ಮಕ್ಕಳಿಗೆ ಪಾರ್ಶ್ವವಾಯು ತರಿಸುವ ಚೀನಿ ಕಂಪೆನಿಯ ʼಮಾತ್ರೆʼ ಕೇಕ್: ವೈರಲ್ ವಿಡಿಯೋ ಸತ್ಯಾಂಶವೇನು?

Update: 2022-08-12 03:56 GMT

ಮಂಗಳೂರು: ʼಮಕ್ಕಳನ್ನು ಪಾರ್ಶ್ವವಾಯುವಿಗೆ ತಳ್ಳುವ ಲುಪೋ ಕಂಪನಿಯ ಟ್ಯಾಬ್ಲೆಟ್ ಇದೆʼ ಎಂಬ ಒಕ್ಕಣೆಯೊಂದಿಗೆ ಕೇಕ್ ಉತ್ಪನ್ನದ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಸದ್ಯ ವೈರಲ್ ಆಗುತ್ತಿದೆ. ವ್ಯಕ್ತಿಯೊಬ್ಬರು ಕೇಕ್‌ ಅನ್ನು ತೆರೆದು ಹುಡಿ ಮಾಡಿ ಅದರೊಳಗಿನಿಂದ ಮಾತ್ರೆ ತರಹದ ವಸ್ತುವನ್ನು ತೆಗೆಯುವುದು ವೈರಲ್‌ ಆಗುತ್ತಿರುವ ವಿಡಿಯೋದಲ್ಲಿ ಕಂಡು ಬಂದಿದೆ. ಆದರೆ ತಲೆಬರಹಕ್ಕೂ, ವೀಡಿಯೋಗೂ ಯಾವುದೇ ಸಂಬಂಧವಿಲ್ಲ ಎಂದು boomlive.in ನಡೆಸಿದ ಸತ್ಯಶೋಧನಾ ವರದಿಯಲ್ಲಿ ತಿಳಿಸಿದೆ.

“ಹೊಸ ಕೇಕ್ ಮಾರುಕಟ್ಟೆಗೆ ಬಂದಿದೆ. ಇದರಲ್ಲಿ ಮಕ್ಕಳನ್ನು ಪಾರ್ಶ್ವವಾಯುವಿಗೆ ತಳ್ಳುವ ಲುಪೋ ಕಂಪನಿಯ ಟ್ಯಾಬ್ಲೆಟ್ ಇದೆ, ದಯವಿಟ್ಟು ಈ ವೀಡಿಯೊವನ್ನು ನಿಮ್ಮ ಸ್ನೇಹಿತರಿಗೆ ಫಾರ್ವರ್ಡ್ ಮಾಡಿ ಇದನ್ನು ಹಿಂದೂ ಪ್ರದೇಶದಲ್ಲಿ ಪ್ರತ್ಯೇಕವಾಗಿ ಮಾರಾಟ ಮಾಡಲಾಗುತ್ತದೆ. ನಿಮ್ಮ ಮಕ್ಕಳ ಬಗ್ಗೆ ಎಚ್ಚರದಿಂದಿರಿ ಮತ್ತು ನೀವುಗಳು ಕೂಡ  ಎಚ್ಚರವಿರಲಿ” ಎಂಬ ಬರಹದೊಂದಿಗೆ ಈ ವಿಡಿಯೋವನ್ನು ವ್ಯಾಪಕವಾಗಿ ಹಂಚಲಾಗುತ್ತಿದೆ. 

  ಇದೇ ವಿಡಿಯೋವನ್ನು 2019, 2020 ರಲ್ಲೂ ಫೇಸ್‌ಬುಕ್‌ ಮೊದಲಾದ ಸೋಶಿಯಲ್‌ ಮೀಡಿಯಾಗಳಲ್ಲಿ ವ್ಯಾಪಕವಾಗಿ ಶೇರ್‌ ಮಾಡಲಾಗಿತ್ತು. "ಚೀನೀ ಕಂಪನಿ, ಲುಪ್ಪೋ, ಕೇಕ್ ಅನ್ನು ಬಿಡುಗಡೆ ಮಾಡಿದೆ, ಒಳಗೆ ಟ್ಯಾಬ್ಲೆಟ್ ಅನ್ನು ಮರೆಮಾಚಿದೆ, ಅದು ಮಕ್ಕಳಿಗೆ ಪಾರ್ಶ್ವವಾಯುವಿಗೆ ಕಾರಣವಾಗುತ್ತದೆ. ದಯವಿಟ್ಟು ಈ ಸಂದೇಶವನ್ನು ಎಲ್ಲಾ ಗುಂಪುಗಳಲ್ಲಿ ಹಂಚಿಕೊಳ್ಳಿ" ಎಂಬ ಬರಹವನ್ನು ಈ ವಿಡಿಯೋದೊಂದಿಗೆ ಆಗ ಹಂಚಲಾಗುತ್ತಿತ್ತು. 

