ಬಿಜೆಪಿ, ಜೆಡಿಎಸ್ ನಿಂದ 20 ಮಂದಿ ಶಾಸಕರು ಕಾಂಗ್ರೆಸ್‌ಗೆ: ಎಂ.ಲಕ್ಷ್ಮಣ್

Update: 2022-08-10 16:04 GMT

ಮಡಿಕೇರಿ ಆ.10 : ಮುಂದಿನ ದಿನಗಳಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಸೇರಿದಂತೆ ಒಟ್ಟು 20 ಮಂದಿ ಶಾಸಕರು ಕಾಂಗ್ರೆಸ್ ಪಕ್ಷಕ್ಕೆ ಸೇರಲಿದ್ದು, ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತ ಬರಲಿದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ಎಂ.ಲಕ್ಷ್ಮಣ್ ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅವರು, ಸಿದ್ದರಾಮಯ್ಯ ಅಮೃತ ಮಹೋತ್ಸವದ ನಂತರ ರಾಜ್ಯದಲ್ಲಿ ಹೊಸ ಸಂಚಾಲನ ಮೂಡಿದ್ದು, ಬಿಜೆಪಿಯವರು ಸಂಪೂರ್ಣ ಹತಾಶರಾಗಿದ್ದಾರೆ. ಮುಂದಿನ ದಿನಗಳಲ್ಲಿ ಬಿಜೆಪಿಯಿಂದ 9, ಜೆಡಿಎಸ್‍ನಿಂದ 11 ಮಂದಿ ಶಾಸಕರು ಕಾಂಗ್ರೆಸ್‍ಗೆ ಬರಲಿದ್ದು, ಎಲ್ಲಾ ಸಮುದಾಯವರನ್ನು ಒಟ್ಟಾಗಿ ನಡೆಸಿಕೊಂಡು ಹೊಗಲಿದೆ ಎಂದರು.

ಇಂದಿನ ರಾಜಕೀಯ ವ್ಯವಸ್ಥೆಯಲ್ಲಿ ರಾಜ್ಯದಲ್ಲಿ ಸರ್ಕಾರ ಸಂಪೂರ್ಣ ಸತ್ತುಹೋಗಿದೆ. ಕೇವಲ ಕುರ್ಚಿ ಹಾಗೂ ಅಧಿಕಾರಕ್ಕೆ ಹೋರಾಟ ನಡೆಯುತ್ತಿದೆ. ರಾಜ್ಯದಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸಿದ ಯಡಿಯೂರಪ್ಪ ಅವರನ್ನು ಪಕ್ಷದಿಂದ ಕಿಕ್ ಔಟ್ ಮಾಡಲಾಗಿದೆ. ಅಲ್ಲದೆ ಅಮೃತ ಮಹೋತ್ಸವದಂದು ನೂತನ ಮುಖ್ಯಮಂತ್ರಿ ಧ್ವಜಾರೋಹಣ ಮಾಡಲಿದ್ದಾರೆ ಎನ್ನುವ ಮೂಲಕ ಬಸವರಾಜ ಬೊಮ್ಮಾಯಿ ಅವರನ್ನು ಮಂತ್ರಿ ಸ್ಥಾನದಿಂದ ಕೆಳಗಿಳಿಸಲಾಗುತ್ತಿದೆ ಎಂದು ಬಿಜೆಪಿ ಪಕ್ಷದವರೇ ಹೇಳಿಕೊಳ್ಳುತ್ತಿದ್ದಾರೆ. ಇಂತಹ ದುರ್ಬಲ ಮತ್ತು ಭ್ರಷ್ಟ ಸರ್ಕಾರವನ್ನು ನೋಡಿರಲಿಲ್ಲ ಎಂದು ಟಿಕೀಸಿದರು.  

ಪ್ರಾಕೃತಿ ವಿಕೋಪ, ಪ್ರವಾಹದಿಂದಾಗಿ ಜನಸಾಮಾನ್ಯರು ಮನೆ, ತೋಟ ಕಳೆದುಕೊಂಡು ಸಾಕಷ್ಟು ಸಂಕಷ್ಟ ಅನುಭವಿಸುತ್ತಿದ್ದಾರೆ. ಅದರೂ ಸರ್ಕಾರ ಸೂಕ್ತ ಪರಿಹಾರ ನೀಡಿಲ್ಲ ಎಂದರು.

