ಕನ್ನಡದ ಖ್ಯಾತ ಸುಗಮ ಸಂಗೀತ ಗಾಯಕ ಶಿವಮೊಗ್ಗ ಸುಬ್ಬಣ್ಣ ನಿಧನ

Update: 2022-08-13 08:32 GMT

ಬೆಂಗಳೂರು, ಆ.11: ಕನ್ನಡದ ಖ್ಯಾತ ಸುಗಮ ಸಂಗೀತ ಗಾಯಕ ಶಿವಮೊಗ್ಗ ಸುಬ್ಬಣ್ಣನವರು ಹೃದಯಾಘಾತದಿಂದಾಗಿ ಬೆಂಗಳೂರಿನ ಜಯದೇವ ಆಸ್ಪತ್ರೆಯಲ್ಲಿ ಗುರುವಾರ ರಾತ್ರಿ ನಿಧನ ಹೊಂದಿದ್ದಾರೆ.

ಸುಬ್ಬಣ್ಣ ಅವರು ಶಿವಮೊಗ್ಗ ಜಿಲ್ಲೆಯ ನಗರ ಎಂಬ ಸಣ್ಣ ಊರಿನಲ್ಲಿ 1938ರ ಡಿ.14ರಂದು ಜನಿಸಿದರು.ಅವರಿಗೆ ಈಗ 83 ವಯಸ್ಸಾಗಿದ್ದು, ಹೃದಯಾಘಾತದಿಂದ ಮೃತಪಟ್ಟಿದ್ದಾರೆ. 1979ರಲ್ಲಿ ಕಾಡುಕುದುರೆ ಚಲನ ಚಿತ್ರದಲ್ಲಿ ಅವರು ಹಾಡಿದ ಕಾಡು ಕುದುರೆ ಓಡಿ ಬಂದಿತ್ತಾ ಹಾಡಿಗೆ ಅತ್ಯುತ್ತಮ ಹಿನ್ನೆಲೆ ಗಾಯನಕ್ಕಾಗಿ ‘ರಜತ ಕಮಲ ರಾಷ್ಟ್ರ ಪ್ರಶಸ್ತಿ’ ಪಡೆದಿದ್ದರು.

ಕನ್ನಡ ಗಾಯನ ಕ್ಷೇತ್ರದಲ್ಲಿ ತಮ್ಮನ್ನು ಗುರುತಿಸಿಕೊಂಡಿದ್ದ ಸುಬ್ಬಣ್ಣ, ತಾಯಿ ರಂಗನಾಯಕಿ. ತಾತ ಶಾಮಣ್ಣ, ನಂತರ ಎಂ. ಪ್ರಭಾಕರ್ ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಅಭ್ಯಾಸ ಮಾಡಿದರು. 

ಅವರು ಆಕಾಶವಾಣಿ ಮತ್ತು ದೂರದರ್ಶನದ ‘ಎ’ ಟಾಪ್ ಶ್ರೇಣಿಯ ಗಾಯಕರಾಗಿದ್ದರು.

ಬಿ.ಎ, ಬಿ.ಕಾಂ ಮತ್ತು ಎಲ್‌ಎಲ್‌ಬಿ ಪದವೀಧರಾದ ಸುಬ್ಬಣ್ಣ ಅವರು, 1982ರಲ್ಲಿ ಶಿವಮೊಗ್ಗದಿಂದ ಬೆಂಗಳೂರಿಗೆ ಬಂದು ನೆಲೆಸಿದರು.

1985ರಲ್ಲಿ ರಾಜ್ಯೋತ್ಸವ ಪುರಸ್ಕಾರ, 1988ರಲ್ಲಿ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಪುರಸ್ಕಾರ, 1999ರಲ್ಲಿ ಸಂತ ಶಿಶುನಾಳ ಷರೀಫ ಪ್ರಶಸ್ತಿ, 2008ರಲ್ಲಿ ಕುವೆಂಪು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿ, 2003ರಲ್ಲಿ ಬೆಂಗಳೂರು ಗಾಯನ ಸಮಾಜದಿಂದ ‘ವರ್ಷದ ಕಲಾವಿದ’ ಅಲ್ಲದೇ ಇನ್ನೂ ಅನೇಕ ಪ್ರಶಸ್ತಿ, ಪುರಸ್ಕಾರಗಳು ಅವರಿಗೆ ದೊರೆತಿವೆ.‌

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News