ಸ್ವಾತಂತ್ರ್ಯ ಅಮೃತ ಮಹೋತ್ಸವ; ತಮ್ಮ ಮನೆಗಳಲ್ಲಿ ಧ್ವಜಾರೋಹಣ ನೆರವೇರಿಸಿದ ಗಣ್ಯರು

Update: 2022-08-13 13:43 GMT

ಬೆಂಗಳೂರು: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ‘ಹರ್ ಘರ್ ತಿರಂಗಾ ಅಭಿಯಾನ'ಕ್ಕೆ ಕರೆ ನೀಡಿದ್ದು, ಈ ಹಿನ್ನೆಲೆಯಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಸಚಿವರು ಹಾಗೂ ಶಾಸಕರು ಸೇರಿದಂತೆ ಹಲವು ಮಂದಿ ಪ್ರಮುಖರು ತಮ್ಮ ಮನೆಗಳಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸುವ ಮೂಲಕ ಗೌರವ ಸಲ್ಲಿಸಿದರು.

ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ತಮ್ಮ ನಿವಾಸದ ಬಾಲ್ಕನಿಯಲ್ಲಿ ನಿಂತಿ ತ್ರಿವರ್ಣ ಧ್ವಜವನ್ನು ಹಾರಿಸಿದರು. ಅದೇ ರೀತಿಯಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ತಮ್ಮ ಅಧಿಕೃತ ನಿವಾಸ ಕಾವೇರಿ ನಿವಾಸದಲ್ಲಿ ಧ್ವಜಾರೋಹಣ ಮಾಡಿದರು. ಕಂದಾಯ ಸಚಿವ ಆರ್.ಅಶೋಕ್, ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಸೇರಿದಂತೆ ಹಲವು ಗಣ್ಯರು ತಮ್ಮ ನಿವಾಸಗಳ ಮುಂಭಾಗದಲ್ಲಿ ಧ್ವಜಾರೋಹಣ ನೆರವೇರಿಸಿ ಗೌರವ ಸಲ್ಲಿಕೆ ಮಾಡಿದರು.

ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಹುಬ್ಬಳ್ಳಿಯ ನಮ್ಮ ಮನೆಯಲ್ಲಿ ಕುಟುಂಬ ಸದಸ್ಯರೊಂದಿಗೆ ಧ್ವಜಾರೋಹಣ ಮಾಡಿದರು. ಸಚಿವೆ ಶಶಿಕಲಾ ಜೊಲ್ಲೆ ಯಕ್ಸಂಬಾ ಪಟ್ಟಣದ ನಮ್ಮ ನಿವಾಸದಲ್ಲಿ ಧ್ವಜಾರೋಹಣ ನೆರವೇರಿಸಿದರು. ಟ್ವಿಟ್ಟರ್‍ನಲ್ಲಿ ಫೋಟೋ ಹಂಚಿಕೊಂಡಿರುವ ಅವರು, ಮನೆ-ಮನದಲ್ಲಿ ರಾರಾಜಿಸಲಿ ನಮ್ಮ ಹೆಮ್ಮೆಯ ರಾಷ್ಟ್ರಧ್ವಜ. ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ಆ.13ರ ಮುಂಜಾನೆಯಿಂದ ಆ.15ರ ಸಂಜೆಯವರೆಗೆ ಎಲ್ಲರೂ ತಮ್ಮ ತಮ್ಮ ಮನೆಯ ಮೇಲೆ ತ್ರಿವರ್ಣ ಧ್ವಜ ಹಾರಿಸುವ ಮೂಲಕ ಈ ಒಂದು ದೇಶ ಭಕ್ತಿಯ ಅಭಿಯಾನದಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದ್ದಾರೆ.

‘ರಾಷ್ಟ್ರಧ್ವಜವನ್ನು ಹಿಡಿದುಕೊಳ್ಳಲು ಮತ್ತು ಅದಕ್ಕೆ ನನ್ನ ಅಚಲ ನಿಷ್ಠೆಯನ್ನು ಪ್ರತಿಜ್ಞೆ ಮಾಡಲು ನಾನು ಯಾವಾಗಲೂ ಹೆಮ್ಮೆಪಡುತ್ತೇನೆ. ಇದು ನಮ್ಮ ಸ್ವಾತಂತ್ರ್ಯದ ದೊಡ್ಡ ಸಂಕೇತವಾಗಿದೆ. ಸ್ವಾತಂತ್ರ್ಯದ ಅಮೃತಮಹೋತ್ಸವದ ಸಂದರ್ಭದಲ್ಲಿ ನಾನು ಭಾರತೀಯರಾದ ನಾವೆಲ್ಲರೂ ಸೌಹಾರ್ದಯುತವಾಗಿ ಬದುಕುವ ಮಹಾನ್ ಆದರ್ಶವನ್ನು ಈಡೇರಿಸಲೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ'

-ಎಚ್.ಡಿ.ದೇವೇಗೌಡ, ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News