ಉದ್ಯೋಗ ಬೇಕಾದರೆ ಯುವಕರು ಲಂಚ ಕೊಡಬೇಕು, ಯುವತಿಯರು...: ಪ್ರಿಯಾಂಕ್ ಖರ್ಗೆ

Update: 2022-08-12 10:43 GMT

ಕಲಬುರಗಿ: 'ರಾಜ್ಯ ಸರ್ಕಾರ ಹುದ್ದೆಗಳನ್ನು ಮಾರಾಟ ಮಾಡಲು ನಿಂತಿದೆ. ಯುವತಿಯರಿಗೆ ಉದ್ಯೋಗ ಬೇಕಾದರೆ ಮಂಚ ಹತ್ತಬೇಕು ಯುವಕರಿಗೆ ಉದ್ಯೋಗ ಬೇಕಾದರೆ ಲಂಚ ಕೊಡಬೇಕು ಎನ್ನುವಂತಾಗಿದ್ದು ಇದೊಂದು‌ ಲಂಚದ ಮಂಚದ ಸರ್ಕಾರವಾಗಿದೆ'' ಎಂದು ಚಿತ್ತಾಪುರ ಶಾಸಕ ಪ್ರಿಯಾಂಕ್ ಖರ್ಗೆ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ನಗರದ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ''ಯುವತಿಯ ಕೆಲಸ ಮಾಡಿಸಿಕೊಡಲು ಮಂಚ ಹತ್ತಲು ಸಚಿವರೊಬ್ಬರು ಹೇಳಿದ್ದರು. ಹಗರಣ ಬೆಳಕಿಗೆ ಬಂದ ಬಳಿಕ ಅವರು ರಾಜೀನಾಮೆ ನೀಡಿದ್ದೇ ನನ್ನ ಮಾತಿಗೆ ಸಾಕ್ಷಿಯಾಗಿದೆ'' ಎಂದರು.

''ಪ್ರತಿಯೊಂದು ಪರೀಕ್ಷೆಗಳಲ್ಲಿ ಹೀಗೆ ಅಕ್ರಮ ನಡೆದರೆ ಬಡವರು ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳು ಎಲ್ಲಿಗೆ ಹೋಗಬೇಕು.? ಇದೊಂದು ಅಸಮರ್ಥ ಸರ್ಕಾರವಿದ್ದು ಏನೇ ಅಕ್ರಮ ಮಾಡಿದರೂ ನಡೆಯುತ್ತಿದೆ ಎನ್ನುವುದು ಅಕ್ರಮ ಮಾಡುವವರಿಗೆ ಹಾಗೂ ಮಧ್ಯವರ್ತಿಗಳಿಗೆ ಗೊತ್ತಾಗಿದೆ. ಆದರೆ ಸುಮಾರು 3 ಲಕ್ಷ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಸರ್ಕಾರ ಚೆಲ್ಲಾಟವಾಡುತ್ತಿದೆ ಎನ್ನುವುದು ಗಮನಾರ್ಹ ಸಂಗತಿ'' ಎಂದು ಕಿಡಿಗಾರಿದ್ದಾರೆ.

''ಮೊನ್ನೆ ಮೊನ್ನೆ ನಡೆದ KPTCL ನೇಮಕಾತಿ ಪರೀಕ್ಷೆಯಲ್ಲೂ ಅಕ್ರಮ ನಡೆದಿದೆ. ಜೆಇ ಗೆ ರೂ 30 ಲಕ್ಷ ಹಾಗೂ ಎಇಗೆ ರೂ 50 ಲಕ್ಷ ಲಂಚದ ಬೇಡಿಕೆ ಇಡಲಾಗಿದೆ ಎನ್ನಲಾಗುತ್ತಿದೆ.  ಪಿಎಸ್ಐ ಅಕ್ರಮದ ರೀತಿಯಲ್ಲಿಯೇ KPTCL ನೇಮಕಾತಿಯಲ್ಲಿಯೂ ಬ್ಲ್ಯೂಟೂತ್ ಮೂಲಕ ಅಕ್ರಮ ನಡೆದಿದೆ. ಸ್ಮಾರ್ಟ್ ವಾಚ್ ಮೂಲಕ ಅಕ್ರಮ ನಡೆಸಿದ ಆರೋಪದ ಮೇಲೆ ಗೋಕಾಕನ ಒಬ್ಬ ಯುವಕನನ್ನು ಬಂಧಿಸಲಾಗಿದೆ. ಇಡೀ KPTCL ನಲ್ಲಿ ಕನಿಷ್ಢ ರೂ 300 ಕೋಟಿಗೂ ಹೆಚ್ಚು ಭ್ರಷ್ಟಚಾರ ನಡೆದಿದೆ. ಹಾಗಾಗಿ ಎಲ್ಲ ಪರೀಕ್ಷೆಗಳ ಅಕ್ರಮದ ವಿಚಾರಣೆಗೆ ತ್ವರಿತಗತಿ ನ್ಯಾಯಾಲಯದ ಅವಶ್ಯ ಕತೆ'' ಇದೆ ಎಂದು ಪ್ರತಿಪಾದಿಸಿದರು.

