ಕಾಶ್ಮೀರಿಫೈಲ್ಸ್ ಚಿತ್ರ ಉಚಿತವಾಗಿ ತೋರಿಸ್ತಾರೆ ಧ್ವಜಕ್ಕೆ ದುಡ್ಡು ಪಡಿತಾರೆ, ಇದೇನಾ ಹರ್‌ಘರ್ ತಿರಂಗ?: ಮಧು ಬಂಗಾರಪ್ಪ

Update: 2022-08-10 16:41 GMT

ಶಿವಮೊಗ್ಗ, ಆ.10: ಧ್ವಜ ಬದಲಾಯಿಸುತ್ತೇವೆ, ಸಂವಿಧಾನ ಬದಲಾವಣೆ ಮಾಡುತ್ತೇವೆ ಎಂದು ಹೇಳುತ್ತಿದ್ದವರೆ ಈಗ ಹರ್ ಘರ್ ತಿರಂಗ ಕಾರ್ಯಕ್ರಮ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ಪ್ರಣಾಳಿಕೆ ಸಮಿತಿ ಉಪಾಧ್ಯಕ್ಷ ಮಧು ಬಂಗಾರಪ್ಪ ಹೇಳಿದರು.

ಶಿವಮೊಗ್ಗದಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು,ಧ್ವಜವನ್ನು, ಸಂವಿಧಾನವನ್ನು ಬದಲಾವಣೆ ಮಾಡಲಾಗುತ್ತದೆ ಎಂದು ಬಿಜೆಪಿ ನಾಯಕರುಗಳು ಹೇಳಿಕೆ ನೀಡುತ್ತಿದ್ದರು. ಈಗ ಅವರೆ ಹರ್ ಘರ್ ತಿರಂಗ ಕಾರ್ಯಕ್ರಮ ಮಾಡುತ್ತಿದ್ದಾರೆ ಎಂದರು.

ಸ್ವಾತಂತ್ರ್ಯ ಹೋರಾಟದಲ್ಲಿ ಬಿಜೆಪಿಯವರ ಪಾಲು ಏನು ಇಲ್ಲ. ಬಿಜೆಪಿಯವರಿಗೆ ಧ್ವಜ ಮತ್ತು ಸ್ವಾತಂತ್ರ್ಯದ ಕುರಿತು ಮಾತನಾಡುವ ಅರ್ಹತೆ ಇಲ್ಲ. ಧ್ವಜ ಹಿಡಿಯುವ ಶಕ್ತಿಯನ್ನು ಕೊಟ್ಟಿದ್ದೆ ಮಹಾತ್ಮ ಗಾಂಧೀಜಿ ಮತ್ತು ಕಾಂಗ್ರೆಸ್ ಪಕ್ಷ. ಆದರೆ ಬಿಜೆಪಿಯವರು ಕಾಶ್ಮೀರಿಫೈಲ್ಸ್ ಚಿತ್ರ ಉಚಿತವಾಗಿ ತೋರಿಸುತ್ತಾರೆ. ಧ್ವಜಕ್ಕೆ ದುಡ್ಡು ಪಡೆಯುತ್ತಿದ್ದಾರೆ.ಇದೇನಾ ಹರ್‌ಘರ್ ತಿರಂಗ ಎಂದು ಕುಟಿಕಿದರು.

ಈ ಹಿಂದೆ ಬಸವರಾಜ್ ಬೊಮ್ಮಾಯಿ ಅವರು ಶಿವಮೊಗ್ಗಕ್ಕೆ ಭೇಟಿ ನೀಡಿದಾಗ ಅರಣ್ಯ ಭೂಮಿ ಸಾಗುವಳಿದಾರರ ನೋಟೀಸ್ ಕೊಡುವುದಿಲ್ಲ ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದರು.ಆದರೆ ಮೊನ್ನೆ ಕಾರ್ಗಲ್ ಬಳಿ ಯುವ ರೈತರಿಗೆ ಸ್ಟೇಟ್ ಹಿಡಿದು ನಿಲ್ಲಿಸಿದ್ದರು. ಅಂತಹ ಅಪರಾಧ ಅವರೇನು ಮಾಡಿದ್ದಾರೆ.ಅಲ್ಲದೇ ಜಿಲ್ಲೆಯ ಹಲವು ರೈತರಿಗೆ ಭೂಗಳ್ಳರು ಎಂದು ನೊಟೀಸ್ ನೀಡಲಾಗಿದೆ. ಡಬಲ್ ಎಂಜಿನ್ ಸರ್ಕಾರವಿದೆ. ಆದರೂ ರಾಜ್ಯದ ಬಿಜೆಪಿ ಸಂಸದರು ಕೇಂದ್ರದಲ್ಲಿ ಮಾತನಾಡಲು ಧೈರ್ಯ ತೋರಿಸುತ್ತಿಲ್ಲ ಎಂದು ಟೀಕಿಸಿದರು.

