ಮಡಿಕೇರಿ: ಪೊನ್ನಂಪೇಟೆಯ ಗಾಂಧಿ ಪ್ರತಿಮೆ ಎದುರು ದಸಂಸದಿಂದ ಅರೆಬೆತ್ತಲೆ ಪ್ರತಿಭಟನೆ

Update: 2022-08-15 14:56 GMT

ಮಡಿಕೇರಿ ಆ.15: ಭಾರತ ಸ್ವಾತಂತ್ರ್ಯೋತ್ಸವದ ಸಂಭ್ರಮದಲ್ಲಿರುವ ಈ ಗಳಿಗೆಯವರೆಗೂ ದಲಿತ ಸಮುದಾಯದ ಮೂಲಭೂತ ಸಂಕಷ್ಟಗಳಿಗೆ ಸರ್ಕಾರಗಳು ಸ್ಪಂದಿಸಿಲ್ಲವೆಂದು ಆರೋಪಿಸಿ ಪೊನ್ನಂಪೇಟೆಯ ‘ಗಾಂಧೀ ಪ್ರತಿಮೆ’ ಮುಂಭಾಗ ದಲಿತ ಸಂಘರ್ಷ ಸಮಿತಿ ಅರೆಬೆತ್ತಲೆ ಪ್ರತಿಭಟನೆ ನಡೆಸಿತು.

ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಪರಶುರಾಮ್ ಅವರ ನೇತೃತ್ವದಲ್ಲಿ ಸಂಘಟನೆಯ ಪ್ರಮುಖರು ಮತ್ತು ಕಾರ್ಯಕರ್ತರು ಅರೆಬೆತ್ತಲೆಯಾಗಿ ಪೊನ್ನಂಪೇಟೆಯ ಬಸ್ ನಿಲ್ದಾಣದಿಂದ ಗಾಂಧಿ ಪ್ರತಿಮೆಯ ವೃತ್ತದವರೆಗೆ ಘೋಷಣೆಗಳ ಸಹಿತ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಭೂ ಮಾಲಕರು ಒತ್ತುವರಿ ಮಾಡಿಕೊಂಡಿರುವ ಸರ್ಕಾರಿ ಪೈಸಾರಿ ಜಾಗವನ್ನು ತಕ್ಷಣ ತೆರವುಗೊಳಿಸಿ ನಿವೇಶನ ರಹಿತರಿಗೆ ಹಂಚಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಸಂಚಾಲಕ ಹೆಚ್.ಆರ್.ಪರಶುರಾಮ್ ಮಾತನಾಡಿ, ಭಾರತ ಸ್ವಾತಂತ್ರ್ಯವನ್ನು ಪಡೆದು 75 ವರ್ಷಗಳು ಸಂದಿದ್ದರು ಇಂದಿಗೂ ಪರಿಶಿಷ್ಟ ಜಾತಿ ಮತ್ತು ಪಂಗಡದ ಶೋಷಿತ ಸಮುದಾಯದ ಬಡ ಮಂದಿ ಸ್ವಂತ ಮನೆ, ನಿವೇಶನಗಳನ್ನಾಗಲಿ ಹೊಂದಿಲ್ಲ. ಕಾಫಿ ತೋಟಗಳಲ್ಲಿ ಕಾರ್ಮಿಕರಾಗಿ ದುಡಿಯುತ್ತಾ, ಅಲ್ಲಿನ ಲೈನ್ ಮನೆಗಳಲ್ಲಿ ವಾಸವಿರುವ ಶೋಷಿತ ಸಮುದಾಯದ ಕುಟುಂಬಗಳು ಸೂರು ಭಾಗ್ಯವಿಲ್ಲದೆ ಸಂಕಷ್ಟದಲ್ಲಿವೆ. ನಿವೇಶನ, ಮನೆಗಳನ್ನು ನೀಡುವಂತೆ ಜಿಲ್ಲಾಡಳಿತ ಮತ್ತು ಸರ್ಕಾರವನ್ನು ಆಗ್ರಹಿಸುತ್ತಲೇ ಬಂದಿದ್ದರೂ ಸೂಕ್ತ ಸ್ಪಂದನೆ ದೊರಕಿಲ್ಲವೆಂದು ಬೇಸರ ವ್ಯಕ್ತಪಡಿಸಿದರು.