''ಎಸ್ಡಿಎ ಪರೀಕ್ಷೆಯಲ್ಲಿಯೂ ಅಕ್ರಮ''

'ಎಸ್ ಡಿ ಎ ನೇಮಕಾತಿಗೆ ಸಂಬಂಧಿಸಿದಂತೆ 1323 ಹುದ್ದೆ ತುಂಬಲು ಸೆಪ್ಟೆಂಬರ್ 2021 ರಲ್ಲಿ ಪರೀಕ್ಷೆ ನಡೆಸಲಾಗಿತ್ತು. ಆ ಪರೀಕ್ಷೆಯಲ್ಲಿ ಕೂಡಾ ಅಭ್ಯರ್ಥಿಗಳು ಬ್ಲೂಟೂಥ್ ಹಾಗೂ ಮೈಕ್ರೋಫೋನ್ ಬಳಸಿ ಅಕ್ರಮ ನಡೆಸಿದ್ದಾರೆ. ಕೇವಲ ಮೂವರು ಮಾತ್ರ ಡಿಬಾರ್ ಆಗಿದ್ದಾರೆ. ತನಿಖೆ ನಡೆದರೆ ಮತ್ತೆಷ್ಟು ಅಭ್ಯರ್ಥಿಗಳು ಈ ರೀತಿ ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂದು ಗೊತ್ತಾಗಲಿದೆ ಎಂದು ಸರ್ಕಾರದ ಅಧಿಕಾರಿಗಳ ಮಾಹಿತಿ ಇದೆ' ಎಂದು ಅವರು ಹೇಳಿದರು.

''ನಿರುದ್ಯೋಗದ ಪ್ರಮಾಣ ಏರಿಕೆ''

'ದೇಶದಲ್ಲಿ ಹಾಗೂ ರಾಜ್ಯದಲ್ಲಿ ನಿರುದ್ಯೋಗ ಏರಿಕೆಯಾಗುತ್ತಿದೆ ಇದಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹೊಣೆ ಎಂದು ಆರೋಪಿಸಿದ ಖರ್ಗೆ, ಪ್ರಧಾನಿ ಮೋದಿ ಅವರು ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಠಿಸುವುದಾಗಿ ಹೇಳಿದ್ದರು. ರಾಜ್ಯದ 40% ಸರ್ಕಾರವೂ ಕೂಡಾ ರಾಜ್ಯದಲ್ಲಿ ಹುದ್ದೆ ಸೃಷ್ಠಿಸಿ ನಿರುದ್ಯೋಗಿ ವಿದ್ಯಾವಂತರ ಬಾಳಿಗೆ ಬೆಳಕಾಗಬೇಕಾಗಿತ್ತು. ಆದರೆ ದುರಂತ ಎಂದರೆ ಕಳೆದ 50 ವರ್ಷದಲ್ಲೇ ಮೊದಲ ಬಾರಿಗೆ ಇಷ್ಟೊಂದು ಪ್ರಮಾಣದಲ್ಲಿ ನಿರುದ್ಯೋಗ ತಾಂಡವವಾಡುತ್ತಿದೆ. ಇದು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅಧಿಕೃತಿ ಮಾಹಿತಿಯಾಗಿದೆ' ಎಂದರು.

'ಇತ್ತೀಚಿಗೆ ವಿದ್ಯಾರ್ಥಿ ಸಂಘಟನೆಯವರು ಎನ್ನಲಾದ ಯುವಕರು ಗೃಹ ಸಚಿವರ ಮನೆಯ ಮೇಲೆ ದಾಳಿ ನಡೆಸಿದಂತೆ ನಿರುದ್ಯೋಗಿ ಯುವಕರು ಸಿಎಂ ಕಚೇರಿಯ ಮೇಲೆ ದಾಳಿ ಮಾಡಲಿದ್ದಾರೆ' ಎಂದು ಎಚ್ಚರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News