ಕಸ್ತೂರಿ ರಂಗನ್ ವರದಿ ಜಾರಿ ವಿಚಾರವಾಗಿ  ಇಲ್ಲಿನ ಸಂಸದರು ಇನ್ನೊಂದು ವರ್ಷದ ಯಾವುದೆ ಸಮಸ್ಯೆ ಇಲ್ಲ ಎಂದು ಹೇಳುತ್ತಿದ್ದಾರೆ. ಇನ್ನೊಂದು ವರ್ಷಕ್ಕೆ ಚುನಾವಣೆ ಬರಲಿದೆ ಅನ್ನುವುದಕ್ಕಾಗಿ ಈ ಹೇಳಿಕೆ ನೀಡುತ್ತಿದ್ದೀರಾ? ಎಂದ ಅವರು,ಜಿಲ್ಲೆಯ ರೈತರನ್ನು ಒಕ್ಕಲೆಬ್ಬಿಸಲು ಬಿಡುವುದಿಲ್ಲ. ಇದರ ವಿರುದ್ಧ ಹೋರಾಟ ತೀವ್ರಗೊಳಿಸಲಾಗುತ್ತದೆ.

ರೈತರನ್ನು ಕಂಡರೆ ಬಿಜೆಪಿಗೆ ಸಿಟ್ಟು: ಬಿಜೆಪಿಯವರಿಗೆ ರೈತರನ್ನು ಕಂಡರೆ ಸಿಟ್ಟು ಇದ್ದಂತೆ ತೋರುತ್ತದೆ. ಈಗ ವಿದ್ಯುತ್ ಪೂರೈಕೆ ವಿಚಾರದಲ್ಲಿ ಹೊಸ ನಿಯಮ ಜಾರಿಗೆ ತರಲು ಮುಂದಾಗಿದ್ದಾರೆ. ಯಾರಿಗೆ ಯಾವ ಪ್ಲಾನ್‌ನಲ್ಲಿ ವಿದ್ಯುತ್ ಬೇಕೋ ಹಾಗೆ ಪೂರೈಕೆ ಮಾಡುತ್ತೇವೆ ಎಂದು ತಿಳಿಸಿದ್ದಾರೆ. ರೈತರಿಗೆ ಉಚಿತವಾಗಿ ಪೂರೈಕೆ ಆಗುತ್ತಿರುವ ವಿದ್ಯುತ್ ಯೋಜನೆ ಕಡಿತಕ್ಕೆ ಹೊಸ ನಿಯಮ ಜಾರಿಗೆ ತರಲಾಗುತ್ತಿದೆ ಎಂದು ತಿಳಿಸಿದರು.

ಜಿಲ್ಲೆಗೊಂದು ಪ್ರಣಾಳಿಕೆ: ಪ್ರಣಾಳಿಕೆ ಸಮಿತಿ ಉಪಾಧ್ಯಕ್ಷರಾಗಿ ಪಕ್ಷ ಜವಾಬ್ದಾರಿ ನೀಡಲಾಗಿದೆ. ಸಿದ್ದರಾಮಯ್ಯ ಅವರು ಸರ್ಕಾರದ ಭಾಗ್ಯಗಳು ಮುಂದುವರೆಸುವ ಭರವಸೆ ಇರಲಿದೆ. ಇನ್ನು, ರಾಜ್ಯ ಮಟ್ಟದ ಪ್ರಣಾಳಿಕೆ ಜೊತೆಗೆ ಜಿಲ್ಲಾವಾರು ಪ್ರಣಾಳಿಕೆ ಸಿದ್ಧಪಡಿಸಲು ನಿರ್ಧರಿಸಲಾಗಿದೆ. ಮಲೆನಾಡು ಭಾಗಕ್ಕೆ ಕಸ್ತೂರಿ ರಂಗನ್ ವರದಿಗೆ ವಿರೋಧ, ರಸ್ತೆ ಸಂಪರ್ಕ ಸೇರಿದಂತೆ ಹಲವು ಪ್ರಮುಖ ವಿಚಾರವನ್ನು ಪ್ರಣಾಳಿಕೆಯಲ್ಲಿ ಸೇರಿಸಲಾಗುತ್ತದೆ. ಒಂಭತ್ತು ತಿಂಗಳು ಮೊದಲೆ ಪ್ರಣಾಳಿಕೆ ಸಿದ್ಧಪಡಿಸುವ ಜವಾಬ್ದಾರಿ ನೀಡಲಾಗಿದೆ. ಚರ್ಚೆ ನಡೆಸಿ, ವಿವಿಧೆಡೆ ಪ್ರವಾಸ ನಡೆಸಿ ಪ್ರಣಾಳಿಕೆ ಸಿದ್ಧಪಡಿಸಲಾಗುತ್ತದೆ.

ಬೃಹತ್ ಪಾದಯಾತ್ರೆ:

ಸೊರಬದಲ್ಲಿ 75 ನೇ ವರ್ಷದ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಬೃಹತ್ ಪಾದಯಾತ್ರೆ ಕೈಗೊಳ್ಳಲಾಗಿದೆ.ಪ್ರತಿ ಜಿಲ್ಲೆಯಲ್ಲಿ 75 ಕಿಮಿ ದೂರ ಕ್ರಮಿಸಬೇಕಿದ್ದು, ಆ.11ರಂದು  ಸೊರಬ ಪಟ್ಟಣದಲ್ಲಿ ಪಾದಯಾತ್ರೆ ನಡೆಸಲಾಗುತ್ತಿದೆ.ಸಾವಿರಾರು ಜನರು ಭಾಗವಹಿಸಲಿದ್ದಾರೆ ಎಂದರು.

