ಚಿಕ್ಕಮಗಳೂರು | ನಿವೇಶನ ನೀಡಲು ನಿರ್ಲಕ್ಷ್ಯ ಆರೋಪ: ರಾಷ್ಟ್ರಧ್ವಜ ಹಾರಿಸದಿರಲು ಸಂತ್ರಸ್ತರಿಂದ ನಿರ್ಧಾರ

Update: 2022-08-11 15:00 GMT

ಚಿಕ್ಕಮಗಳೂರು, ಆ.11: ಕಳೆದ 20 ವರ್ಷಗಳಿಂದ ಸುಮಾರು 200ಕ್ಕೂ ಹೆಚ್ಚು ನಿವೇಶನ ರಹಿತರಿಗೆ ನಿವೇಶನ ಹಂಚಿಕೆ ಮಾಡುವ ನಿಟ್ಟಿನಲ್ಲಿ ಬನ್ನೂರು ಗ್ರಾಮ ಪಂಚಾಯತ್ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ದಿವ್ಯ ನಿರ್ಲಕ್ಷ್ಯವಹಿಸಿದ್ದಾರೆ. ಪರಿಣಾಮ ನಿವೇಶನ ರಹಿತರ ಸ್ವಂತ ಸೂರು ಹೊಂದುವ ಕನಸು ನನಸಾಗಿಯೇ ಉಳಿದಿದೆ. ನಿವೇಶನ, ಮನೆ ನೀಡುವಲ್ಲಿ ಸರಕಾರ ವಿಫಲವಾಗಿರುವುದನ್ನು ಖಂಡಿಸಿ ಸ್ವಾತಂತ್ರ್ಯ ದಿನಾಚರಣೆ ಸಂದರ್ಭ ಮನೆಗಳ ಮೇಲೆ ರಾಷ್ಟ್ರಧ್ವಜ ಹಾರಿಸಬೇಕೆಂಬ ಸರಕಾರದ ಆದೇಶವನ್ನು ಪಾಲಿಸುವುದಿಲ್ಲ ಎಂದು ಜಿಲ್ಲೆಯ ನರಸಿಂಹರಾಜಪುರ ತಾಲೂಕಿನ ನಿವೇಶನ ರಹಿತರ ಹೋರಾಟ ಸಮಿತಿ, ಹಸಲರ ಸಂಘ ಹಾಗೂ ಆದಿವಾಸಿಗಳ ಹಕ್ಕು ಹೋರಾಟ ಸಮಿತಿ ಮುಖಂಡರು ತಿಳಿಸಿದ್ದಾರೆ. 

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಾಳೆಹೊನ್ನೂರು ನಿವೇಶನ ರಹಿತರ ಹೋರಾಟ ಸಮಿತಿ ಮುಖಂಡ ಶ್ರೀಕಾಂತ್, ನರಸಿಂಹರಾಜಪುರ ತಾಲೂಕಿನ ಬಾಳೆಹೊನ್ನೂರು ಹೋಬಳಿ ವ್ಯಾಪ್ತಿಯಲ್ಲಿರುವ ಬನ್ನೂರು ಗ್ರಾಮದಲ್ಲಿ ಪರಿಶಿಷ್ಟ ಪಂಗಡದ ಸುಮಾರು 200ಕ್ಕೂ ಹೆಚ್ಚು ನಿವೇಶನ ರಹಿತರು ನಿವೇಶನಕ್ಕೆ ಆಗ್ರಹಿಸಿ ಬನ್ನೂರು ಗ್ರಾಮ ಪಂಚಾಯತ್‍ಗೆ ಕಳೆದ 20 ವರ್ಷಗಳ ಹಿಂದೆ ಅರ್ಜಿ ಸಲ್ಲಿಸಿದ್ದು, ಗ್ರಾಮ ಪಂಚಾಯತ್‍ನಿಂದ ನಿವೇಶನ ಹಂಚಿಕೆ ಮಾಡುವ ಭರವಸೆ ಸಿಗುತ್ತಿದೆಯೇ ಹೊರತು ಇದುವರೆಗೂ ನಿವೇಶನ ಹಂಚಿಕೆ ಮಾಡದೇ ನಿರ್ಲಕ್ಷ್ಯವಹಿಸಿದೆ. ಪರಿಣಾಮ 200ಕ್ಕೂ ಹೆಚ್ಚು ನಿವೇಶನ ರಹಿತರ ನಿವೇಶನ, ಸ್ವಂತ ಮನೆ ಹೊಂದುವ ಕನಸು ನನಸಾಗಿಯೇ ಉಳಿದಿದ್ದು, ನಿವೇಶನ ಇಲ್ಲದ ಕುಟುಂಬಗಳು ಬಾಡಿಗೆ ಮನೆಗಳಲ್ಲಿ, ಎಸ್ಟೇಟ್‍ಗಳ ಲೈನ್ ಮನೆಗಳಲ್ಲಿ ಬದುಕುವಂತಾಗಿದೆ ಎಂದು ಆರೋಪಿಸಿದರು.

