ಗೌರಿ ಲಂಕೇಶ್ ಹತ್ಯೆ ಪ್ರಕರಣದ 2ನೇ ಕಂತಿನ ವಿಚಾರಣೆ ದಿನ ನಡೆದಿದ್ದೇನು?

Update: 2022-08-12 13:18 GMT

ಬೆಂಗಳೂರು,ಆ. 12: ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆ ಪ್ರಕರಣದ 2ನೇ ಕಂತಿನ ವಿಚಾರಣೆಯಯನ್ನು ವೀಕ್ಷಿಸಿದ ಚಿಂತಕ ಶಿವ ಸುಂದರ್ ಅವರು ಅದರ ವಿವಿರವನ್ನು ಫೇಸ್ ಬುಕ್ ನಲ್ಲಿ ಹಂಚಿಕೊಂಡಿದ್ದಾರೆ. 

ಶಿವ ಸುಂದರ್ ಅವರು ಫೇಸ್ ಬುಕ್ ನಲ್ಲಿ ಹಂಚಿಕೊಂಡಿರುವುದು ಇದಿಷ್ಟು

ಆತ್ಮೀಯರೇ,

ಗೌರಿ ಹತ್ಯಾ ಪ್ರಕರಣದ ಎರಡನೇ ಕಂತಿನ ವಿಚಾರಣೆ ಆಗಸ್ಟ್ 10 ಮತ್ತು 11 ರಂದು ನಡೆಯಿತು.

ಈ ಬಾರಿ ಆಗಸ್ಟ್ 8 ರಿಂದ 13ರವರೆಗೆ ವಿಚಾರಣೆ ನಡೆಯಬೇಕಿತ್ತು. ಆದರೆ ಆಗಸ್ಟ್ 8ರಂದು ನ್ಯಾಯಾಧೀಶರು ರಜೆಯಲ್ಲಿದ್ದರು. ಆಗಸ್ಟ್ 9 ಮೊಹರಂ ಹಬ್ಬದ ಪ್ರಯುಕ್ತ ಸಾರ್ವಜನಿಕ ರಜೆ. SPP ಬಾಲನ್ ಅವರು ಕಾಲಿಗೆ ತುರ್ತು  ಸರ್ಜರಿ ಮಾಡಿಸಿಕೊಳ್ಳಬೇಕಿದ್ದರಿಂದ 11 ರಂದು ಮಧ್ಯಾಹ್ನ ಆಸ್ಪತ್ರೆಗೆ ಅಡ್ಮಿಟ್ ಆಗಬೇಕಿತ್ತು . ಹೀಗಾಗಿ ಈ ತಿಂಗಳು ಕೇವಲ ಒಂದೂವರೆ ದಿನ ಮಾತ್ರ ವಿಚಾರಣೆ ನಡೆಯಿತು. 

ಈ ಒಂದೂವರೆ ದಿನದಲ್ಲಿ 8 ಸಾಕ್ಷಿಗಳನ್ನು ವಿಚಾರಣೆ ಮಾಡಲಾಯಿತು. 