ಆ.15 ರಂದು ನಡೆಯಲಿರುವ ಸ್ವಂತ್ರ್ಯ ಅಮೃತ ಮಹೋತ್ಸವವನ್ನು ಎಲ್ಲರು ಸಂಭ್ರಮದಿಂದ ಆಚರಿಸಬೇಕು. ಇದರಲ್ಲಿ ರಾಜಕೀಯ ಬೇಡ ಎಂದ ಅವರು, ಬೆಂಗಳೂರಿನ ಸಂಗೋಳ್ಳಿ ರಾಯಣ್ಣ ವೃತ್ತದಿಂದ ನ್ಯಾಷನಲ್ ಕಾಲೇಜಿನವರೆಗೂ ಪಾದಯಾತ್ರೆ ನಡೆಯಲಿದ್ದು, ನಂತರ ಸಭಾ ಕಾರ್ಯಕ್ರಮ ನಡೆಯಲಿದೆ ಎಂದರು.

ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲು ಆ್ಯಪ್ ಮೂಲಕ ನೊಂದಾವಣಿ ನಡೆಯುತ್ತಿದ್ದು, ಈಗಾಗಲೇ 60 ಸಾವಿರಕ್ಕೂ ಹೆಚ್ಚು ಮಂದಿ ನೊಂದಾಯಿಸಿಕೊಂಡಿದ್ದಾರೆ ಎಂದು ಮಾಹಿತಿ ನೀಡಿದರು.

ಸ್ವತಂತ್ರ್ಯ ಅಮೃತ ಮಹೋತ್ಸವವನ್ನು ಬಿಜೆಪಿ ರಾಜಕೀಯವಾಗಿ ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿದ ಲಕ್ಷ್ಮಣ್, ಸಾರ್ವಜನಿಕರು ಸ್ವಯಂ ಪೇರಿತರಾಗಿ ಸ್ವತಂತ್ರ್ಯ ಅಮೃತ ಮಹೋತ್ವವವನ್ನು ಆಚರಿಸಲು ಕರೆ ನೀಡಬೇಕೆ ಹೊರತು ಮನೆ ಮನೆಗಳಿಗೆ ಭಾವುಟವನ್ನು ಮಾರಾಟ ಮಾಡುವ ಮೂಲಕ ಕೇಸರಿಕರಣದಿಂದ ರಾಜಕೀಯ ಲಾಭ ಮಾಡಲು ಹೊರಟಿದೆ ಎಂದು ದೂರಿದರು.

ಖಾದಿ ಧ್ವಜವನ್ನು ಬದಲಾಯಿಸಿ ಖಾದಿ ಉದ್ಯಮಕ್ಕೆ ಅನ್ಯಾಯ ಮಾಡುತ್ತಿದೆ. ಅಂಚೆ ಕಚೇರಿ, ಬ್ಯಾಂಕ್‍ಗಳ ಮೂಲಕ ಮಾರುಕಟ್ಟೆಗೆ ಮಾರುವ ವ್ಯವಸ್ಥೆ ಮಾಡಿದ್ದು, ಉದ್ಯಮಿಗಳ ಹೊಟ್ಟೆಗೆ ಹೊಡೆಯುವ ಕೆಲಸವನ್ನು ಬಿಜೆಪಿ ಸರ್ಕಾರ ಮಾಡುತ್ತಿದೆ ಇದು ನಾಚೀಕೆಗೇಡಿನ ಕೆಲಸ ಎಂದರು.  

ಶಾಲಾ-ಕಾಲೇಜುಗಳಲ್ಲಿ ಮಹತ್ಮಗಾಂಧಿ ಅವರ ಭಾವ ಚಿತ್ರ ಪ್ರದರ್ಶನಕ್ಕೆ ಅವಕಾಶ ನೀಡದೆ ವಿದ್ಯಾರ್ಥಿಗಳಲ್ಲಿ ಕೋಮುವಾದದ ವಿಷ ಬೀಜ ಬಿತ್ತುವ ಕೆಲಸವನ್ನು ಬಿಜೆಪಿ ಮಾಡುತ್ತಿದ್ದು, ವ್ಯವಸ್ಥಿತವಾಗಿ ಇತಿಹಾಸವನ್ನು ಬದಲಾಯಿಸುವ ವ್ಯವಸ್ಥೆ ನಡೆಯುತ್ತಿದೆ. ಬಿಜೆಪಿಗೆ  ಸ್ವತಂತ್ರ್ಯ ಅಮೃತ ಮಹೋತ್ಸವವನ್ನು ಆಚರಿಸಲು ಯಾವ ನೈತಿಕತೆ ಇದೆ ಎಂಬುದನ್ನು ಸ್ಪಷ್ಟಪಡಿಸಲಿ ಎಂದರು.  

