ಸ್ವಾತಂತ್ರ್ಯದ ಜಾಹೀರಾತು: ನೆಹರೂ ಹೆಸರು ಕೈಬಿಟ್ಟು ಸಾವರ್ಕರ್ ಫೋಟೋ ಹಾಕಿದ ರಾಜ್ಯ ಸರಕಾರ

Update: 2022-08-14 07:10 GMT

ಬೆಂಗಳೂರು: ಕರ್ನಾಟಕ(Karnataka) ಸರಕಾರ ಸ್ವಾತಂತ್ರ್ಯದ ಅಮೃತ ಮಹೋತ್ಸವ(Azadi Ka Amrit Mahotsav) ಅಂಗವಾಗಿ ಇಂದು ಕನ್ನಡದ ದಿನಪತ್ರಿಕೆಗಳಿಗೆ ನೀಡಿರುವ ಜಾಹೀರಾತಿನಲ್ಲಿ ಸಾವರ್ಕರ್(Savarkar) ಪೋಟೋ ಸೇರಿಸಿ ದೇಶದ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರೂ(Jawaharlal Nehru) ಅವರನ್ನು ಕೈಬಿಟ್ಟಿರುವುದಕ್ಕೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. 

ಸರಕಾರ ದಿನಪತ್ರಿಕೆಗಳಿಗೆ ನೀಡಿರುವ ಜಾಹೀರಾತಿನಲ್ಲಿ ಮಹಾತ್ಮ ಗಾಂಧೀಜಿ, ಸುಭಾಷ್ ಚಂದ್ರಬೋಸ್‌, ಸರ್ದಾರ್‌ ವಲ್ಲಭಭಾಯಿ ಪಟೇಲ್‌, ಲಾಲ್‌ ಬಹದ್ದೂರ್‌ ಶಾಸ್ತ್ರಿ, ಮೌಲಾನ ಅಬ್ದುಲ್‌ ಕಲಾಂ ಆಝಾದ್‌,ಡಾ.ಬಿ.ಆರ್‌.ಅಂಬೇಡ್ಕರ್‌ ಸಹಿತ ಇತರ ನಾಯಕರ ಫೋಟೋಗಳ ಜೊತೆಗೆ ಬ್ರಿಟಿಷ್ ಸರಕಾರದೊಂದಿಗೆ ಕ್ಷಮೆ ಕೇಳಿದ ಸಾವರ್ಕರ್‌ ಫೋಟೋವನ್ನು ‘ಕ್ರಾಂತಿಕಾರಿ’ ಎಂಬ ಬಿರುದಿನೊಂದಿಗೆ ಪ್ರಕಟಿಸಿರುವುದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. 

ಅಲ್ಲದೇ ಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌ ಅವರನ್ನು ಎರಡನೇ ಸಾಲಿನಲ್ಲಿಟ್ಟು ಸಾವರ್ಕರ್ ರನ್ನು ಮೊದಲ ಸಾಲಿನಲ್ಲಿ ಇಟ್ಟಿರುವುದಕ್ಕೂ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಸರಕಾರದ ಈ ಜಾಹೀರಾತಿಗೆ ರಾಜ್ಯದ ಹಿರಿಯ ಲೇಖಕರ ಸಹಿತ ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

"ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ರಾಜ್ಯ ಸರ್ಕಾರ ಮಾಧ್ಯಗಳಿಗೆ ನೀಡಿದ ಜಾಹಿರಾತಿನಲ್ಲಿ ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಪಟ ಇಲ್ಲ.ಅಂದಿನ ಹೋರಾಟದಲ್ಲಿ ಹತ್ತು ವರ್ಷಕ್ಕಿಂತ ಹೆಚ್ಚು ಕಾಲ ಸೆರೆಮನೆ ವಾಸ ಅನುಭವಿಸಿದ ಅಪಾರ ತ್ಯಾಗ ಮಾಡಿದ ನೆಹರೂ ಅವರನ್ನು ಕಡೆಗಣಿಸುವಷ್ಟು ಸಣ್ಣ ತನ ಒಳ್ಳೆಯದಲ್ಲ. ಬ್ರಿಟಿಷ್ ಸರಕಾರಕ್ಕೆ ಕ್ಷಮಾಪಣೆ ಕೇಳಿ ಜೈಲಿನಿಂದ ಹೊರಗೆ ಬಂದವರ ಪಟ ಹಾಕುವ ಸಿ.ಎಂ.ಬಸವರಾಜ ಬೊಮ್ಮಾಯಿಯವರೇ ನಿಮ್ಮ ಅಧಿಕಾರಾವಧಿಯಲ್ಲಿ ಇಂಥ ಅಪಚಾರ ನಡೆಯಬಾರದಿತ್ತು" ಎಂದು ಹಿರಿಯ ಲೇಖಕ ಸನತ್ ಕುಮಾರ್ ಬೆಳಗಲಿ ಅವರು ಪೋಸ್ಟ್ ಮಾಡಿದ್ದಾರೆ. 

