ಚಿಕ್ಕಮಗಳೂರು: ಕಾಫಿ ತೋಟಕ್ಕೆ ಕಾಡಾನೆಗಳ ಹಿಂಡು ದಾಳಿ; ಆತಂಕದಲ್ಲಿ ಗ್ರಾಮಸ್ಥರು

Update: 2022-08-11 14:11 GMT

ಚಿಕ್ಕಮಗಳೂರು, ಆ.11: ಮಲೆನಾಡು ಭಾಗದಲ್ಲಿ ನಿರಂತರ ಆನೆ ಹಾವಳಿಯಿಂದ ರೈತರು, ಕಾಫಿ, ಅಡಿಕೆ ಬೆಳೆಗಾರರು ಬೇಸತ್ತು ಹೋಗಿದ್ದು, ಮೂಡಿಗೆರೆ ತಾಲೂಕಿನ ಹಾಂದಿ, ವಿಜಯನಗರ, ಹೊಸಪೇಟೆ ಸುತ್ತಮುತ್ತಲ ಗ್ರಾಮಗಳಲ್ಲಿ ಸುಮಾರು 13ಕ್ಕೂ ಹೆಚ್ಚು ಕಾಡಾನೆಗಳ ಹಿಂಡು ಗುರುವಾರ ಮುಂಜಾನೆ ಪ್ರತ್ಯಕ್ಷವಾಗಿ ಬೆಳೆ ನಾಶ ಮಾಡಿದ್ದು, ಕಾಡಾನೆಗಳ ಹಿಂಡು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.

ಗುರುವಾರ ಮುಂಜಾನೆ ಮೂಡಿಗೆರೆ ತಾಲೂಕಿನ ಹಾಂದಿ ಗ್ರಾಮದ ಕಾಫಿ ತೋಟದಲ್ಲಿ 13 ಕಾಡಾನೆಗಳು ಕಾಣಿಸಿಕೊಂಡಿದ್ದು, ಕಾಫಿ ಗಿಡಗಳನ್ನು ತುಳಿದು ನಾಶ ಮಾಡಿವೆ. ನಂತರ ಹಾಂದಿ ಸುತ್ತಮುತ್ತಲ ಗ್ರಾಮಗಳಲ್ಲಿ ಕಾಡಾನೆಗಳ ಗುಂಪು ರಾಜಾರೋಷವಾಗಿ ಓಡಾಡುತ್ತಿದ್ದು, ಕಾಫಿ ಸೇರಿದಂತೆ ಇತರ ಬೆಳೆಗಳನ್ನು ನಾಶಪಡಿಸಿವೆ. ಕಾಡಾನಗೆಳು ಎಲ್ಲೆಂದರಲ್ಲಿ ತಿರುಗಾಡುತ್ತಿರುವುದರಿಂದ ಗ್ರಾಮಸ್ಥರು ಆತಂಕದಲ್ಲಿ ದಿನದೂಡುವಂತಾಗಿದೆ. ಕಾಡಾನೆಗಳನ್ನು ಕಾಡಿಗೆ ಅಟ್ಟುವಲ್ಲಿ ಅರಣ್ಯ ಇಲಾಖೆ ನಿರ್ಲಕ್ಷ್ಯವಹಿಸಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಕಳೆದ ಕೆಲ ದಿನಗಳಿಂದ ಮಲೆನಾಡು ಭಾಗದಲ್ಲಿ ಆನೆಗಳ ಹಿಂಡು ದಾಳಿ ಇಡುತ್ತಿದ್ದು, ಕಾಫಿತೋಟ ಸೇರಿದಂತೆ ಇತರೆ ಬೆಳೆಗಳನ್ನು ನಾಶಪಡಿಸುತ್ತಿವೆ. ಆನೆ ದಾಳಿಯನ್ನು ತಡೆ ಗಟ್ಟುವಂತೆ ಅರಣ್ಯ ಇಲಾಖೆ ಸಾಕಷ್ಟು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಶೀಘ್ರವೇ ಕಾಡಾನೆಗಳ ಹಾವಳಿಗೆ ಕಡಿವಾಣ ಹಾಕಬೇಕೆಂದು ಇಲ್ಲಿನ ಜನರು ಆಗ್ರಹಿಸಿದ್ದಾರೆ. 

ಕಾಡಾನೆ ಹಾವಳಿ ಮಲೆನಾಡಿನ ಪ್ರಮುಖ ಸಮಸ್ಯೆಯಾಗಿದ್ದು, ಕಾಡಾನೆ ಹಾವಳಿ ನಿಯಂತ್ರಣಕ್ಕೆ ಶಾಶ್ವತ ಯೋಜನೆ ರೂಪಿಸಬೇಕೆಂದು ಈ ಭಾಗದ ಬೆಳೆಗಾರರು ಸರಕಾರವನ್ನು ಆಗ್ರಹಿಸುತ್ತಿದ್ದಾರೆ. ಸರಕಾರ ಆನೆ ಕಾರಿಡಾರ್‍ಗಳಲ್ಲಿ ರೈಲ್ವೆ ಕಂಬಿಗಳ ಬ್ಯಾರಿಕೇಡ್ ನಿರ್ಮಾಣಕ್ಕೆ ಬಜೆಟ್‍ನಲ್ಲಿ ಅನುದಾನ ಮೀಸಲಿಟ್ಟಿದ್ದರೂ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದಾಗಿ ಈ ಯೋಜನೆ ಜಿಲ್ಲೆಯಲ್ಲಿ ನೆನೆಗುದಿಗೆ ಬಿದ್ದಿದೆ. 

ಮೂಡಿಗೆರೆ ತಾಲೂಕಿನ ದೇವರ ಮನೆ ಬಳಿ ಮಾರುತಿ ಕಾರಿನಲ್ಲಿ ಹೋಗುತ್ತಿದ್ದವರನ್ನು ಕಾಡಾನೆಯೊಂದು ಅಟ್ಟಾಡಿಸಿರುವ ಘಟನೆ ಗುರುವಾರ ಮುಂಜಾನೆ ನಡೆದಿದೆ. ಆನೆ ಭೀತಿಯಿಂದಾಗಿ ಪ್ರಾಣ ಭಯದಲ್ಲಿ ಕಾರು ಚಲಾಯಿದ ಪರಿಣಾಮ ಕಾರು ರಸ್ತೆ ಬದಿಯ ಚರಂಡಿಗೆ ಉರುಳಿ ಬಿದ್ದಿದೆ. ಈ ವೇಳೆ ಕಾರಿನಲ್ಲಿದ್ದವರು ಕಾರು ಬಿಟ್ಟು ಓಡಿ ಹೋಗಿ ಕೂದಲೆಳೆಯ ಅಂತರದಲ್ಲಿ ಪ್ರಾಣ ಉಳಿಸಿಕೊಂಡಿದ್ದಾರೆ. ದೇವರಮನೆ ಗ್ರಾಮದ ಶಿವಾಜಿ ಎಂಬವರಿಗೆ ಸೇರಿದ ಕಾರು ಇದಾಗಿದ್ದು, ಈ ಸಂಬಂಧ ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News