ಜಾಹೀರಾತಿನಲ್ಲಿ ದ್ವೇಷ ರಾಜಕಾರಣ ಮಾಡಿ ಬಿಜೆಪಿಯಿಂದ ಸ್ವಾತಂತ್ರ್ಯ ಚಳುವಳಿಗೆ ದ್ರೋಹ: ಬಿ.ಕೆ. ಹರಿಪ್ರಸಾದ್

Update: 2022-08-14 10:30 GMT
ಬಿ.ಕೆ. ಹರಿಪ್ರಸಾದ್

ಬೆಂಗಳೂರು: ಸರ್ಕಾರಿ ಜಾಹೀರಾತಿನಲ್ಲಿ ದ್ವೇಷ ರಾಜಕಾರಣ ಮಾಡಿರುವುದು ಬಿಜೆಪಿ(BJP) ಸ್ವಾತಂತ್ರ್ಯ ಚಳುವಳಿಗೆ ಮಾಡಿದ ದ್ರೋಹ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್ (BK Hariprasad) ಅವರು ಜಾಹೀರಾತಿನಲ್ಲಿ ನೆಹರೂ(Jawaharlal Nehru) ಹೆಸರು ಕೈಬಿಟ್ಟು ಸಾವರ್ಕರ್(Savarkar) ಚಿತ್ರ ಸೇರಿಸಿದ್ದಕ್ಕೆ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

"ಸರ್ಕಾರಿ ಜಾಹೀರಾತಿನಲ್ಲಿ ಇಂದು ದ್ವೇಷ ರಾಜಕಾರಣ ಮಾಡಿರುವುದು ಬಿಜೆಪಿ ಸ್ವಾತಂತ್ರ್ಯ ಚಳುವಳಿಗೆ ಮಾಡಿದ ದ್ರೋಹ. ಕರ್ನಾಟಕ ಸರ್ಕಾರ ಇಂದು ಸ್ವಾತಂತ್ರ್ಯ ದಿನಾಚರಣೆಗೆ ನೀಡಿರುವ ಪತ್ರಿಕಾ ಜಾಹೀರಾತುಗಳಲ್ಲಿ ಅಪ್ಪಟ ಸ್ವಾತಂತ್ರ್ಯ ಹೋರಾಟಗಾರರು, ದೇಶದ ಪ್ರಥಮ ಪ್ರಧಾನಿ ನೆಹರೂ ಅವರ ಫೋಟೋವನ್ನ ಕೈಬಿಟ್ಟಿರುವುದು ಬಿಜೆಪಿಯ ದ್ವೇಷ ರಾಜಕಾರಣದ ಪರಮಾವಧಿ ಮಾತ್ರವಲ್ಲ, ಸ್ವಾತಂತ್ರ್ಯ ಹೋರಾಟಗಾರರಿಗೆ ಮಾಡುವ ಅಪಮಾನ" ಎಂದು ಬಿ.ಕೆ. ಹರಿಪ್ರಸಾದ್ ಅವರು ಪೋಸ್ಟ್ ಮಾಡಿದ್ದಾರೆ.

