ಸಾಲು ರಜೆಗಳ ಹಿನ್ನೆಲೆ: ಕಾಫಿನಾಡಿಗೆ ಹರಿದು ಬರುತ್ತಿರುವ ಭಾರೀ ಸಂಖ್ಯೆಯ ಪ್ರವಾಸಿಗರು

Update: 2022-08-14 13:18 GMT

ಚಿಕ್ಕಮಗಳೂರು: ಸಾಲು ರಜೆಗಳ ಹಿನ್ನೆಲೆಯಲ್ಲಿ ಕಾಫಿನಾಡಿಗೆ ಪ್ರವಾಸಿಗರ ದಂಡು ಹರಿದು ಬರುತ್ತಿದ್ದು, ವಾರಾಂತ್ಯ ಹಾಗೂ ಸ್ವಾತಂತ್ರ್ಯ ದಿನಾಚರಣೆಯ ರಜೆಯಂದು ಪ್ರಕೃತಿಯ ಸೊಬಗು ಸಲಿವಯಲು ರಾಜ್ಯದ ಮೂಲೆ ಮೂಲೆಯಿಂದ ಪ್ರವಾಸಿಗರು ಕಾಫಿನಾಡಿಗೆ ಲಗ್ಗೆ ಇಟ್ಟಿದ್ದಾರೆ. ಜಿಲ್ಲೆಯ ಪ್ರಮುಖ ಪ್ರವಾಸಿ ತಾಣವಾಗಿರುವ ಮುಳ್ಳಯ್ಯನಗಿರಿ ಹಾಗೂ ಬಾಬಾಬುಡನ್‍ಗಿರಿಯಲ್ಲಿ ರವಿವಾರ ಭಾರೀ ಸಂಖ್ಯೆಯಲ್ಲಿ ಪ್ರವಾಸಿಗರು ಕಂಡು ಬಂದರು.

ಶನಿವಾರ, ರವಿವಾರದ ಸರಕಾರಿ ರಜೆ ಹಾಗೂ ಸೋಮವಾರ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ರಜೆ ಇರುವುದರಿಂದ ಜಿಲ್ಲೆಯ ಮುಳ್ಳಯ್ಯನಗಿರಿ, ಬಾಬಾಬಡನ್‍ಗಿರಿ, ಕೆಮ್ಮಣ್ಣುಗುಂಡಿ, ಭದ್ರಾ ಅಭಯಾರಣ್ಯ, ಮತ್ತೋಡಿ ಅರಣ್ಯ ಸೇರಿದಂತೆ ಕಳಸ, ಹೊರನಾಡು, ಶೃಂಗೇರಿಯಂತಹ ಯಾತ್ರಾಸ್ಥಳಗಳಿಗೆ ಭಾರೀ ಸಂಖ್ಯೆಯಲ್ಲಿ ಪ್ರವಾಸಿಗರು ಹರಿದು ಬರುತ್ತಿದ್ದಾರೆ. ಶನಿವಾರ ಪ್ರವಾಸಿಗರು ಚಿಕ್ಕಮಗಳೂರು ನಗರಕ್ಕೆ ಲಗ್ಗೆ ಇಟ್ಟಿದ್ದು, ಸಾವಿರಾರು ಪ್ರವಾಸಿಗರ ಮುಳ್ಳಯ್ಯನಗಿರಿ ಪ್ರದೇಶದಲ್ಲಿ ಪ್ರಕೃತಿಯ ಸೊಬಗು ಸವಿದರು. ರವಿವಾರ ನಗರದ ಹೊರವಲಯದಲ್ಲಿರುವ ಕೈಮರ ತಾಪಸಣಾ ಕೇಂದ್ರದಲ್ಲಿ ಕಿ.ಮೀ. ಗಟ್ಟಲೇ ವಾಹನಗಳು ಸರತಿ ಸಾಲಿನಲ್ಲಿ ನಿಂತಿದ್ದರಿಂದ ಟ್ರಾಫಿಕ್ ಜಾಮ್ ಉಂಟಾಗಿ ವಾಹನ ಸವಾರರು, ಪ್ರವಾಸಿಗರು ಪರದಾಡುವಂತಾಗಿತ್ತು. 

