ಸ್ವಾತಂತ್ರ್ಯ ಅಮೃತ ಮಹೋತ್ಸವ: ತ್ರಿವರ್ಣದಲ್ಲಿ ಮಿಂಚುತ್ತಿರುವ ಮಡಿಕೇರಿ ಕೋಟೆ

Update: 2022-08-09 17:55 GMT

ಮಡಿಕೇರಿ ಆ.9 : ಅಮೃತ ಮಹೋತ್ಸವದ ಸಂಭ್ರಮಾಚರಣೆಯ ಸ್ವಾತಂತ್ರ್ಯೋತ್ಸವವನ್ನು ಮತ್ತಷ್ಟು  ಸುಂದರವಾಗಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಮಡಿಕೇರಿಯ ಐತಿಹಾಸಿಕ ಕೋಟೆಯನ್ನು ‘ಕೇಸರಿ-ಬಿಳಿ-ಹಸಿರು’ ಬಣ್ಣಗಳ ವಿದ್ಯುದ್ದೀಪಗಳಿಂದ ವರ್ಣರಂಜಿತಗೊಳಿಸಿದೆ.

ಹಾಲೇರಿ ರಾಜವಂಶಸ್ಥರ ಮಡಿಕೇರಿಯ ಕೋಟೆ ಅರಮನೆಯ ಆವರಣದಲ್ಲಿ ಈ ಹಿಂದಿನಿಂದಲೂ ಸ್ವಾತಂತ್ರ್ಯೋತ್ಸವವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಅಮೃತ ಮಹೋತ್ಸವದ ಸ್ವಾತಂತ್ರ್ಯ ಸಂಭ್ರಮ ಕೂಡ ಇಲ್ಲೇ ಅದ್ಧೂರಿಯಾಗಿ ನಡೆಯಲಿದೆ. ಇದಕ್ಕೆ ನಾಡಿನ ಜನತೆ ಕೈಜೋಡಿಸುವ ಮೂಲಕ ಮನೆ ಮನೆಗಳಲ್ಲಿ ತ್ರ್ರಿವರ್ಣ ಧ್ವಜ ರಾರಾಜಿಸಲಿದೆ. ಕೇಂದ್ರ ಸರ್ಕಾರ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ವಿಶಿಷ್ಟಗೊಳಿಸುವ ನಿಟ್ಟಿನಲ್ಲಿ ಈಗಾಗಲೇ ಆ.13 ರಿಂದ ಮನೆ ಮನೆಗಳಲ್ಲಿ ‘ತ್ರಿವರ್ಣ ಧ್ವಜ’ ಆರೋಹಣಕ್ಕೆ ದೇಶದ ಜನತೆಗೆ ಕರೆ ನೀಡಿದೆ. 

ಇದಕ್ಕೆ ಕೈಜೋಡಿಸಿರುವ ಜಿಲ್ಲಾಡಳಿತವು ರಾಷ್ಟ್ರೀಯ ಹಬ್ಬಾಚರಣೆ ನಡೆಸಲಾಗುವ ಕೋಟೆಯಾವರಣದ ಸುತ್ತಲು ಬೆಳೆದು ನಿಂತಿದ್ದ ಕಳೆ ಗಿಡಗಳನ್ನು ತೆಗೆದು ಶುಚಿಗೊಳಿಸಿ, ತ್ರಿವರ್ಣಗಳ ಬೆಳಕಿನ ರಂಗವಲ್ಲಿಯನ್ನು ಮೂಡಿಸಿ ರಾಷ್ಟ್ರೀಯ ಹಬ್ಬವನ್ನು ವರ್ಣರಂಜಿತಗೊಳಿಸುವ ಪ್ರಯತ್ನ ಮಾಡಿದೆ. ಅರಮನೆಯ ಮುಂದಿನ ವಿಶಾಲ ಆವರಣದಲ್ಲಿ ಸ್ವಾತಂತ್ರ್ಯದ ಸಂಭ್ರ್ರಮಾಚರಣೆಯ ಕಾರ್ಯಕ್ರಮಗಳು ನಡೆಯಲಿವೆ.

::: ‘ಹರ್ ಘರ್ ತಿರಂಗ’

 ಕೇಂದ್ರ ಸರ್ಕಾರ  ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಹಿನ್ನೆಲೆ ‘ಹರ್ ಘರ್ ತಿರಂಗ್’ ಕರೆಯನ್ನು ನೀಡಿದೆ. ಹರ್ ಘರ್ ತಿರಂಗ್ ಕಾರ್ಯಕ್ರಮವನ್ನು ಕೊಡಗು ಜಿಲ್ಲೆಯಲ್ಲಿ ಯಶಸ್ವಿಗೊಳಿಸುವಲ್ಲಿ ಶ್ರಮಿಸಬೇಕು. ಜಿಲ್ಲೆಗೆ ನಿಗದಿಪಡಿಸಿರುವ ಗುರಿ ಸಾಧಿಸಬೇಕು ಎಂದು ಮುಖ್ಯಮತ್ರಿಗಳು ನೀಡಿರುವ ಸೂಚನೆಯಂತೆ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ.

ಜಿಲ್ಲೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ 28 ಸಾವಿರ ಧ್ವಜಗಳನ್ನು ವಿತರಿಸಲು ಈಗಾಗಲೆ ಕ್ರಮ ಕೈಗೊಂಡಿದ್ದಾರೆ. ಜಿ.ಪಂ ನ ಎನ್‍ಆರ್‍ಎಂನಿಂದ 16,300 ಧ್ವಜ ವಿತರಿಸಲಾಗಿದೆ. ಉಳಿದಂತೆ 29,500 ಧ್ವಜ ವಿತರಿಸಲು ಕ್ರಮವಹಿಸಲಾಗಿದೆ. ಹಾಗೆಯೇ ಅಂಚೆ ಕಚೇರಿಯಿಂದ 13 ಸಾವಿರಕ್ಕೂ ಹೆಚ್ಚಿನ ಧ್ವಜಗಳನ್ನು ವಿತರಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News