ಯಂಕಣ್ಣ ಎಂಬ ಸಾಕ್ಷಿ ತುಮಕೂರಿನ SSIT ಯಲ್ಲಿ MS communication ಮುಗಿಸಿ ಟಿವಿ ಒಂದಕ್ಕೆ ಸಂದರ್ಶನವನ್ನು ನೀಡಿ ಬೇರೆ ಕೆಲಸ ಹುಡುಕುತ್ತಾ  ಗೌರಿ ಮನೆಯ ಎದುರಿಗೆ ಎಡಭಾಗಕ್ಕೆ ಖಾಲಿ ನಿವೇಶನದ ಶೆಡ್ ಒಂದರಲ್ಲಿದ್ದ ತನ್ನ ಸ್ನೇಹಿತರ ಜೊತೆ ಇದ್ದವರು. ಘಟನೆ ನಡೆದ ದಿನ ಅವರು ಗುಂಡಿನ ಸದ್ದು ಕೇಳಿ ಹೊರಬಂದಾಗ ಪ್ಯಾಷನ್ ಪ್ರೊ ಮಾಡೆಲ್ಲಿನ ಬೈಕಿನಲ್ಲಿ ಇಬ್ಬರು ಸವಾರರು ಗೌರಿ ಮನೆಯ ಕಡೆಯಿಂದ  ತಾವಿದ್ದ ಕಂಪೌಂಡ್ ಅನ್ನು ದಾಟಿಕೊಂಡು ಎಡಭಾಗದಲಿದ್ದ ಸುಭಾಷ್ ಪಾರ್ಕಿನ ಕಡೆಗೆ ಹೋಗಿದ್ದನ್ನು  ನೋಡಿರುವುದಾಗಿ ಸಾಕ್ಷಿ ಹೇಳಿದರು. ಅವರು ಹೋದ ಐದಾರು ಸೆಕೆಂಡುಗಳಲ್ಲಿ  ಮತ್ತೊಂದು ಬೈಕಿನಲ್ಲಿ ಇಬ್ಬರು ಸವಾರರು ಗೌರಿ ಮನೆಯ ಮುಂದೆ ಬಂದು ನಿಂತರೆಂದು, (ಕೇಬಲ್ ಆಪರೇಟರ್ )ತನಗೆ ಭಯವಾಗಿ ಶೆಡ್ ಒಳಗೆ ಹೋಗಿರುವುದಾಗಿ ಹೇಳಿದರು.  ಗಾಡಿಯನ್ನು ಕೂಡ ಕೋರ್ಟಿಗೆ ತರಲಾಗಿತ್ತು. ಅದನ್ನು ನೋಡಿ ಅದೇ ಗಾಡಿ ಎಂದು ಗುರುತಿಸಿದರು. (ಎಸ್ ಐಟಿ ಪ್ರಕಾರ ಈ ಬೈಕನ್ನು ಮತ್ತೊಬ್ಬ ಆರೋಪಿ ಸೂರ್ಯವಂಶಿ ಈ ಅಪರಾಧ ನಡೆಸಲು ಕದ್ದಿದ್ದು ಅದನ್ನು ಮಹಾರಾಷ್ಟ್ರ ಗಡಿ ಭಾಗದಲ್ಲಿ ವಶಪಡಿಸಿಕೊಳ್ಳಲಾಗಿತ್ತು )

ಸ್ನೇಹ ಎಂಬ Cyber Forensic Expert ಸಾಕ್ಷಿ  Incognito Forensic Foundation ನಲ್ಲಿ ಕೆಲಸ ಮಾಡುವವರು , ಪೊಲೀಸರು ತಮ್ಮ ಕಂಪನಿಗೆ ಸೆಪ್ಟೆಂಬರ್ 6 ರಂದು  ಸೀಲ್ ಆದ ಕವರಿನಲ್ಲಿ ಡಿವಿಆರ್  ಗಳನ್ನೂ ಸೈಬರ್ ವಿಶ್ಲೇಷಣೆ ತಂದುಕೊಟ್ಟರೆಂದು , ತಾನು ಅದನ್ನು ಪಡೆದುಕೊಂಡು ಸಹಿ ಹಾಕಿಕೊಟ್ಟನೆಂದು ಸಾಕ್ಷಿ ಹೇಳಿದರು. ಹಾಗೂ ಆ ಡಿವಿಆರ್ ಮತ್ತು ಇತರ ವಸ್ತುಗಳನ್ನು ಕೋರ್ಟಿನಲ್ಲಿ ಗುರುತಿಸಿದರು. 