ಅರಣ್ಯ ಹಕ್ಕು ಕಾಯ್ದೆಯಡಿ ಭೂ ರಹಿತ ಆದಿವಾಸಿಗಳಿಗೆ ತಲಾ 5 ಏಕರೆ ಭೂಮಿಯನ್ನು ನೀಡಬೇಕು ಮತ್ತು ಅವರು ವಾಸಿಸುತ್ತಿರುವ ಅರಣ್ಯ ಪ್ರದೇಶದಲ್ಲೆ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಪಾರಂಪರಿಕ ಹಕ್ಕುಗಳನ್ನು ರಕ್ಷಿಸಬೇಕು. ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಅವರ ಗ್ರಾಮಗಳಲ್ಲಿ ಸ್ಮಶಾನ ಜಾಗವನ್ನು ಕಾಯ್ದಿರಿಸಬೇಕು, ದಲಿತ, ಹಿಂದುಳಿದ, ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಹೋಬಳಿಗೊಂದು ವಸತಿ ಶಾಲೆ, ಸುಸಜ್ಜಿತ ವಿದ್ಯಾರ್ಥಿ ನಿಲಯಗಳನ್ನು ಸ್ಥಾಪಿಸಬೇಕು ಮತ್ತು ತಾಲ್ಲೂಕಿಗೆ ಒಂದು ಪದವಿ ಕಾಲೇಜನ್ನು ಸ್ಥಾಪಿಸಬೇಕೆಂದು ಆಗ್ರಹಿಸಿದರು.

::: ಬೇಡಿಕೆಗಳು :::

ದಲಿತ ವಿದ್ಯಾವಂತರಿಗೆ ಕಡ್ಡಾಯವಾಗಿ ಸರ್ಕಾರಿ ಉದ್ಯೋಗ ದೊರಕುವಂತೆ ಕಾನೂನನ್ನು ಜಾರಿಗೊಳಿಸಬೇಕು, ಭೂ ಮಾಲೀಕರಿಂದ ಅತಿಕ್ರಮಣಗೊಂಡ ಸರ್ಕಾರಿ ಪೈಸಾರಿ ಜಾಗವನ್ನು ಅವರಿಗೆ ಗುತ್ತಿಗೆ ಆಧಾರದಲ್ಲಿ ನೀಡುವ ನಿರ್ಧಾರವನ್ನು ರಾಜ್ಯ ಸರ್ಕಾರ ಕೈಬಿಡಬೇಕು. ಪರಿಶಿಷ್ಟ ಜಾತಿಯವರಿಗೆ ಪ್ರಸ್ತುತ ಇರುವ ಮೀಸಲಾತಿ ಶೇ.15 ನ್ನು ಶೇ.17 ಕ್ಕೆ ಮತ್ತು ಪರಿಶಿಷ್ಟ ಪಂಗಡದವರಿಗೆ ಇರುವ ಮೀಸಲಾತಿಯನ್ನು ಶೇ.3 ರಿಂದ ಶೇ.7ಕ್ಕೆ ಏರಿಕೆ ಮಾಡಬೇಕು ಮತ್ತು ದಲಿತ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನವನ್ನೂ ಹೆಚ್ಚಿಸಬೇಕೆಂದು ಸರ್ಕಾರವನ್ನು ಪ್ರತಿಭಟನಾಕಾರರು ಒತ್ತಾಯಿಸಿದರು.

ದಸಂಸ ಪ್ರಮುಖ ಗೋವಿಂದಪ್ಪ, ಯರವ ಸಮುದಾಯದ ಮುಖಂಡ ಪಿ.ಎಸ್.ಮುತ್ತ, ದಸಂಸ ಜಿಲ್ಲಾ ಸಂಘಟನಾ ಸಂಚಾಲಕರುಗಳಾದ ರಜನೀಕಾಂತ್, ಕುಮಾರ್ ಮಹದೇವ್ ಸೇರಿದಂತೆ ಹಲವು ಪ್ರಮುಖರು, ಕಾರ್ಯಕರ್ತರು ಪ್ರತಿಭಟನೆಯಲ್ಲಿ  ಪಾಲ್ಗೊಂಡಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News