ಆದರೆ, ವಿಡಿಯೋದಲ್ಲಿ ಇರುವ ಕೇಕ್‌ ಉತ್ಪನ್ನ ಬ್ರ್ಯಾಂಡ್ ಭಾರತದಲ್ಲಿ ಲಭ್ಯವಿಲ್ಲ ಎಂದು boomlive.com 2020 ರಲ್ಲಿ ಮಾಡಿದ ವರದಿಯಲ್ಲಿ ಹೇಳಿದೆ. 'ಲುಪ್ಪೊ' ಬ್ರಾಂಡ್‌ನ ಕೇಕ್ ಇಸ್ತಾನ್‌ಬುಲ್‌ನಲ್ಲಿರುವ Şölen ಕಂಪನಿಯ ಟರ್ಕಿಶ್ ಉತ್ಪನ್ನವಾಗಿದೆಯೇ ಹೊರತು ಚೀನೀ ಬ್ರ್ಯಾಂಡ್ ಅಲ್ಲ. ʼಅಮೇರಿಕಾ ಮತ್ತು ಇಸ್ರೇಲ್‌ನಲ್ಲಿ ಉತ್ಪನ್ನವು ಲಭ್ಯವಿದೆʼ ಎಂದು ಪ್ರತಿಪಾದಿಸಿ ಇದೇ ವೀಡಿಯೊ ಅಮೇರಿಕಾದಲ್ಲೂ ವೈರಲ್‌ ಆಗಿತ್ತು ಎಂದು ಬೂಮ್‌ಲೈವ್‌ ವರದಿ ಮಾಡಿದೆ.
 
 ಫ್ಯಾಕ್ಟ್‌ಚೆಕ್

ಟರ್ಕಿಶ್ ಫ್ಯಾಕ್ಟ್ ಚೆಕ್‌ ಮಾಡುವ ಮಾಧ್ಯಮವಾದ ಟೆಯಿಟ್ (teyit.org) ಈ ಪ್ರತಿಪಾದನೆಗಳನ್ನು ತಳ್ಳಿಹಾಕಿದೆ. ವೈರಲ್‌ ಆಗುತ್ತಿರುವ ವಿಡಿಯೊದ ಮೊದಲ ಪ್ರತಿಯನ್ನು ಅಕ್ಟೋಬರ್ 28, 2019 ರಲ್ಲಿ ಟೆಯಿಟ್‌ ಪತ್ತೆ ಹಚ್ಚಿದೆ. 

ಬಾಯಿಯ ಮೂಲಕ ತೆಗೆದುಕೊಳ್ಳುವ ಯಾವುದೇ ಔಷಧಗಳಿಂದ ಪಾರ್ಶ್ವವಾಯುವನ್ನು ಉಂಟುಮಾಡಲು ವೈದ್ಯಕೀಯವಾಗಿ ಸಾಧ್ಯವಿಲ್ಲವಾದರೂ, ಈ ಮಾತ್ರೆಗಳನ್ನು ಯಾರು ಮತ್ತು ಯಾವಾಗ ಕೇಕ್‌ ಒಳಗೆ ಸೇರಿಸಲಾಯಿತು ಎಂಬುದು ವೀಡಿಯೊದಿಂದ ಸ್ಪಷ್ಟವಾಗಿಲ್ಲ.  ವೀಡಿಯೊದ ಕೊನೆಯಲ್ಲಿ ಮಾತನಾಡುತ್ತಿರುವ ಭಾಷೆಯು ಇರಾಕಿ ಕುರ್ದಿಸ್ತಾನ್ ಪ್ರದೇಶದಲ್ಲಿ ಮಾತನಾಡುವ ಕುರ್ದಿಷ್‌ನ ಉಪಭಾಷೆ ಸೊರಾಕೆಯಾಗಿದೆ ಎಂದು ಟೆಯಿಟ್‌ ದೃಡಪಡಿಸಿದೆ. ವಿಡಿಯೋದಲ್ಲಿ  ಸಿಕ್ಕ ಮತ್ತೊಂದು ಸುಳಿವು, ರೆಫ್ರಿಜರೇಟರ್‌ನಲ್ಲಿ ಕಂಡುಬರುವ ಕೋಳಿಯ ಬ್ರ್ಯಾಂಡ್ (ಏಸ್ ಆಸ್ಪಿಲಿಕ್), ಇದು ಮತ್ತೊಂದು ಟರ್ಕಿಶ್ ಉತ್ಪನ್ನವಾಗಿದೆ, ಇದರ ದೊಡ್ಡ ರಫ್ತು ಮಾರುಕಟ್ಟೆ ಇರಾಕ್ ನಲ್ಲಿದೆ.