ಸೊರಬ ತಾಲೂಕಿನ ಜಡೆ ಭಾಗದಲ್ಲಿ ಭಾರಿ ಮಳೆಗೆ ಮನೆಗೆ ಕುಸಿದಿದೆ. ಆದರೆ ತಹಶೀಲ್ದಾರ್ ಸೇರಿದಂತೆ ಅಧಿಕಾರಿಗಳು ಮನೆ ಬಿದ್ದಿಲ್ಲ, ಜನರೆ ಕೆಡವಿದ್ದಾರೆ ಎಂದು ಆರೋಪಿಸುತ್ತಿದ್ದಾರೆ. ಮನೆ ಇಲ್ಲದೆ ಬದುಕೋದು ಹೇಗೆ? ಯಾರಾದರೂ ಮನೆ ಕೆಡವಿಕೊಳ್ಳುತ್ತಾರಾ ಎಂದು ಪ್ರಶ್ನಿಸಿದ ಅವರು, ಮೂರು ವರ್ಷದಲ್ಲಿ ಒಂದೇ ಒಂದು ಮನೆ ಕೊಡಲು ಸಾಧ್ಯವಾಗಿಲ್ಲ. ಹಾಗಾಗಿ ಗ್ರಾಮ ಪಂಚಾಯಿತಿ ಸದಸ್ಯರು ಮನೆ ಮನೆಗೆ ಹೋಗಿ ಧ್ವಜ ಹಂಚಲು ಆಗುತ್ತಿಲ್ಲ. ಅಂತಹ ಪರಿಸ್ಥಿತಿ ನಿರ್ಮಾಣಾವಾಗಿದೆ ಎಂದರು.

ಶಿವಮೊಗ್ಗ ಸ್ಮಾರ್ಟ್ ಸಿಟಿ ಯೋಜನೆ ಮೂಲಕ ನಗರದಲ್ಲಿ ನೀರು ನಿಲ್ಲಿವಂತೆ ಮಾಡಲಾಗಿದೆ. ಚುನಾವಣೆ ಹತ್ತಿರ ಬರುತ್ತಿದ್ದ ಹಾಗೆ ಇನ್ನೆಷ್ಟು ಸ್ಮಾರ್ಟ್ ಮಾಡುತ್ತಾರೋ ಗೊತ್ತಿಲ್ಲ ಎಂದರು.

ಕೋವಿಡ್ ನಿಂದ ಮರಣಹೊಂದಿದವರಿಗೆ ಸರ್ಕಾರಿ ಮೆಗ್ಗಾನ್ ಆಸ್ಪತ್ರೆಯಿಂದ ವೈದ್ಯರು ಪ್ರಮಾಣ ಪತ್ರ ನೀಡಿದ್ದರೂ ಇನ್ನೂ ಪರಿಹಾರ ನೀಡಿಲ್ಲ. ಸೊರಬ ಕ್ಷೇತ್ರ ವ್ಯಾಪ್ತಿಯಲ್ಲಿ ಓಡಾಡುವಾಗ ಇಂತಹ ಹಲವು ಪ್ರಕರಣಗಳು ಗೊತ್ತಾಗುತ್ತಿದೆ. ಈರಮ್ಮ ಎಂಬುವವರ ಮಗ ಬಂದು ತಾಯಿ ಕಳೆದುಕೊಂಡಿದ್ದೇನೆ ಎಂದು ಕಣ್ಣೀರು ಹಾಕಿದ್ದಾರೆ. ಕೋವಿಡ್ ಮೃತರ ಪಟ್ಟಿಯಲ್ಲಿ ಇವರ ಹೆಸರೆ ಇಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ ಎಂದು ಆತ ಕಣ್ಣೀರು ಹಾಕುತ್ತಿದ್ದಾರೆ.ರಾಜ್ಯ ಸರ್ಕಾರ 1.5 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಹೆಚ್.ಎಸ್.ಸುಂದರೇಶ್, ಮಾಜಿ ಶಾಸಕರಾದ ಆರ್.ಪ್ರಸನ್ನ ಕುಮಾರ್,ಕೆ.ಬಿ.ಪ್ರಸನ್ನಕುಮಾರ್,ಎನ್,ರಮೇಶ್,ಜಿ.ಡಿ ಮಂಜುನಾಥ್,ಡಾ. ಶ್ರೀನಿವಾಸ ಕರಿಯಣ್ಣ,ಕಲಗೋಡು ರತ್ನಾಕರ್ ಸೇರಿದಂತೆ ಪ್ರಮುಖರು ಸುದ್ದಿಗೋಷ್ಠಿಯಲ್ಲಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News