ಬನ್ನೂರು ಗ್ರಾಮದಲ್ಲಿ ಸುಮಾರು 315 ಎಕರೆ ಗೋಮಾಳ ಜಾಗ ಇದೆಯಾದರೂ ಗ್ರಾಪಂ ಪಂಚಾಯತ್ ಅಧಿಕಾರಿಗಳು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ರಾಜಕಾರಣಿಗಳು, ಪ್ರಭಾವಿಗಳ ಒತ್ತಡಕ್ಕೆ ಮಣಿದು ನಿವೇಶನ ನೀಡಲು ಹಿಂದೇಟು ಹಾಕುತ್ತಿದ್ದಾರೆ. ನಿವೇಶನ ಹಂಚಿಕೆ ಮಾಡುವಂತೆ ಜಿಲ್ಲಾಧಿಕಾರಿ ಸೇರಿದಂತೆ ಸಂಬಂಧಿಸಿದ ಎಲ್ಲ ಇಲಾಖಾಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದ್ದು, ಇದುವರೆಗೂ ನಿವೇಶನ ಸೌಲಭ್ಯ ಸಿಕ್ಕಿಲ್ಲ ಎಂದು ಆರೋಪಿಸಿದ ಅವರು, ಪ್ರಧಾನಿ ಮೋದಿ ಅವರು, ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವದ ಅಂಗವಾಗಿ ಪ್ರತೀ ಮನೆಗಳ ಮೇಲೆ ರಾಷ್ಟ್ರಧ್ವಜವನ್ನು ಹಾರಿಸಬೇಕೆಂದು ಕರೆ ನೀಡಿದ್ದಾರೆ. ಆದರೆ ಬನ್ನೂರು ಗ್ರಾಮದಲ್ಲಿ ದಲಿತರೂ ಸೇರಿದಂತೆ ಅಲ್ಪಸಂಖ್ಯಾತರು, ಹಿಂದುಳಿದ ಸಮುದಾಯದವರಿಗೆ ಸ್ವಂತ ನಿವೇಶನ ಮನೆಯೇ ಇಲ್ಲ. ನಿವೇಶನ ಕಲ್ಪಿಸಲು ಸರಕಾರಿ ಜಾಗ ಇದ್ದರೂ ಸಂಬಂಧಿಸಿದ ಅಧಿಕಾರಿಗಳು, ಕ್ಷೇತ್ರದ ಶಾಸಕರು ಈ ಸಂಬಂಧ ದಿವ್ಯ ನಿರ್ಲಕ್ಷ್ಯವಹಿಸಿದ್ದಾರೆ. ಸ್ವಂತ ಮನೆ ಇಲ್ಲದ ಹಿನ್ನೆಲೆಯಲ್ಲಿ ಇಲ್ಲಿನ ನಿವೇಶನ ರಹಿತರು ಸರಕಾರದ ಹರ್‍ಘರ್ ತಿರಂಗಾ ಯೋಜನಗೆ ಸಹಕಾರ ನೀಡುವುದಿಲ್ಲ. ಮನೆಗಳ ಮೇಲೆ ರಾಷ್ಟ್ರಧ್ವಜ ಹಾರಿಸುವುದಿಲ್ಲ. ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಆ.15ರಂದು ಮಾತ್ರ ಸರಳವಾಗಿ ಸ್ವಾತಂತ್ರದಿನಾಚರಣೆ ಮಾಡುತ್ತೇವೆ ಎಂದರು.