ರವಿಕುಮಾರ್ ಎಂಬ ಸಾಕ್ಷಿ ಸೆಪ್ಟಂಬರ್ 6ರ ಬೆಳಗಿನ ಜಾವ  ಮಂಡ್ಯದಿಂದ ವಾಪಸ್ ಬೆಂಗಳೂರಿಗೆ ಬರುವಾಗ 2.30ರ ಸುಮಾರಿಗೆ ಖಖ ನಗರ ಆರ್ಚ್ ಬಳಿ ಟೀ ಕುಡಿಯುತ್ತಿರುವಾಗ ಪೊಲೀಸರು ಬಂದು ಗೌರಿ ಹತ್ಯಾ ಪ್ರಕರಣದ ವಿಚಾರಣೆಯಲ್ಲಿ ಪಂಚರಾಗಿ ಸಹಾಯ ಮಾಡಲು ಕರೆದರೆಂದು , ಅವರ ಜೊತೆ ಖಖ ನಗರದ ಠಾಣೆಗೆ ಹೋದವೆಂದು ಸಾಕ್ಷಿ ಹೇಳಿದರು. ಅವರ ಸಮ್ಮುಖದಲ್ಲಿ ಸೀಲ್ ಆದ ಡಿವಿಆರ್ ಅನ್ನು ಹೊರತೆಗೆದು ತಮ್ಮ ಸಮ್ಮುಖದಲ್ಲೇ ಪ್ಲೆ ಮಾಡಿದರೆಂದೂ ..ಅದರಲ್ಲಿ ಗೌರಿಯವರು ಕಾರ್ ಬಾಗಿಲು ತೆಗೆದು ಹೊರಬರುತ್ತಿದ್ದಂತೆ ಒಬ್ಬರು ಹೆಲ್ಮೆಟ್ ಧರಿಸಿದ ವ್ಯಕ್ತಿ ಶೂಟ್ ಮಾಡಿದ್ದು ಹಾಗೂ ಗೌರಿ ಯವರು ಹಿಂದೆ ಸರಿಯುತ್ತಾ ಮನೆಯ ಬಾಗಿಲ ಕಡೆಗೆ ಹೋಗಿ ಕುಸಿದು ಬಿದ್ದದ್ದು ಕಂಡಿತೆಂದು ತಿಳಿಸಿದರು. 

ಆದರೆ ಈ ದೃಶ್ಯಾವಳಿಗಳನ್ನು ಆರೋಪಿ ಪರ ವಕೀಲರಿಗೆ ಕೊಟ್ಟಿರಲಿಲ್ಲ. ಹೀಗಾಗಿ ಪಾಟಿ ಸವಾಲು ಸಾಧ್ಯವಿರಲಿಲ್ಲವಾದ್ದರಿಂದ ಆ ಸಾಕ್ಷಿ ಹೇಳಿಕೆಯನ್ನು ಅಷ್ಟಕ್ಕೇ ನಿಲ್ಲಿಸಲಾಯಿತು. 

ಡಿವಿಆರ್ ಮತ್ತು ಅದರೊಳಗಿನ ಹಾರ್ಡ್ ಡಿಸ್ಕ್ ಗಳನ್ನೂ ಅಪರಾಧ ಸಾಕ್ಷಿಯಾಗಿ ವಶಪಡಿಸಿಕೊಳ್ಳುವಾಗ ತನಿಖಾಧಿಕಾರಿಗಳು ಸರಿಯಾದ ವಿಧಾನ ಅನುಸರಿಸಿಲ್ಲವೆಂದು ನ್ಯಾಯಾಧೀಶರು ಸರ್ಕಾರಿ ವಕೀಲರನ್ನು ಪ್ರಶ್ನಿಸಿದರು. ತನ್ನನ್ನು ತನಿಖೆಯೆಲ್ಲ ಪೂರ್ತಿಯಾದ ನಂತರವೇ SPP ಮಾಡಿರುವುದರಿಂದ ತನಿಖೆಯ ಸಂದರ್ಭದಲ್ಲಿ ಆಗಿರಬಹುದಾದ  ತಪ್ಪುಗಳ ಪ್ರಶ್ನೆಗಳಿಗೆ ವಿವರಣೆಯನ್ನು ತನಿಖಾಧಿಕಾರಿಗಳೇ (I. O) ಕೊಡುತ್ತಾರೆಂದೂ  ಬಾಲನ್ ಪ್ರತುತ್ತರ ನೀಡಿದರು. ಹಾಗೂ ಅಡಿ ಪಿಕ್ ಯ ಸೂಕ್ತ ಕಲಮುಗಳ ರೀತ್ಯ   ಈ ವಿಷಯದ ಕುರಿತು ಅರ್ಜಿ ಹಾಕುವುದಾಗಿಯೂ , ಆರೋಪಿ ಪರ ವಕೀಲರಿಗೂ ಅದನ್ನು ಒದಗಿಸುವುದಾಗಿಯೂ ಈ ಸಾಕ್ಷಿಯನ್ನು ಆ ನಂತರವೇ ವಿಚಾರಣೆ ಮಾಡುವುದಾಗಿಯೂ ಹೇಳಿದರು. ಕೋರ್ಟು ಸಮ್ಮತಿಸಿತು . 