ಸೋಲೆನ್‌ನ ವಕ್ತಾರರು ಟೆಯಿಟ್‌ನೊಂದಿಗೆ ಮಾತನಾಡುತ್ತಾ, ಲುಪ್ಪೊ ತೆಂಗಿನಕಾಯಿ ಕ್ರೀಮ್ ಕೇಕ್ ಉತ್ಪನ್ನವನ್ನು ಇರಾಕ್‌ನಲ್ಲಿ ಮಾತ್ರ ಮಾರಾಟ ಮಾಡಲಾಗುತ್ತದೆ ಎಂದು ದೃಢಪಡಿಸಿದ್ದಾರೆ. ಕಂಪನಿಯು ವೈರಲ್ ವೀಡಿಯೊದ ಪ್ರತಿಪಾದನೆಯನ್ನು ದೃಢವಾಗಿ ತಿರಸ್ಕರಿಸಿದ್ದು, ಇದು ಸಂಪೂರ್ಣ ಆಧಾರರಹಿತ ಮತ್ತು ಸುಳ್ಳು ಎಂದು ಕಂಪನಿಯ ವಕ್ತಾರರು ತಿಳಿಸಿರುವುದಾಗಿ ಬೂಮ್‌ಲೈವ್‌ ವರದಿ ಹೇಳಿದೆ. 

ಕಂಪೆನಿಯು ಈಗಾಗಲೇ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಲು ಕೋರುತ್ತಿದೆ ಎಂದು ವಕ್ತಾರರು ತಿಳಿಸಿದ್ದರು. ಲುಪ್ಪೊ ಕೇಕ್ ಅನ್ನು ತಯಾರಿಸಿದ ಉತ್ಪಾದನಾ ಪ್ರಕ್ರಿಯೆಯ ಸುರಕ್ಷತಾ ಮಾನದಂಡಗಳು ಮತ್ತು ಪ್ರಮಾಣೀಕರಣಗಳಿಗೆ ಸಂಬಂಧಿಸಿದ ದಾಖಲಾತಿಗಳನ್ನು ಸಹ ಕಂಪೆನಿಯು ಬಿಡುಗಡೆ ಮಾಡಿತ್ತು. 

ಉತ್ತರ ಸಿರಿಯಾದಲ್ಲಿ ಟರ್ಕಿಯ ಪೀಸ್ ಸ್ಪ್ರಿಂಗ್ ಕಾರ್ಯಾಚರಣೆಯ ನಂತರ ಉತ್ತರ ಇರಾಕ್‌ನಲ್ಲಿ ಪ್ರಾರಂಭವಾದ ಟರ್ಕಿಶ್ ಸರಕುಗಳ ವಿರುದ್ಧ ಬಹಿಷ್ಕಾರದ ಪ್ರಯತ್ನದ ಬಳಿಕ ಕಂಪೆನಿಯ ಹೆಸರನ್ನು ಹಾಳುಗೆಡವಲು ಈ ವಿಡಿಯೋ ಹರಿಬಿಟ್ಟಿರಬಹುದು ಎಂದು ಅಂದಾಜಿಸಲಾಗಿದ್ದು, ಸದ್ಯ ಭಾರತದಲ್ಲಿ ಸೇರಿದಂತೆ ವಿಶ್ವದ ಇತರೆಡೆಯಲ್ಲಿ ವೈರಲ್‌ ಆಗುತ್ತಿರುವ ಸಂದೇಶವು ಸುಳ್ಳು ಎಂದು ಸಾಬೀತಾಗಿದೆ. ಬಹಿಷ್ಕಾರದ ಭಾಗವಾಗಿಯೇ ಇಂತಹ ವಿಡಿಯೋಗಳನ್ನು ಹರಿಯಬಿಟ್ಟಿರಬಹುದು ಎಂದು ಬೂಮ್‌ಲೈವ್‌ ವರದಿ ಹೇಳಿದೆ.

ಕೃಪೆ: Boomlive.in

Full View Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News