ಆರೆಸ್ಸೆಸ್ ವಿಚಾರ, ಆದರ್ಶ, ದೇಶಭಕ್ತಿಗೆ ನಾನು ತಲೆಬಾಗಿದ್ದೇನೆ: ಸಿಎಂ ಬೊಮ್ಮಾಯಿ

Update: 2022-08-15 14:32 GMT

ಬೆಂಗಳೂರು, ಆ. 15:  ಭಾರತ ದೇಶವೇ ಧರ್ಮ, ಸಂವಿಧಾನವೇ ನಮ್ಮ ಗ್ರಂಥ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಮುಂದಿನ 25 ವರ್ಷ ಭಾರತವನ್ನು ಉನ್ನತಿಗೆ ತೆಗೆದುಕೊಂಡು ಹೋಗಬೇಕು. ಆದರೆ, ಒಬ್ಬರು ನನ್ನನ್ನು ಆರೆಸೆಸ್ಸ್ ಅಡಿಯಾಳು ಎಂದಿದ್ದಾರೆ. ಆರೆಸೆಸ್ಸ್ ವಿಚಾರ, ಆದರ್ಶ, ದೇಶಭಕ್ತಿಗೆನಾನು ತಲೆಬಾಗಿದ್ದೇನೆ. ಆರೆಸೆಸ್ಸ್ ತತ್ವ, ಆದರ್ಶದ ಹಿನ್ನೆಲೆಯಲ್ಲಿ ದೇಶ ಕಟ್ಟಲು ಬದ್ಧನಾಗಿದ್ದೇನೆ' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. 

ಸೋಮವಾರ ಇಲ್ಲಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಬಿಜೆಪಿಯಿಂದ ಏರ್ಪಡಿಸಿದ್ದ ‘ಅಮೃತ ಭಾರತಿಗೆ ಕರುನಾಡ ಜಾತ್ರೆ' ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ‘ಎಪ್ಪತ್ತೈದನೆ ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂದರ್ಭದಲ್ಲಿ ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಕೊಡುಗೆ ನೀಡಿದ ಮಹನೀಯರ ಗುರುತಿಸುವ ಕೆಲಸ ಮಾಡಿದ ನಮ್ಮನ್ನು ಶ್ಲಾಘಿಸುವ ಬದಲು ನಮ್ಮ ನಾಯಕರ ಫೋಟೋ ಕೈಬಿಡಲಾಗಿದೆ ಎಂದು ಕಾಂಗ್ರೆಸ್ ನಾಯಕರು ದುಃಖಪಡುತ್ತಿದ್ದಾರೆ' ಎಂದು ಆಕ್ರೋಶ ವ್ಯಕ್ತಪಡಿಸಿದರು. 

‘ನಾವು ಸ್ವಾತಂತ್ರ್ಯ ಹೋರಾಟಗಾರರನ್ನು ಗುರುತಿಸುವ ಕೆಲಸ ಮಾಡಿದರೆ ಇವರಿಗೆ ನೆಹರೂ ಫೋಟೋ ಇಲ್ಲ ಎವ ಚಿಂತೆ. ನಮ್ಮ ದೇಶದ ಏಕತೆ, ಅಖಂಡತೆ ಕಾಪಾಡಿಕೊಳ್ಳುವುದು ಇಂದು ಬಹಳ ದೊಡ್ಡ ಸವಾಲಾಗಿದೆ' ಎಂದು ನುಡಿದರು.

‘ಸ್ವಾತಂತ್ರ್ಯ ಯಾರು ತಂದರು ಎಂದು ಪೈಪೋಟಿ ನಡೆಸುತ್ತಿದ್ದಾರೆ. ಆದರೆ, ನಿಜವಾದ ಸ್ವಾತಂತ್ರ್ಯ ತಂದುಕೊಟ್ಟವರು ಅನಾಮಿಕ ಹೋರಾಟಗಾರರು. ಅವರ ನೇತೃತ್ವವಹಿಸಿದ್ದು, ಬಾಲಗಂಗಾಧರ ತಿಲಕ್, ಸಾವರ್ಕರ್, ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ಝಾನ್ಸಿ ರಾಣಿ ಲಕ್ಷ್ಮಿಬಾಯಿ ಎಲ್ಲರ ಕೊಡುಗೆ ಇದೆ. ಸ್ವಾತಂತ್ರ್ಯ ಬಂದ ನಂತರ ದೇಶ ಒಗ್ಗೂಡಿಸಿದ್ದು ವಲ್ಲಭಭಾಯಿ ಪಟೇಲ್' ಎಂದು ಅವರು ತಿಳಿಸಿದರು.

‘ನೆಹರೂ ಅವರಿಗೆ ಗೌರವ ಕೊಟ್ಟಿದ್ದು ಪ್ರಧಾನಿ ಮೋದಿ. ಮೊದಲ ಪ್ರಧಾನಿ ನೆಹರೂ ಅವರಿಂದ ಹಿಡಿದು ವಾಜಪೇಯಿ ವರೆಗೂ ಏನೆಲ್ಲ ಕೊಡುಗೆ ನೀಡಿದ್ದಾರೆ. ಅದರ ಪ್ರದರ್ಶನ ದಿಲ್ಲಿಯಲ್ಲಿ ಮಾಡಿದ್ದಾರೆ. ಅಂಬೇಡ್ಕರ್ ಅವರನ್ನು ಯಾರೂ ಸ್ಮರಿಸಿರಲಿಲ್ಲ. ಇಂದು ಅಂಬೇಡ್ಕರ್ ಸ್ಮಾರಕ ಮಾಡಲು 25 ಕೋಟಿ ರೂ.ಹಣ ನೀಡಿದ್ದೇವೆ' ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.