ಸಿದ್ದೇಶ್ವರ ಎಂಬ ಸರ್ಕಾರಿ ನೌಕರರನ್ನು ಪೊಲೀಸರು ಆರೋಪಿ ಕೇಟಿ ನವೀನಕುಮಾರ್ ಅವರನ್ನು ಅಪರಾಧ ಸಂಚು ಮಾಡಲಾದ ವಿಜಯನಗರದ ಮೆಟ್ರೋ ಪಿಲ್ಲರ್ 276 ರ ಬಳಿ ಇರುವ ಆದಿ ಚುಂಚನಗಿರಿ ಮಠದ ಎದುರಿನ ಪಾರ್ಕ್ ಗೆ ಕರೆದುಕೊಂಡು ಹೋದಾಗ ಪಂಚ ರಾಗಿ ಸಾಕ್ಷಿಯಾಗಲು ಕರೆಸಿದ್ದರು. ಅದರಂತೆ ಅವರು ನವೀನ ಕುಮಾರ್ ಅವರನ್ನು ತನ್ನ ಸಮಕ್ಷಮದಲ್ಲಿ ತನ್ನ ಜೊತೆಗೆ ಕರೆದುಕೊಂಡು ಹೋದರೆಂದೂ ,  ವಿಜಯನಗರದ ಬಳಿಯ ಆದಿ ಚುಂಚನಗಿರಿ ಪಾರ್ಕ್ ನಲ್ಲಿ ಅವರೂ ಕೂತು ಸಂಚು ಮಾಡಿದ ಜಾಗವನ್ನು ನವೀನ ಕುಮಾರ್ ತೋರಿಸಿದರೆಂದು ಹೇಳಿದರು. ಮತ್ತು ಅದಕ್ಕೆ ಸಂಬಂಧಪಟ್ಟ ಫೋಟೋದಲ್ಲಿ ನವೀನ್ ಕುಮಾರ್ ಅವರನ್ನು ಗುರುತಿಸಿದರು.

ಶಿವಸ್ವಾಮಿ ಎಂಬ ಪೇದೆ ಸೆಪ್ಟೆಂಬರ 5 ರಂದು ರಾತ್ರಿ 10 ಗಂಟೆಗೆ ಮೇಲಧಿಕಾರಿಗಳ ಆದೇಶದ ಮೇರೆಗೆ ಕವಿತಾ ಅವರಿಂದ ಅಪರಾಧ ನಡೆದ ಸ್ಥಳದಲ್ಲೇ ಬರೆಸಿಕೊಳ್ಳಲಾದ  ದೂರನ್ನು ಪೊಲೀಸ್ ಠಾಣೆಗೆ ತಲುಪಿಸಿದ್ದನ್ನು ಸಾಕ್ಷಿ ನುಡಿದರು ಮತ್ತು ಆ ದೂರನ್ನು ಗುರುರ್ತಿಸಿದರು. 

VB ಕೇಳ್ಕೆರಿಯವರು PWಆ ಇಲಾಖೆಯಲ್ಲಿ ಸಹಾಯಕ ಇಂಜನಿಯರ್ ಆಗಿ ಕೆಲಸ ಮಾಡುವವರು. ಪೊಲೀಸರ ಮನವಿ ಮತ್ತು ತಮ್ಮ ಮೇಲಧಿಕಾರಿಯ ಆದೇಶದ ಮೇರೆಗೆ ಅಪರಾಧ ಸ್ಥಳದ ಸ್ಕೆಚ್ ಮಾಡಿಕೊಟ್ಟಿದ್ದಾಗಿ ಸಾಕ್ಷಿ ನುಡಿದರು ಮತ್ತು ಅದನ್ನು ಕೋರ್ಟಿನಲ್ಲಿ ನ್ಯಾಯಾಧೀಶರ ಸಮಕ್ಷಮ ಗುರುತಿಸಿದರು. 

