ಜಿಲ್ಲಾ ಉಸ್ತುವಾರಿ ಸಚಿವರ ಅನುಪಸ್ಥಿತಿ: ಧ್ವಜಾರೋಹಣ ನೆರವೇರಿಸಿದ ಚಿಕ್ಕಮಗಳೂರು ಜಿಲ್ಲಾಧಿಕಾರಿ ಕೆ.ಎನ್.ರಮೇಶ್

Update: 2022-08-15 13:55 GMT

ಚಿಕ್ಕಮಗಳೂರು, ಆ.15: ಜಿಲ್ಲೆಯಲ್ಲಿ ಸೋಮವಾರ ನಡೆದ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣ ಕಾರ್ಯಕ್ರಮದ ವೇಳೆ ಅಪರೂಪದ ದೃಶ್ಯ ಕಂಡು ಸಾರ್ವಜನಿಕರು ಚಕಿತರಾದರೂ. ಸಾಮಾನ್ಯವಾಗಿ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಧ್ವಜಾರೋಹಣ ಮಾಡುವುದು ಸಂವಿಧಾನಿಕ ನಿಯಮವಾಗಿದೆ. ಆದರೆ ಈ ಬಾರಿ ಉಸ್ತುವಾರಿ ಸಚಿವರು ಹಾಜರಾಗದ ಕಾರಣಕ್ಕೆ ಜಿಲ್ಲಾಧಿಕಾರಿಯೇ ಧ್ವಜಾರೋಹಣ ನೆರವೇರಿಸಿದ ಅಪರೂಪದ ದೃಶ್ಯಕ್ಕೆ ನಗರದ ಜನತೆ ಸಾಕ್ಷಿಯಾದರು.

ಸಚಿವ ಭೈರತಿ ಬಸವರಾಜ್ ಅವರಿಗೆ ದಾವಣಗೆರೆ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಉಸ್ತುವಾರಿ ವಹಿಸಲಾಗಿದ್ದು, ಸೋಮವಾರ ಸಚಿವ ಭೈರತಿ ಬಸವರಾಜ್ ಅವರು ದಾವಣಗೆರೆ ಜಿಲ್ಲೆಗೆ ಪ್ರಥಮ ಆದ್ಯತೆ ನೀಡಿದ್ದರಿಂದ ಕಾನೂನಿನಂತೆ ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಅವರಿಗೆ ಧ್ವಜಾರೋಹಣ ನೆರವೇರಿಸಬೇಕಾಗಿತ್ತು. ಈ ಹಿನ್ನೆಲೆಯಲ್ಲಿ ಸೋಮವಾರ ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಅವರು ಧ್ವಜಾರೋಹಣ ನೆರವೇರಿಸಿ ಗಮನಸೆಳೆದರು. ನೇತಾಜಿ ಸುಭಾಷ್‍ಚಂದ್ರ ಬೋಸ್ ಜಿಲ್ಲಾ ಆಟದ ಮೈದಾನದಲ್ಲಿ ವಿವಿಧ ಕವಾಯತು ತುಕಡಿಗಳಿಂದ ಗೌರವ ಸ್ವೀಕರಿಸಿದ ಅವರು, ವೇದಿಕೆಗೆ ತೆರಳಿ ಸಂತೋಷದಿಂದ ರಾಷ್ಟ್ರಧ್ವಜಾರೋಹಣ ನೆರವೇರಿಸಿದರು. 

ಧ್ವಜಾರೋಹಣ ನೆರವೇರಿಸಿದ ಕಾಫಿನಾಡಿನ 2ನೇ ಜಿಲ್ಲಾಧಿಕಾರಿ: ಚಿಕ್ಕಮಗಳೂರು ಜಿಲ್ಲೆಯಲ್ಲಿ ಈ ಹಿಂದೆ 1986-87ನೇ ಸಾಲಿನಲ್ಲಿ ಜಿಲ್ಲಾಧಿಕಾರಿಯಾಗಿದ್ದ ಉಮೇಶ್ ಅವರು ಮೊದಲ ಬಾರಿಗೆ ಉಸ್ತುವಾರಿ ಸಚಿವರ ಅನುಮಸ್ಥಿತಿಯಲ್ಲಿ ಸ್ವಾತಂತ್ರ್ಯ ದಿನಾಚರಣೆಯಂದು ರಾಷ್ಟ್ರಧ್ವಜಾರೋಹಣ ನೆರವೇರಿಸಿದ್ದರು. ಸದ್ಯ ಸ್ವಾತಂತ್ರ್ಯದ ಅಮೃತಮಹೋತ್ಸವದ ಸಂದರ್ಭದಲ್ಲಿ ಚಿಕ್ಕಮಗಳೂರು ಜಿಲ್ಲೆಯ ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಅವರಿಗೆ ಧ್ವಜಾರೋಹಣ ನೇರವೇರಿಸುವ ಮೂಲಕ ಧ್ವಜಾರೋಹಣ ನೆರವೇರಿಸಿದ 2ನೇ ಜಿಲ್ಲಾಧಿಕಾರಿಯಾಗಿ ಹೊರ ಹೊಮ್ಮಿದ್ದು, ಈ ಘಟನೆ ಇತಿಹಾಸದ ಪುಟಗಳಲ್ಲಿ ದಾಖಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News