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೆಸ್ಸೆಸ್ ನವರಿಂದಲೇ ಪ್ರವೀಣ್ ಹತ್ಯೆ ಆಗಿದೆ ಎಂದು ಗಂಭೀರ ಆರೋಪ ಮಾಡಿರುವ ಲಕ್ಷ್ಮಣ್ ನ್ಯಾಯಾಧೀಶರ ಸಮ್ಮುಖದಲ್ಲಿ ತನಿಖೆಯಾದರೆ ಸತ್ಯಾಂಶ ಹೊರಬೀಳಲಿದೆ ಎಂದರು.

ಬಿಜೆಪಿಯ ಬಿ ಪಾರ್ಟಿಯಂತೆ ವರ್ತಿಸಿರುವ ಜೆಡಿಎಸ್ ರೈತರ ಸಾಲ ಮನ್ನ ನಾವು ಮಾಡಿದ್ದೇವೆಂದು ಹೇಳಿಕೊಳ್ಳುತ್ತಿದೆ. ಆದರೆ ಕಾಂಗ್ರೆಸ್ ಶಾಸಕರ ಸಹಕಾರದಿಂದಲೇ ಸಾಲ ಮನ್ನ ಮಾಡಲಾಗಿದೆ. ಕುಮಾರಸ್ವಾಮಿ ತಾಜ್ ಹೊಟೇಲ್ ನಲ್ಲಿದ್ದು ಕೊಂಡು ಆಡಳಿತ ನಡೆಸಿದ್ದರು ಈ ಕಾರಣದಿಂದಲೇ ಶಾಸಕರು ಬೇರೆ ಪಕ್ಷಕ್ಕೆ ವಲಸೆ ಹೋದರು ಎಂದು ವ್ಯಂಗ್ಯ ಆಡಿದರು.

ಕೆಪಿಸಿಸಿ ಮಾಧ್ಯಮ ಸಂವಹನ ವಕ್ತಾರ ಟಿ.ಪಿ.ರಮೇಶ್ ಮಾತನಾಡಿ,  ಸ್ವಾಂತ್ರ್ಯ ಅಮೃತ ಮಹೋತ್ಸವದ ಪ್ರಯುಕ್ತ ಜಿಲ್ಲೆಯಲ್ಲಿ ನಡೆಯಬೇಕಿದ್ದ ಅಮೃತ ಮಹೋತ್ಸವ ಪಾದಯಾತ್ರೆಯನ್ನು ಮಳೆಯಿಂದಾಗಿ ಮುಂದುಡಲಾಗಿದ್ದು, ಆ.15 ರಿಂದ 30ರ ಒಳಗೆ ಪಾದಯಾತ್ರೆಯನ್ನು ನಡೆಸಲು ನಿರ್ಧರಿಸಿ ಮಾಹಿತಿ ನೀಡಲಾಗುವುದೆಂದರು.

ಮಾಜಿ ಅಧ್ಯಕ್ಷ ಕೆ.ಕೆ.ಮಂಜುನಾಥ್ ಕುಮಾರ್ ಮಾತನಾಡಿ, ಜಿಲ್ಲೆಯಲ್ಲಿ ಅತಿಯಾದ ಮಳೆಯಿಂದಾಗಿ ಸಾಕಷ್ಟು ನಷ್ಟ ಸಂಭವಿಸಿದೆ. ಆದರೂ ಸರ್ಕಾರ ಸಂಪೂರ್ಣ ಪರಿಹಾರ ನೀಡಲು ಮುಂದಾಗಿಲ್ಲ. ಸಮಸ್ಯೆಯನ್ನು ಪರಿಹರಿಸಲು ಶಾಸಕರು ಮುಂದಾಗಿಲ್ಲ. ಗ್ರಾಮ ವಸ್ತವ್ಯ ಇರುವ ಪ್ರದೇಶಕ್ಕೆ ಕನಿಷ್ಟ ತಡೆಗೊಡೆಯನ್ನು ನಿರ್ಮಿಸಲು ಮುಂದಾಗಿಲ್ಲ ಎಂದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಧರ್ಮಾಜ ಉತ್ತಪ್ಪ,  ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎ.ಹಂಸ, ಕಾಂಗ್ರೆಸ್ ವಕ್ತಾರ ಟಾಟು ಮೊಣ್ಣಪ್ಪ, ಉಪಸ್ಥಿತರಿದ್ದರು.  
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News