"ಕ್ಷಮೆ ಕೇಳಿ ಅಂಡಮಾನ್ ಜೈಲಿನಿಂದ ಹೊರಬಂದು ಸ್ವಾತಂತ್ರ್ಯ ಹೋರಾಟದಿಂದ ವಿಮುಖನಾದ ಸಾವರ್ಕರ್ ಪಟ ಇದೆ. ಅದೇ ಅಂಡಮಾನ್ ಜೈಲಿನಲ್ಲಿ ಒಂದು ದಿನವೂ ವಿಚಲಿತರಾಗದೆ, ಬ್ರಿಟಿಷ್ ಪ್ರಭುತ್ವಕ್ಕೆ ತಲೆಬಾಗದೆ ಕರಿನೀರು ಶಿಕ್ಷೆಯನ್ನು ಅನುಭವಿಸಿದ, ಅಲ್ಲಿಯೇ ಅಮರರಾದ ಪ್ರಮುಖ ಕ್ರಾಂತಿಕಾರಿಗಳ ಉಲ್ಲೇಖ ಇಲ್ಲ. ಬ್ರಿಟಿಷ್ ಗಲ್ಲುಗಂಭದಲ್ಲಿ ಕೊರಳೊಡ್ಡಿ ಹುತಾತ್ಮರಾದ ರಾಮ್ ಪ್ರಸಾದ್ ಭಿಸ್ಮಿಲ್, ಅಶ್ಫಖುಲ್ಲಾ ಖಾನ್ ಎಂಬ ಅಮರ ಕ್ರಾಂತಿಕಾರಿ ಜೋಡಿಗೂ ಇವರ "ಸರಕಾರಿ" ಜಾಹೀರಾತಿನಲ್ಲಿ ಜಾಗ ಇಲ್ಲ. ಇಂತಹ ಬಿಜೆಪಿ ಪಕ್ಷವನ್ನು "ದೇಶಭಕ್ತರ ಪಕ್ಷ" ಎಂದು ನಾವು ನಂಬ ಬೇಕು." ಎಂದು ಡಿವೈಎಫ್ ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸರಕಾರದ ಜಾಹೀರಾತಿನಲ್ಲಿ ರೇಖಾಚಿತ್ರದಲ್ಲಿಯೂ ರಾಷ್ಟ್ರನಾಯಕರ ಫೋಟೋಗಳನ್ನು ಬಳಸಲಾಗಿದ್ದು, ಅಲ್ಲಿ ನೆಹರೂ ಅವರ ಚಿತ್ರವನ್ನು ನೀಡಲಾಗಿದೆ. ರೇಖಾಚಿತ್ರದಲ್ಲಿಯೂ ಸಾವರ್ಕರ್‌ ಚಿತ್ರವನ್ನು ನೆಹರೂ ಅವರಿಗಿಂತ ಮೇಲೆ ಇಡಲಾಗಿದೆ.

ನೆಹರೂ ಹೆಸರನ್ನು ಜಾಹೀರಾತಿನಿಂದ ಕೈ ಬಿಟ್ಟಿರುವುದು ಅಕ್ಷಮ್ಯ: ಡಿಕೆಶಿ ಆಕ್ರೋಶ

"ಸಾರ್ವಜನಿಕರ ಹಣದಲ್ಲಿ ದ್ವೇಷ ತೀರಿಸಿಕೊಳ್ಳುವ ಚಾಳಿಯನ್ನು BJP ಮುಂದುವರಿಸಿದೆ. ಸ್ವಾತಂತ್ರ್ಯ ಚಳುವಳಿಯಲ್ಲಿ ಪಾಲ್ಗೊಂಡಿದ್ದಕ್ಕಾಗಿ ಪಂ. ಜವಾಹರ್‌ಲಾಲ್‌ ನೆಹರೂ ಅವರನ್ನು ಬ್ರಿಟಿಷರು 9 ಬಾರಿ ಬಂಧಿಸಿ 3259 ದಿನ ಜೈಲಿನಲ್ಲಿರಿಸಿದ್ದರು. ರಾಜಕೀಯ ದುರುದ್ದೇಶದಿಂದ ನೆಹರೂ ಅವರ ಹೆಸರನ್ನು ಜಾಹೀರಾತಿನಿಂದ ಕೈ ಬಿಟ್ಟಿರುವುದು ಅಕ್ಷಮ್ಯ" ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಟ್ವೀಟ್ ಮಾಡಿದ್ದಾರೆ.

Full View Full View Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News