"ಪಂಡಿತ್ ನೆಹರೂ ಅವರು ಸ್ವತಂತ್ರ ಸಂಗ್ರಾಮದಲ್ಲಿ ಒಟ್ಟು 9 ಬಾರಿ ಬಂಧನವಾಗಿದ್ದವರು, 3,259 ದಿನಗಳ ಕಾಲ ಜೈಲುವಾಸ ಅನುಭವಿಸಿದ ಅಪ್ಪಟ ಸ್ವತಂತ್ರ ಸೇನಾನಿ. ಸ್ವತಂತ್ರ ನಂತರವೂ ಕೂಡ ನವ ಭಾರತ ನಿರ್ಮಾಣಕ್ಕೆ ಪ್ರಜಾಪ್ರಭುತ್ವ, ಜಾತ್ಯಾತೀತ, ಧರ್ಮನಿರಪೇಕ್ಷತೆ, ಭ್ರಾತೃತ್ವದ ಭದ್ರಬುನಾದಿ ಹಾಕಿದರು. ಇಂತಹ ಮೌಲ್ಯಗಳನ್ನ ಪ್ರತಿಪಾದಿಸಿದರು ಎಂಬ ಕಾರಣವೇ ನೆಹರೂ ಅವರ ಮೇಲೆ ಇಂದು ಬಿಜೆಪಿ‌ ಉರಿದುಕೊಳ್ಳುತ್ತಿರುವುದಕ್ಕೆ ಕಾರಣ. ಅಷ್ಟಕ್ಕೂ ಬೊಮ್ಮಾಯಿ ಸರ್ಕಾರ ಕೊಟ್ಟಿರುವ ಜಾಹೀರಾತುಗಳಲ್ಲಿ ನೆಹರೂ ಅವರನ್ನ ಸ್ಮರಿಸದ ಬಿಜೆಪಿಯ ದ್ವೇಷ ರಾಜಕೀಯದ ನಡೆ ಅಚ್ಚರಿಯಲ್ಲ..! ಆದರೆ ಕ್ಷಮಾಪಣೆ ಪತ್ರ ಬರೆದು ಬ್ರಿಟಿಷರ ಗುಲಾಮರಾಗಿದ್ದ ಹೇಡಿ ಸಾವರ್ಕರ್ ಗೆ ಸ್ವತಂತ್ರ ಹೋರಾಟಗಾರರ ಜೊತೆ ಹೋಲಿಕೆ ಮಾಡಿಕೊಂಡಿರುವುದು ಸ್ವತಂತ್ರ ಚಳುವಳಿಗೆ ಮಾಡಿದ ಅಪಮಾನ ಮತ್ತು ದ್ರೋಹ" ಎಂದು ಅವರು ಸರಕಾರದ ವಿರುದ್ಧ ಕಿಡಿಕಾರಿದ್ದಾರೆ.

"ಇತ್ತೀಚೆಗೆ ಬೊಮ್ಮಾಯಿಯವರು ಸಂಘಪರಿವಾರದ ಗುಲಾಮಗಿರಿಯನ್ನ ಚಾಚೂ ತಪ್ಪದೇ ಅಪ್ಪಿ-ಒಪ್ಪಿ ಪಾಲಿಸುತ್ತಿದ್ದಾರೆ. ಆದರೆ ಸರ್ಕಾರ ಜನರ ತೆರಿಗೆಯಲ್ಲಿ ನೀಡಿರುವ ಪತ್ರಿಕಾ ಜಾಹೀರಾತುಗಳಲ್ಲಿ ಮಾಡಿರುವ ಪ್ರಮಾದಕ್ಕೆ ಮೊದಲು ರಾಜ್ಯದ ಜನರ ಕ್ಷಮಾಪಣೆ ಕೇಳಬೇಕು. ಹೇಗೂ ಬಿಜೆಪಿ ಮತ್ತು ಸಂಘಪರಿವಾರಕ್ಕೆ ಕ್ಷಮಾಪಣೆ ಕೋರುವ ಪರಂಪರೆಯೇ ಇದೆ. ಇತಿಹಾಸದ ಪುಟಗಳಲ್ಲಿ ನುಸುಳುತ್ತಿರುವ ಇಂತಹ ನುಸುಳುಕೋರರಿಂದ ಸ್ವಾತಂತ್ರ್ಯದ ಚರಿತ್ರೆಯನ್ನು ರಕ್ಷಿಸಿಸಬೇಕಿದೆ" ಎಂದು ಬಿ.ಕೆ. ಹರಿಪ್ರಸಾದ್ ಹೇಳಿದ್ದಾರೆ.

ಇದನ್ನೂ ಓದಿ: ಮೊದಲ ಸಾಲಿನಲ್ಲಿ ಸಾವರ್ಕರ್ ಎರಡನೇ ಸಾಲಿನಲ್ಲಿ ಅಂಬೇಡ್ಕರ್‌!  

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News