ಬನ್ನೂರು ಗ್ರಾಮದಲ್ಲಿ ನಿವೇಶನ ಜಾಗ ಹೊಂದಿರುವ ಸುಮಾರು 20 ಕುಟುಂಬಗಳಿದ್ದು, ಈ ಕುಟುಂಬಗಳಿಗೆ 100 ವರ್ಷ ಕಳೆದರೂ ನಿವೇಶನ ಹಕ್ಕುಪತ್ರ ಸಿಕ್ಕಿಲ್ಲ. ಹಕ್ಕುಪತ್ರಕ್ಕಾಗಿ ಜಿಲ್ಲಾಡಳಿತ, ತಾಲೂಕು ಆಡಳಿತ ಹಾಗೂ ರಾಜಕಾರಣಿಗಳಿಗೆ ಮನವಿ ನೀಡಿದರೂ ಪ್ರಯೋಜನವಾಗಿಲ್ಲ ಎಂದು ಅಳಲು ತೋಡಿಕೊಂಡ ಅವರು, ಜಿಲ್ಲಾಡಳಿತ ಬನ್ನೂರು ಗ್ರಾಮದಲ್ಲಿರುವ ಎಲ್ಲ ಸಮುದಾಯದ ನಿವೇಶನ ರಹಿತರಿಗೆ ನಿವೇಶನ ಕಲ್ಪಿಸುವ ನಿಟ್ಟಿನಲ್ಲಿ ಸರಕಾರಿ ಜಾಗ ಗುರುತಿಸಿ ಶೀಘ್ರ ನಿವೇಶನ ಹಂಚಿಕೆ ಮಾಡಬೇಕು. ಹಕ್ಕುಪುತ್ರ ವಂಚಿತರಿಗೆ ಶೀಘ್ರ ಹಕ್ಕುಪತ್ರ ನೀಡಬೇಕು. ತಪ್ಪಿದಲ್ಲಿ ಸ್ವಾತಂತ್ರ್ಯ ದಿನಾಚರಣೆ ಮುಗಿದ ಬಳಿಕ ಜಿಲ್ಲಾಧಿಕಾರಿ ಕಚೇರಿ ಎದುರು ಅರೆ ಬೆತ್ತಲೆ ಧರಣಿ ನಡೆಸಲಾಗುವುದು, ಅಲ್ಲದೇ ಬನ್ನೂರು ಗ್ರಾಪಂ ಕಚೇರಿ ಎದುರು ಅಹೋರಾತ್ರಿ ಧರಣಿ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಮುಖಂಡರಾದ ಪವನ್, ಗೋಪಾಲ್, ಅನುಪಮ, ಜಾನಕಿ, ವನಜಾ ಮತ್ತಿತರರು ಉಪಸ್ಥಿತರಿದ್ದರು.


ಕೇಂದ್ರ, ರಾಜ್ಯ ಸರಕಾರಗಳ ಹರ್ ಘರ್ ತಿರಂಗಾ ಯೋಜನೆಗೆ ಆದೇಶಿಸಿರುವುದು ಅರ್ಥವಿಲ್ಲದ ಆಚರಣೆಯಾಗಿದೆ. ಇದರ ಬದಲು ನಿವೇಶನ ಇಲ್ಲದ ಪ್ರತೀ ಕುಟುಂಬಕ್ಕೂ ನಿವೇಶನ, ಮನೆ ಎಂಬ ಯೋಜನೆಯನ್ನು ಜಾರಿ ಮಾಡಲಿ.

- ಗೋಪಾಲ್, ಮುಖಂಡ, ನಿವೇಶನ ರಹಿತರ ಹೋರಾಟ ಸಮಿತಿ, ಬಾಳೆಹೊನ್ನೂರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News