ಶಿವಾರೆಡ್ಡಿ ಯವರು ಘಟನೆ ನಡೆದಾಗ ಖಖ ನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಆಗಿದ್ದವರು. ಅವರು ಸೆಪ್ಟೆಂಬರ್ 5 ರ ರಾತ್ರಿ 8. 20 ರ ಸುಮಾರಿಗೆ ಸಾರ್ವಜನಿಕರೊಬ್ಬರು ಗೌರಿ ಮನೆಯ ಮುಂದೆ ಗೌರಿಯವರು ಕುಸಿದು ಬಿದ್ದಿರುವ ಬಗ್ಗೆ ಫೋನ್ ಮಾಡಿ ವರದಿ ಕೊಟ್ಟ ಬಗ್ಗೆ, ಅದನ್ನು ಅನುಸರಿಸಿ ತಾವು 8.40 ಕ್ಕೆ ಗೌರಿ ಮನೆಯ ಬಳಿ ಹೋದಾಗ ಗೌರಿ ಮೃತರಾಗಿದ್ದನ್ನು ನೋಡಿದ ಬಗ್ಗೆ , ತಾವು ತಲುಪಿದ ಐದು ನಿಮಿಷದಲ್ಲೇ ಕೆಂಗೇರಿ ಠಾಣೆಯ ACP ಪ್ರಕಾಶ್ ಸ್ಥಳಕ್ಕೆ ಬಂದು ಉಸ್ತುವಾರಿ ವಹಿಸಿಕೊಂಡು ತನಗೆ ಅಪರಾಧಾ ಸ್ಥಳವನ್ನು ಸಾರ್ವಜನಿಕರಿಂದ ರಕ್ಷಿಸುವ ಉಸ್ತುವಾರಿ ಕೊಟ್ಟ ಬಗ್ಗೆ ಹಾಗೂ ಅಂದು ರಾತ್ರಿ ಕವಿತಾ ಕೊಟ್ಟ ದೂರನ್ನು ಪೇದೆಯ ಮೂಲಕ ಠಾಣೆಗೆ ಕಳಿಸಿದ ಬಗ್ಗೆ , ಹಾಗೂ ಆ ನಂತರ ಗೌರಿ ಮನೆಯ ಸುತ್ತಮುತ್ತಲ ಕೆಲವು ಅಪಾರ್ಟ್ ಮೆಂಟ್ ಮತ್ತು ಚನ್ನಬಸಪ್ಪ ಆಸ್ಪತ್ರೆಯಿಂದ ಸಿಸಿಟಿವಿ ಡಿವಿಆರ್ ಅನ್ನು ಪಂಚರ ಸಮಕ್ಷಮದ  ವಶಪಡಿಸ್ಕೊಂಡ ಬಗ್ಗೆ , ಮಾರನೇ ದಿನ ಗೌರಿಯವರ ಆಫೀಸನ್ನು ಸೀಜ್ ಮಾಡಿದ ಬಗ್ಗೆ ಹಾಗೂ ಕವಿತಾ ಅವರ ಮನೆಗೆ ತೆರಳಿ ಕೆಲವು ತಿದ್ದುಪಡಿಗಳೊಂದಿಗೆ ಅವರು ಕೊಟ್ಟ ಮರುದೂರನ್ನು ಪಡೆದುಕೊಂಡ ಬಗ್ಗೆ ಹಾಗೂ 2018ರ ಜೂನ್ ನಲ್ಲಿ ಪರಶುರಾಮ್ ವಾಘಮೋರೆ ಬಂಧನವಾದ ನಂತರ 22 ಜೂನ್ ರಂದು ಆತನನ್ನು ಅಪರಾಧ ಸ್ಥಳಕ್ಕೆ ಕರೆತಂದು ಅಂದು ಆತ ಹಾಕಿದ ದಿರಿಸಿನಂತದ್ದೇ  ದಿರಿಸನ್ನು ಹಾಗೂ ಗೌರಿ ಕಾರನ್ನು ಹೋಲುವಂತ ಕಾರನ್ನೇ ತಂದು  ಅಪರಾಧ ಚಿತ್ರಣವನ್ನು ಮರು ಸೃಷ್ಟಿ ಮಾಡಿದರೆ ಬಗ್ಗೆ ಸಾಕ್ಷಿ ನುಡಿದರು. 

ವಿನೋದ್ ಕುಮಾರ್ ಎಂಬ  ಪೇದೆ ತಾನು ಮೇಲಾಧಿಕಾರಿಯ ಆದೇಶದ ಮೇರೆಗೆ ಸೆಪ್ಟೆಂಬರ್ 6 ರಂದು ಬೆಳಿಗ್ಗೆ ವಿಕ್ಟೊರಿಯಾ ಆಸ್ಪತ್ರೆಗೆ ತೆರಳಿ ಅಲ್ಲಿ ಗೌರಿ ಅವರ ಶವದ ಪಂಚನಾಮೆಯನ್ನು ಅಲ್ಲಿ ಹಾಜರಿದ್ದ ಪಂಚರ ಸಮಕ್ಷಮದಲ್ಲಿ ಮೇಲಧಿಕಾರಿ ಹೇಳಿದಂತೆ ಬರೆದುಕೊಂಡ ಬಗ್ಗೆ , ಹಾಗೂ ಅಂದು ಸಂಜೆ ಮೇಲಾಧಿಕಾರಿಯ ಜೊತೆ ಸೇರಿ ಗೌರಿ ಆಫೀಸನ್ನು ಪಂಚರ ಎದುರು ಸೀಜ್ ಮಾಡಿದ ಬಗ್ಗೆ ಹೇಳಿಕೆ ನೀಡಿದರು. 

