ನೆಹರೂ ಫೋಟೋ ಉದ್ದೇಶಪೂರ್ವಕವಾಗಿಯೇ ಕೈಬಿಟ್ಟಿದ್ದೇವೆ: ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿಕುಮಾರ್

Update: 2022-08-14 15:08 GMT

ಬೆಂಗಳೂರು, ಆ. 14: ‘ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ರಾಜ್ಯ ಸರಕಾರದ ವತಿಯಿಂದ ನೀಡಿದ್ದ ಜಾಹೀರಾತಿನಲ್ಲಿ ಉದ್ದೇಶಪೂರ್ವಕವಾಗಿಯೇ ನೆಹರೂ(Jawaharlal Nehru) ಭಾವಚಿತ್ರ ಕೈಬಿಟ್ಟಿದ್ದೇವೆ. ನೆಹರೂ ದೇಶ ವಿಭಜನೆಗೆ ಕಾರಣರಾದವರು, ಮಹಾತ್ಮ ಗಾಂಧಿಯವರ ಮಾತನ್ನೇ ನೆಹರೂ ಕೇಳಲಿಲ್ಲ' ಎಂದು ಬಿಜೆಪಿ(BJP) ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್, ಸರಕಾರದ ನಡೆಯನ್ನು ಸಮರ್ಥಿಸಿದ್ದಾರೆ.

ರವಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ದೇಶ ವಿಭಜನೆಯ ಕರಾಳ ನೆನಪು ಎಂದು ಆಚರಣೆ ಮಾಡುತ್ತಿದ್ದೇವೆ. ಗಾಂಧೀಜಿಯವರ ಮಾತನ್ನು ಕೇಳದೆ, ದೇಶ ವಿಭಜನೆಗೆ ಕಾರಣವಾಗಿರುವ ನೆಹರೂ ಅವರ ಫೋಟೋವನ್ನು ನಾವು ಹಾಕುವುದಿಲ್ಲ. ಉದ್ದೇಶಪೂರ್ವಕವಾಗಿಯೇ ನೆಹರೂ ಭಾವಚಿತ್ರ ಕೈಬಿಟ್ಟಿದ್ದೇವೆ' ಎಂದು ಹೇಳಿದರು.

‘ಟಿಪ್ಪು ಸುಲ್ತಾನ್ ಅನೇಕ ದೇವಾಲಯಗಳನ್ನು ಧ್ವಂಸ ಮಾಡಿದ ವ್ಯಕ್ತಿ. ಲಕ್ಷಾಂತರ ಜನರನ್ನು ಮತಾಂತರ ಮಾಡಿದವ. ಟಿಪ್ಪು ಭಾವಚಿತ್ರವನ್ನು ಕಾಂಗ್ರೆಸ್‍ನವರು ಏಕೆ ಹಾಕಿದ್ದಾರೆ? ಇದು ಬಹಳ ವಿಚಿತ್ರ ವಿಷಯ. ನಾವು ಎಂದಿಗೂ ಟಿಪ್ಪುವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ' ಎಂದು ರವಿಕುಮಾರ್ ಇದೇ ವೇಳೆ ಹೇಳಿದರು.

‘ಸಿದ್ದರಾಮಯ್ಯ ಅಧಿಕಾರಕ್ಕಾಗಿ ಸೋನಿಯಾ ಗಾಂಧಿ ಕೈಗೊಂಬೆಯಾಗಿದ್ದಾರೆ. ರಾಹುಲ್ ಗಾಂಧಿ ಇಬ್ಬರು ಅಪ್ಪಿಕೊಳ್ಳಿ ಎಂದು ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಗೆ ಹೇಳಿದರು. ಹೀಗಾಗಿ ಅವರು ಕೂರಿ ಎಂದರೆ ಕೂರಬೇಕು. ಅಪ್ಪಿಕೊಳ್ಳಿ ಎಂದು ಅಪ್ಪಿಕೊಳ್ಳಬೇಕು. ಇದು ಅಂತಹ ದೌರ್ಭಾಗ್ಯದ ಪರಿಸ್ಥಿತಿ ಕಾಂಗ್ರೆಸ್‍ಗೆ ಬಂದಿದೆ ಎಂದು ರವಿಕುಮಾರ್ ಲೇವಡಿ ಮಾಡಿದರು.

ಇದನ್ನೂ ಓದಿ: ಮಂಗಳೂರು ವಿಮಾನ ನಿಲ್ದಾಣದಲ್ಲಿ ಮೊಬೈಲ್ ಚಾಟಿಂಗ್; ವಿಮಾನ ಯಾನ ರದ್ದುಗೊಳಿಸಿ ಯುವಕ-ಯುವತಿಯ ತೀವ್ರ ತಪಾಸಣೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News