಿಕೊಂಡಿದೆ. 

ಲೋಕಾಯುಕ್ತ ಹಾಗೂ ಆತನ ಪುತ್ರ ಅಶ್ವಿನ್ ರಾವ್ ಹಾಗೂ ಆತನ ಸಹಚರರು 2015ರ ಮೇ 5ರಂದು ದೂರುದಾರನಾಗಿರುವ ಬೆಂಗಳೂರು ನಗರ ಜಿಲ್ಲಾ ಪಂಚಾಯತ್ ಎಕ್ಸಿಕ್ಯೂಟಿವ್ ಇಂಜಿನಿಯರ್ ಎಂ.ಎನ್.ಕೃಷ್ಣಮೂರ್ತಿಗೆ ಧಮ್ಕಿ ಹಾಕಿ 1 ಕೋಟಿ ರೂ. ಲಂಚ ಕೇಳಿದ ಆರೋಪ ಸಂಬಂಧ ದೂರು ನೀಡಿದ್ದರು. ಈ ದೂರುದಾರರಾದ ಕೃಷ್ಣಮೂರ್ತಿ ಅವರ ಹೇಳಿಕೆಯನ್ನು ಲೋಕಾಯುಕ್ತ ವಿಶೇಷ ಕೋರ್ಟ್ ದಾಖಲಿಸಿಕೊಂಡಿದೆ.  

ಈ ಹಿಂದೆ ಲೋಕಾದಲ್ಲಿ ಎಸ್ಪಿಯಾಗಿದ್ದ ಮಹಿಳಾ ಐಪಿಎಸ್ ಅಧಿಕಾರಿ ಸೋನಿಯಾ ನಾರಂಗ್ ನ್ಯಾಯಾಲಯಕ್ಕೆ ಹಾಜರಾಗಿ ತಮ್ಮ ಹೇಳಿಕೆ ನೀಡಿದ್ದಾರೆ. ಪ್ರಸ್ತುತ್ತ ಕೇಂದ್ರ ಸೇವೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. 1 ಕೋಟಿ ರೂಪಾಯಿ ಲಂಚಕ್ಕೆ ಬೇಡಿಕೆಯಿಟ್ಟ ಸಂಬಂಧ 2015ರ ಜೂನ್‍ನಲ್ಲಿ ಕೃಷ್ಣಮೂರ್ತಿ ಎಂಬುವರು ಲೋಕಾಯುಕ್ತ ಜಂಟಿ ಆಯುಕ್ತ ಕೃಷ್ಣರಾವ್ ಎಂಬುವರು ನನಗೆ 1 ಕೋಟಿ ರೂಪಾಯಿ ನೀಡುವಂತೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಧಮ್ಕಿ ಹಾಕಿದ್ದಾರೆ ಎಂದು ನನ್ನ ಬಳಿ ಮೌಖಿಕವಾಗಿ ಕೃಷ್ಣಮೂರ್ತಿ ದೂರು ನೀಡಿದ್ದರು. 

ಈ ಹಿನ್ನೆಲೆಯಲ್ಲಿ ಲಿಖಿತವಾಗಿ ಬರೆದು ದೂರು ನೀಡುವಂತೆ ತಿಳಿಸಿದ್ದೆ. ಆಯಿತು ಎಂದು ತಿಳಿಸಿದ್ದ ಅವರು, ಕೆಲ ದಿನಗಳ ಬಳಿಕ ಕಚೇರಿಗೆ ಬಂದು ಲಿಖಿತವಾಗಿ ದೂರು ನೀಡಿದ ಮೇರೆಗೆ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ನಡೆಸಿದ್ದೆವು ಎಂದು ಕೋರ್ಟ್ ಮುಂದೆ ಹೇಳಿಕೆ ನೀಡಿದ್ದಾರೆ. ಇದೇ ವೇಳೆ, ಅಂದು ಕರ್ತವ್ಯದಲ್ಲಿದ್ದ ಡಿವೈಎಸ್ಪಿ ಹಾಗೂ ಇನ್‍ಸ್ಪೆಕ್ಟರ್‍ಗಳ ಹೇಳಿಕೆಯನ್ನು ಕೋರ್ಟ್ ದಾಖಲಿಸಿಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News