ರವಿಕುಮಾರ್ ಅವರನ್ನು ಹೊರತುಪಡಿಸಿ ಮಿಕ್ಕೆಲ್ಲಾ ಸಾಕ್ಷಿಗಳನ್ನು ಆರೋಪಿ ಪರ ವಕೀಲರು ಪಾಟೀಸವಾಲು ಮಾಡಿದರು. 

ವಿಚಾರರಣೆಗಳೆಲ್ಲಾ ಮುಗಿದ ನಂತರ ಗಣೇಶ್ ಮಿಸ್ಕಿನ್ ಎಂಬ ಆರೋಪಿ ಪರ ವಕೀಲರು ಅವರಿಗೆ ವೆರಿಕೋವೆಯ್ನ್ ಸಮಸ್ಯೆ ಇರುವುದರಿಂದ ಸೂಕ್ತ ವೈದ್ಯಕೀಯ ಆರೈಕೆಗೆ ಆದೇಶ ಕೋರಿದರು. ಜೈಲು ಆಸ್ಪತ್ರೆಯ ವೈದ್ಯರ ಸಲಹೆಯ ಮೇರೆಗೆ ವಿಕ್ಟೊರಿಯಾ ಆಸ್ಪತ್ರೆಗೆ ತೋರಿಸಬಹುದೆಂದೂ, ಅಲ್ಲಿಯೂ ಸರಿಹೋಗಲಿಲ್ಲವೆಂದರೆ ತಮ್ಮ ಸ್ವಂತ ಖರ್ಚಿನಲ್ಲಿ  ಸೂಕ್ತ ಬಂದೋಬಸ್ತಿನೊಂದಿಗೆ ಖಾಸಗಿ ವೈದ್ಯರ ಸೇವೆ ಬಳಸಿಕೊಳ್ಳಬಹುದೆಂದು ಆದೇಶಿಸಿದರು. 

ಮುಂದಿನ ವಿಚಾರಣೆ ಸೆಪ್ಟಂಬರ್ 5 ರಿಂದ 9ರವರೆಗೆ ನಡೆಯಲಿದೆ. (ಸೆಪ್ಟಂಬರ್ 5ಕ್ಕೆ ಗೌರಿ ಹತ್ಯೆಯಾಗಿ ಐದು ವರ್ಷ ಗಳಾಗುತ್ತವೆ )

ಆದರೆ ಸದರಿ ನ್ಯಾಯಾಧೀಶರಾದ ನ್ಯಾ. ಜೋಶಿಯವರು ಹೈಕೋರ್ಟಿಗೆ ಮುಂಬಡ್ತಿ ಪಡೆದಿದ್ದಾರೆ.

ಸೆಪ್ಟಂಬರ್ ಒಳಗೆ ಅವರ ನೇಮಕಾತಿ ಆದೇಶ ಬರಬಹುದು. ಹಾಗೊಂದು ವೇಳೆ ನಡೆದರೆ ಈ ಕೋರ್ಟಿಗೆ ಹೊಸ ನ್ಯಾಯಾಧೀಶರು ಎಂದು ಬರುತ್ತಾರೆ ಮತ್ತು ಅವರೂ ಸಹ ಪ್ರತಿ ತಿಂಗಳೂ ವಿಚಾರಣೆಗೆ ನ್ಯಾ. ಜೋಶಿಯವರಂತೆ ಸಮಯ ಕೊಡುವ ನಿರ್ಧಾರ ಮಾಡುತ್ತಾರೋ ಗೊತ್ತಿಲ್ಲ. 

- ಶಿವಸುಂದರ್

Full View

Writer - -ಶಿವ ಸುಂದರ್

contributor

Editor - -ಶಿವ ಸುಂದರ್

contributor

Similar News