ಸಂವಿಧಾನವೇ ನಮ್ಮ ಗ್ರಂಥ: ಭಾರತ ದೇಶವೇ ಧರ್ಮ, ಸಂವಿಧಾನವೇ ನಮ್ಮ ಗ್ರಂಥ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಮುಂದಿನ 25 ವರ್ಷ ಭಾರತವನ್ನು ಉನ್ನತಿಗೆ ತೆಗೆದುಕೊಂಡು ಹೋಗಬೇಕು. ಆದರೆ, ಒಬ್ಬರು ನನ್ನನ್ನು ಆರೆಸೆಸ್ಸ್ ಅಡಿಯಾಳು ಎಂದಿದ್ದಾರೆ. ಆರೆಸೆಸ್ಸ್ ವಿಚಾರ, ಆದರ್ಶ, ದೇಶಭಕ್ತಿಗೆನಾನು ತಲೆಬಾಗಿದ್ದೇನೆ. ಆರೆಸೆಸ್ಸ್ ತತ್ವ, ಆದರ್ಶದಹಿನ್ನೆಲೆಯಲ್ಲಿ ದೇಶ ಕಟ್ಟಲುಬದ್ಧನಾಗಿದ್ದೇನೆ' ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಚಿವರಾದ ಡಾ.ಅಶ್ವತ್ಥ ನಾರಾಯಣ, ಆರ್.ಅಶೋಕ್, ಮಾಜಿ ಸಚಿವರಾದ ಸುರೇಶ್ ಕುಮಾರ್, ಅರವಿಂದ ಲಿಂಬಾವಳಿ, ಕೇಂದ್ರದ ಮಾಜಿ ಸಚಿವ ಡಿ.ವಿ.ಸದಾನಂದಗೌಡ, ಶಾಸಕ ಸತೀಶ್ ರೆಡ್ಡಿ ಸೇರಿದಂತೆ ಇನ್ನಿತರರು ಹಾಜರಿದ್ದರು.

ಮೋದಿ ಧೀಮಂತ ನಾಯಕ

‘ದೇಶಪ್ರೇಮ, ಶಿಸ್ತನ್ನು ಬಿಜೆಪಿ ನಮಗೆ ಕಲಿಸಿದೆ. ಸ್ವಾತಂತ್ರ್ಯದ 75ನೆ ವರ್ಷವನ್ನು ಪ್ರಧಾನಿ ಮೋದಿಯವರು ಇಡೀ ರಾಷ್ಟ್ರ ತಲೆ ಎತ್ತಿ ನೋಡುವಂತೆ ಮಾಡಿದ್ದಾರೆ. ಅವರೊಬ್ಬ ಧೀಮಂತ ನಾಯಕರು. ಆದರೆ, ವಿಪಕ್ಷ ನಾಯಕ ಸಿದ್ದರಾಮಯ್ಯ ‘ಸ್ವಾತಂತ್ರ್ಯ ನಾವು ತಂದು ಕೊಟ್ಟೆವು' ಎಂದು ಹೇಳುತ್ತಾರೆ. ಸ್ವಾತಂತ್ರ್ಯಕ್ಕೆ ಹೋರಾಡಿದ ಕಾಂಗ್ರೆಸ್ ಇಲ್ಲವಾಗಿದೆ. ಈಗಿರುವ ಕಾಂಗ್ರೆಸ್, ಒಳ ಜಗಳದಿಂದ, ವ್ಯಕ್ತಿ ಪೂಜೆಯಿಂದ ಬಸವಳಿದಿರುವ ಪಕ್ಷ ಅಷ್ಟೇ

-ಆರ್.ಅಶೋಕ್ ಕಂದಾಯ ಸಚಿವ


ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ

‘ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಸಾಮೂಹಿಕ ನಾಯಕತ್ವದಲ್ಲಿ ಎದುರಿಸುತ್ತೇವೆ. ಬಿಜೆಪಿ 140ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ. ರಾಜ್ಯದಲ್ಲಿ ಮತ್ತೆ ನಾವೇ ಅಧಿಕಾರಕ್ಕೆ ಬರುತ್ತೇವೆ. ಯಾರಿಗೂ ಈ ಬಗ್ಗೆ ಯಾವುದೇ ಕಾರಣಕ್ಕೂ ಸಂದೇಹ ಬೇಡ. ಮೋದಿ ಅವರನ್ನು ಪ್ರಧಾನಿಯಾಗಿ ಪಡೆದ ನಾವೇ ಪುಣ್ಯವಂತರು. ಹಗಲಿರುಳೆನ್ನದೆ ಅವರು ಕೆಲಸ ಮಾಡ್ತಿದ್ದಾರೆ. ಅಂತಹ ಕೆಲಸವನ್ನು ರಾಜ್ಯದಲ್ಲಿ ಮಾಡಿದರೆ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲಿದೆ'

-ಬಿ.ಎಸ್.ಯಡಿಯೂರಪ್ಪ ಮಾಜಿ ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News