ಬಾವುಟ ಖರೀದಿಸಿ ಮನೆಗಳ ಮೇಲೆ ಹಾರಿಸಿ ಎಂದು ಹೇಳುತ್ತಿರುವುದು ನಾಚಿಕೆಗೇಡಿನ ಸಂಗತಿ: ಡಿ.ಕೆ.ಶಿವಕುಮಾರ್

Update: 2022-08-10 17:08 GMT

ಮಂಡ್ಯ, ಆ.10: ಬಿಜೆಪಿ ಸರಕಾರಗಳ ಜನವಿರೋಧಿ ಆಡಳಿತದಿಂದ ಬೇಸತ್ತಿರುವ ಜನಸಾಮಾನ್ಯರ ದಿಕ್ಕು ತಪ್ಪಿಸಲು ಹರ್ ಘರ್ ತಿರಂಗ ಅಭಿಯಾನಕ್ಕೆ ಕರೆ ನೀಡಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಟೀಕಿಸಿದ್ದಾರೆ.

ಅಂಚೆ ಕಚೇರಿ ಮತ್ತು ಪಂಚಾಯತ್ ಕಚೇರಿಗಳಿಂದ ತ್ರಿವರ್ಣ ಧ್ವಜ ಖರೀದಿಸಿ ಮನೆಮನೆಗಳ ಮೇಲೆ ಹಾರಿಸಿ ಎಂದು ಬಿಜೆಪಿ ಸರಕಾರ ಹೇಳಿರುವುದು ನಾಚಿಕೆಗೇಡಿನ ಸಂಗತಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಟೀಕಿಸಿದ್ದಾರೆ.

ಸ್ವಾತಂತ್ರ್ಯ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಕೆಪಿಸಿಸಿ ಆ.15ರಂದು ಬೆಂಗಳೂರಿನಲ್ಲಿ ಆಯೋಜಿಸಿರುವ ಪಾದಯಾತ್ರೆ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಬಾವುಟ ಖರೀದಿಸಿ ಹಾರಿಸಿ ಎಂದು ಹೇಳುತ್ತಿರುವುದು ನಾಚಿಕೆಗೇಡು ಎಂದು ಲೇವಡಿ ಮಾಡಿದರು.

ಭಾರತ ಸ್ವಾತಂತ್ರ್ಯ ಅಮೃತ ಮಹೋತ್ಸವ ಸಂಭ್ರಮದಲ್ಲಿರುವುದು ಹೆಮ್ಮೆಯ ವಿಷಯ. ಸ್ವಾತಂತ್ರ್ಯ ಹೋರಾಟದಲ್ಲಿ ನೇರಭಾಗಿಯಾಗಿದ್ದ ಕಾಂಗ್ರೆಸ್ ಮಹೋತ್ಸವ ಆಚರಣೆ ಮಾಡುತ್ತಿರುವುದರಲ್ಲಿ ಹೆಮ್ಮೆ ಇದೆ. ಆದರೆ, ಬಿಜೆಪಿ, ಜೆಡಿಎಸ್‍ಗೆ ನೈತಿಕತೆ ಇಲ್ಲ. ಕಾಂಗ್ರೆಸ್‍ನ ಸಂಭ್ರಮ ಕಾರ್ಯಕ್ರಮದಲ್ಲಿ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಅವರು ಕರೆ ನೀಡಿದರು.

ಮುಂದಿನ ವಿಧಾನಸಭಾ ಚುನಾವಣೆಯಲ್ಲಿ 136ಕ್ಕೂ ಹೆಚ್ಚು ಸ್ಥಾನ ಗೆಲ್ಲುವ ಮೂಲಕ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ನಿಶ್ಚಯ. ಮಂಡ್ಯದಲ್ಲೂ ಕನಿಷ್ಠ ನಾಲ್ಕರಿಂದ ಐದು ಸ್ಥಾನ ಗೆಲ್ಲುತ್ತೇವೆ. ಎಲ್ಲಾ ಕ್ಷೇತ್ರಗಳನ್ನು ಗೆಲ್ಲಲು ಕಾರ್ಯಕರ್ತರು ಶ್ರಮಿಸಬೇಕು ಎಂದು ಅವರು ಸಲಹೆ ನೀಡಿದರು.

ಭಾರತ್ ಜೋಡೋ ಪಾದಯಾತ್ರೆ:

ಬಿಜೆಪಿ ಸರಕಾರದ ದುರಾಡಳಿತದ ವಿರುದ್ಧ ಜನಸಾಮಾನ್ಯರಿಗೆ ಅರಿವು ಮೂಡಿಸಲು ರಾಹುಲ್ ಗಾಂಧಿ ಅವರು ಸೆಪ್ಟೆಂಬರ್‍ನಿಂದ ದೇಶಾದ್ಯಂತ ಭಾರತ್ ಜೋಡೋ ಪಾದಯಾತ್ರೆ ಹಮ್ಮಿಕೊಂಡಿದ್ದು, ಸೆಪ್ಟೆಂಬರ್ ಕೊನೆ ವಾರದಲ್ಲಿ ಮಂಡ್ಯ ಜಿಲ್ಲೆಯಲ್ಲೂ ಐದು ದಿನ ಪಾದಯಾತ್ರೆ ಮಾಡಲಿದ್ದಾರೆ ಎಂದು ಅವರು ತಿಳಿಸಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ್, ಕೆಪಿಸಿಸಿ ಸದಸ್ಯ ಎಸ್.ಗುರುಚರಣ್, ಮಾಜಿ ಸಚಿವರಾದ ಎನ್.ಚಲುವರಾಯಸ್ವಾಮಿ, ಪಿ.ಎಂ.ನರೇಂದ್ರಸ್ವಾಮಿ, ಪ್ರಧಾನ ಕಾರ್ಯದರ್ಶಿ ಶಿವಣ್ಣ, ಡಾ.ಎಚ್.ಎನ್.ರವೀಂದ್ರ, ಗಣಿಗ ರವಿಕುಮಾರ್, ವಿಧಾನಪರಿಷತ್ ಸದಸ್ಯರಾದ ದಿನೇಶ್ ಗೂಳೀಗೌಡ, ಮಧು ಜಿ ಮಾದೇಗೌಡ, ಮಾಜಿ ಸದಸ್ಯ ಬಿ.ರಾಮಕೃಷ್ಣ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿ.ಡಿ.ಗಂಗಾಧರ್, ಜಿಪಂ ಮಾಜಿ ಅಧ್ಯಕ್ಷ ಸುರೇರ್ಶ ಕಂಠಿ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.

“ಬಿಜೆಪಿ ಆಡಳಿತದಿಂದ ಜನಸಾಮಾನ್ಯರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ತರಲು ತೀರ್ಮಾನಿಸಿದ್ದಾರೆ. ಮಾಧ್ಯಮಗಳು ಈ ಸಂದರ್ಭದಲ್ಲಿ ತಾಳ್ಮೆ ಮತ್ತು ಜವಾಬ್ಧಾರಿಯಿಂದ ಸತ್ಯವನ್ನು ಜನರಿಗೆ ತಿಳಿಸಬೇಕಾಗಿದೆ.” 
-ಎನ್.ಚಲುವರಾಯಸ್ವಾಮಿ, ಕೆಪಿಸಿಸಿ ಉಪಾಧ್ಯಕ್ಷ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News