ಶನಿವಾರ ಒಂದೇ ದಿನ ಸಾವಿರಕ್ಕೂ ಅಧಿಕ ವಾಹನಗಳು ಮುಳ್ಳಯ್ಯನಗಿರಿ, ಬಾಬಾ ಬುಡನ್‍ಗಿರಿಹಗೆ ತೆರಳಿದ್ದರೇ, ರವಿವಾರ ಬೆಳಗ್ಗೆ 6ರಿಂದ 12ರವರೆಗೆ 1ಸಾವಿರಕ್ಕೂ ಅಧಿಕ ವಾಹನಗಳು ಗಿರಿ ಪ್ರದೇಶಕ್ಕೆ ತೆರಳಿವೆ. ಪ್ರವಾಸಿಗರು ಒಮ್ಮೆಲೆ ಜಮಾಯಿಸಿದ್ದರಿಂದ ಟ್ರಾಫಿಕ್ ಸಮಸ್ಯೆ ಉಂಟಾಗಿತ್ತು. ಒಮ್ಮೆಲೆ ಪ್ರವಾಸಿ ವಾಹನ ಸಂಖ್ಯೆ ಹೆಚ್ಚಾದ ಪರಿಣಾಮ ಗಿರಿ ರಸ್ತೆಯಲ್ಲಿ ವಾಹನಗಳನ್ನು ನಿಯಂತ್ರಿಸಲು ಪೊಲೀಸರು ಹರಸಹಾಸ ಪಡಬೇಕಾಯಿತು.

ರವಿವಾರ ಟ್ರಾಫಿಕ್ ಸಮಸ್ಯೆ ಉಂಟಾಗಿದ್ದರಿಂದ 500ಕ್ಕೂ ಹೆಚ್ಚು ಪ್ರವಾಸಿ ವಾಹನಗಳನ್ನು ಪೊಲೀಸರು ಹಿಂದಕ್ಕೆ ಕಳುಸಿದರು. ಈ ವೇಳೆ ಕೈಮರ ಚೆಕ್‍ಪೋಸ್ಟ್ ಬಳಿ ಜನಜಾತ್ರೆ ನೆರದಿತ್ತು. ಶ್ರೀಗುರು ದತ್ತಾತ್ರೇಯ ಬಾಬಾಬುಡನ್ ದರ್ಗಾದಲ್ಲಿಯೂ ಪ್ರವಾಸಿಗರ ದಂಡು ನರೆದಿತ್ತು. ಕೆಮ್ಮಣ್ಣಗುಂಡಿ, ಭದ್ರಾ ಅಭಯಾರಣ್ಯ, ಮುತ್ತೋಡಿ ಸೇರಿದಂತೆ ಕಲ್ಲತ್ತಗಿರಿ ಜಲಪಾತ, ಮಾಣಿಕ್ಯಧಾರ, ದಬೆ ದಬೆ ಜಲಪಾತ, ಅಬ್ಬೆ ಜಲಪಾತ ಸೇರಿದಂತೆ ಇತರೆ ಪ್ರವಾಸಿತಾಣಗಳಲ್ಲಿ ಜನ ಜಂಗುಳಿಯಿಂದ ತುಂಬಿತ್ತು. 

ಧಾರ್ಮಿಕ ಪ್ರವಾಸಿ ಸ್ಥಳಗಳಾದ ಶೃಂಗೇರಿ, ಹೊರನಾಡು, ಕಳಸೇಶ್ವರ ದೇವಸ್ಥಾನಗಳಲ್ಲೂ ಭಕ್ತರ ದಂಡು ನೆರೆದಿತ್ತು. ಧಾರ್ಮಿಕ ಕ್ಷೇತ್ರಗಳಿಗೆ ಹೆಚ್ಚಿನ ಸಂಖ್ಯೆ ಭಕ್ತರು ನೆರೆದಿದ್ದ ಪರಿಣಾಮ ವಾಹನ ದಟ್ಟಣೆ ಹೆಚ್ಚಾಗಿತ್ತು. ಚಿಕ್ಕಮಗಳೂರು ನಗರ ಸೇರಿದಂತೆ ಸುತ್ತಮುತ್ತಲ ಇರುವ ಹೋಮ್‍ಸ್ಟೇ, ಲಾಡ್ಜ್ ಗಳು ಭರ್ತಿಯಾಗಿದ್ದವು. ಒಟ್ಟಾರೆ ಸಾಲು ಸಾಲು ರಜೆಯ ಹಿನ್ನಲೆಯಲ್ಲಿ ಕಾಫಿನಾಡಿನಲ್ಲಿ ಪ್ರವಾಸಿರ ದಂಡು ನೆರೆದಿದ್ದು ಪ್ರಕೃತಿ ಸೌಂದರ್ಯವನ್ನು ಕಣ್ತುಂಬಿಕೊಂಡರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News