ಬ್ರಿಟಿಷರ ಬಳಿ ಕ್ಷಮೆಯ ಭಿಕ್ಷೆ ಬೇಡಿದ ಸಾವರ್ಕರ್ ಗೆ ಮೊದಲ ಸ್ಥಾನದ ಗೌರವ ಏಕೆ: ದಿನೇಶ್ ಗುಂಡೂರಾವ್ ಪ್ರಶ್ನೆ

Update: 2022-08-14 12:11 GMT
ದಿನೇಶ್ ಗುಂಡೂರಾವ್

ಬೆಂಗಳೂರು, ಆ. 14: ‘ಸ್ವಾತಂತ್ರ್ಯದ ಅಮೃತ ಮಹೋತ್ಸವದ ಪ್ರಯುಕ್ತ ರಾಜ್ಯ ಸರಕಾರ ಪ್ರಕಟಿಸಿರುವ ಜಾಹೀರಾತಿನ ಸ್ವಾತಂತ್ರ್ಯ ಹೋರಾಟಗಾರರ ಪಟ್ಟಿಯಲ್ಲಿ ನೆಹರೂ(Jawaharlal Nehru) ಹೆಸರೇ ಇಲ್ಲ. ಇದೆಂತಾ ಕೀಳು ಮಟ್ಟದ ಮನಃಸ್ಥಿತಿ ಬಸವರಾಜ ಬೊಮ್ಮಾಯಿಯವರೆ? ನೆಹರೂ ಈ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿಲ್ಲವೆ? ತಮ್ಮ ಬದುಕಿನ ಸುದೀರ್ಘ 9 ವರ್ಷಗಳನ್ನು ಸೆರೆವಾಸದಲ್ಲಿ ಕಳೆಯಲಿಲ್ಲವೆ?' ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್(Dinesh Gundu Rao) ಪ್ರಶ್ನಿಸಿದ್ದಾರೆ.

ರವಿವಾರ ಸರಣಿ ಟ್ವೀಟ್ ಮಾಡಿರುವ ಅವರು, ‘ಜಾಹೀರಾತಿನಲ್ಲಿ ಬ್ರಿಟಿಷರಿಗೆ ಕ್ಷಮಾಪಣೆ ಪತ್ರ ಬರೆದು ದಯಾಭಿಕ್ಷೆ ಕೋರಿದ ಸಾವರ್ಕರ್(Savarkar) ಗೆ ಸ್ಥಾನವಿದೆ. ಆದರೆ, ಸ್ವಾತಂತ್ರ್ಯಕ್ಕಾಗಿ ತಮ್ಮ ಜೀವನ ಮುಡಿಪಾಗಿಟ್ಟ ನೆಹರೂರರವರನ್ನು ಹೊರಗಿಡಲಾಗಿದೆ. ಇದು ಬೊಮ್ಮಾಯಿಯವರ ರಾಜಕೀಯ ದ್ವೇಷದ ವಿಕೃತ ನಡೆ. ಆರೆಸ್ಸೆಸ್ ನವರನ್ನು ಮೆಚ್ಚಿಸಿ ಸಿಎಂ ಕುರ್ಚಿ ಉಳಿಸಿಕೊಳ್ಳಲು ಈ ವಿಕೃತವೇ ಬೊಮ್ಮಾಯಿಯವರೆ?' ಎಂದು ವಾಗ್ದಾಳಿ ನಡೆಸಿದ್ದಾರೆ.

‘ಆರೆಸೆಸ್ಸ್ ಕೋಮು ರಾಜಕಾರಣವನ್ನು ತಮ್ಮ ಜಾತ್ಯತೀತತೆ ಹಾಗೂ ಮಾನವತಾ ಸಿದ್ದಾಂತದಿಂದ ಜವಾಹರ್ ಲಾಲ್ ನೆಹರು ವಿರೋಧಿಸಿದ್ದರು. ಹಾಗಾಗಿ ನೆಹರೂ ಬಗ್ಗೆ ಆರೆಸ್ಸೆಸ್ ಆಗಿಂದಲೂ ದ್ವೇಷ ಕಾರುತ್ತಿದೆ. ಆದರೆ, ಬಸವರಾಜ ಬೊಮ್ಮಾಯಿಯವರೆ ನೀವು ಜನತಾ ಪರಿವಾರದದವರು. ನಿಮಗ್ಯಾಕೆ ನೆಹರೂ ಮೇಲೆ ದ್ವೇಷ? ನಿಮ್ಮ ನಡೆಯಿಂದ ನಿಮ್ಮ ತಂದೆಯ ಆತ್ಮವೂ ಕನಲಿ ಹೋಗುವುದಿಲ್ಲವೆ?' ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

‘ಜಾಹೀರಾತಿನಲ್ಲಿ ಬ್ರಿಟಿಷರ ಬಳಿ ಕ್ಷಮೆಯ ಭಿಕ್ಷೆ ಬೇಡಿದ ಸಾವರ್ಕರ್‍ಗೆ ಮೊದಲ ಸ್ಥಾನದ ಗೌರವ. ಆದರೆ, ಸ್ವತಂತ್ರ ಚಳವಳಿಯಲ್ಲಿ ಭಾಗವಹಿಸಿ,ಪ್ರಪಂಚದ ಶ್ರೇಷ್ಟ ಸಂವಿಧಾನ ನೀಡಿದ ಡಾ.ಅಂಬೇಡ್ಕರ್‍ಗೆ ಕೊನೆಯ ಸಾಲಿನ ಗೌರವ. ಅಂಬೇಡ್ಕರ್ ಪಾದದ ದೂಳಿಗೂ ಸಮವಿಲ್ಲದ ವ್ಯಕ್ತಿ ಸಾವರ್ಕರ್ ಎಂಬುದು ನಿಮ್ಮ ಅಂತರಂಗಕ್ಕೆ ತಿಳಿದಿಲ್ಲವೆ ಬೊಮ್ಮಾಯಿಯವರೆ?' ಎಂದು ದಿನೇಶ್ ಗುಂಡೂರಾವ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಬೊಮ್ಮಾಯಿಯವರೆ ಆರೆಸೆಸ್ಸ್ ಗುಲಾಮಗಿರಿಗೆ ಬಿದ್ದು ನೆಹರೂರಂತಹ ಇತಿಹಾಸ ಪುರುಷರನ್ನು ದ್ವೇಷಿಸಬೇಡಿ. ಭಾರತದ ಸ್ವಾತಂತ್ರ್ಯ ಚಳವಳಿಯ ಇತಿಹಾಸದಲ್ಲಿ ನೆಹರೂರವರ ಹೋರಾಟ ಮತ್ತು ತ್ಯಾಗ ಮರೆಯಲಾಗದ ಅಧ್ಯಾಯ. ನೆಹರೂರವರಿಗೆ ಅವಮಾನ ಮಾಡಿದರೆ ನಿಮ್ಮ ದ್ವೇಷದ ತೀಟೆ ತೀರಬಹುದೇ ಹೊರತು ಮತ್ತೇನಿಲ್ಲ. ನೆಹರೂ ಜನಮಾನಸದಲ್ಲಿ ಅಜರಾಮರರಾಗಿ ಉಳಿಯಲಿದ್ದಾರೆ'
-ದಿನೇಶ್ ಗುಂಡೂರಾವ್, ಮಾಜಿ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News