ದೇವನಹಳ್ಳಿ ಜಿಲ್ಲಾ ಕೇಂದ್ರವಾಗಿ ತಿಂಗಳೊಳಗೆ ಆದೇಶ: ಸಚಿವ ಸುಧಾಕರ್ ಘೋಷಣೆ

Update: 2022-08-15 12:06 GMT

ಬೆಂಗಳೂರು, ಆ. 15: ‘ದೇವನಹಳ್ಳಿ ನಾಡಪ್ರಭು ಕೆಂಪೇಗೌಡರು ಆಡಳಿತ ನಡೆಸಿದ ಪ್ರದೇಶ. ಅವರ ಆಡಳಿತದ ನಾಡಿನಲ್ಲಿ ಸ್ವಾತಂತ್ರ್ಯ ದಿನಾಚರಣೆ ನಡೆಯುತ್ತಿರುವುದು ಹೆಮ್ಮೆ ತಂದಿದೆ' ಎಂದು ಮೆಚ್ಚುಗೆ ವ್ಯಕ್ತಪಡಿಸಿರುವ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್, ದೇವನಹಳ್ಳಿಯನ್ನು ಜಿಲ್ಲಾ ಕೇಂದ್ರವಾಗಿಸಲು ಒಂದು ತಿಂಗಳೊಳಗೆ ಆದೇಶ ಹೊರಡಿಸಲಾಗುವುದು' ಎಂದು ಘೋಷಿಸಿದ್ದಾರೆ.

ಸೋಮವಾರ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಬೆಂ.ಗ್ರಾ.ಜಿಲ್ಲೆಯಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ‘ಕೈಗಾರಿಕೆ ಭೂಮಿ ನೀಡಲು ವಿರೋಧ ಕೇಳಿಬಂದರೆ ರೈತರನ್ನು ಒಕ್ಕಲೆಬ್ಬಿಸುವ ಕೆಲಸ ಮಾಡುವುದಿಲ್ಲ. ಈ ಭಾಗದಲ್ಲಿ ಕೈಗಾರಿಕಾಭಿವೃದ್ಧಿ ಆಗಲಿದೆ. ಎತ್ತಿನಹೊಳೆ ಯೋಜನೆಯಡಿ ಒಂದು ವರ್ಷದೊಳಗೆ ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರದ ಕೆರೆಗಳನ್ನು ತುಂಬಿಸಲಾಗುವುದು' ಎಂದು ಹೇಳಿದರು.

‘ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ನಾವೆಲ್ಲರೂ ರಾಷ್ಟ್ರಧ್ವಜವನ್ನು ಮನೆಯ ಮೇಲೆ ಹಾರಿಸಿದ್ದೇವೆ. ಆದರೆ ಕೇವಲ ಆಗಸ್ಟ್ 15 ರಂದು ಮಾತ್ರ ಆಚರಣೆ ಮಾಡದೆ ಇಡೀ ವರ್ಷ ಧ್ವಜಕ್ಕೆ ಗೌರವ ತೋರಬೇಕು. ಪ್ರಧಾನಿ ಮೋದಿ ಸುವರ್ಣ ಯುಗ ಸೃಷ್ಟಿ ಮಾಡಿದ್ದಾರೆ. 10 ಕೋಟಿ ಶೌಚಾಲಯ ನಿರ್ಮಾಣ, ಆಯುಷ್ಮಾನ್ ಭಾರತ್‍ನಿಂದ 5 ಲಕ್ಷ ರೂ.ವಿಮೆ, ಕಿಸಾನ್ ಸಮ್ಮಾನ್ ಮೊದಲಾದ ಯೋಜನೆ ಮೂಲಕ ಪ್ರಗತಿಯಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರೈತರ ಮಕ್ಕಳಿಗಾಗಿ ವಿದ್ಯಾನಿಧಿ ನೀಡಿದ್ದಾರೆ' ಎಂದು ವಿವರಿಸಿದರು.

‘ದೊಡ್ಡಬಳ್ಳಾಪುರದಲ್ಲಿ ಜಿಲ್ಲಾಸ್ಪತ್ರೆ ನಿರ್ಮಾಣವಾಗಲಿದ್ದು, ಎರಡು ತಿಂಗಳಲ್ಲಿ ಭೂಮಿ ಪೂಜೆ ನಡೆಯಲಿದೆ. ಹೊಸಕೋಟೆಯಲ್ಲಿ ತಾಯಿ ಮತ್ತು ಶಿಶು ಆಸ್ಪತ್ರೆ ಕಾಮಗಾರಿ ಕೂಡ ಆರಂಭವಾಗಲಿದೆ. ನೆಲಮಂಗಲದಲ್ಲಿ ಆಸ್ಪತ್ರೆ ನಿರ್ಮಾಣವಾಗಲಿದೆ. ಕೋವಿಡ್ ಲಸಿಕೆಯನ್ನು ಎಲ್ಲ ಜನರಿಗೆ ಉಚಿತವಾಗಿ ನೀಡಲಾಗಿದೆ' ಎಂದು ಸುಧಾಕರ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News