ಸ್ವಾತಂತ್ರ್ಯದ ಹೋರಾಟ ಇನ್ನೂ ಪೂರ್ಣವಾಗಿಲ್ಲ: ರಣದೀಪ್ ಸಿಂಗ್ ಸುರ್ಜೇವಾಲಾ

Update: 2022-08-15 16:08 GMT

ಬೆಂಗಳೂರು, ಆ.15: ದೇಶವು ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆದು 75 ವರ್ಷ ಪೂರೈಸಿದೆ. ಆದರೆ, ಯಾವಯಾವ ಕಾರಣಗಳಿಗಾಗಿ ಈ ಹೋರಾಟ ನಡೆಯಿತೋ ಅದು ಇನ್ನೂ ಪೂರ್ಣವಾಗಿಲ್ಲ ಎಂದು ರಾಜ್ಯಕಾಂಗ್ರೆಸ್‍ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಹೇಳಿದರು.

ಸೋಮವಾರ ನಗರದ ಬಸವನಗುಡಿಯಲ್ಲಿರುವ ನ್ಯಾಷನಲ್‍ ಕಾಲೇಜು ಮೈದಾನದಲ್ಲಿ ನಡೆದ ಸ್ವಾತಂತ್ರ್ಯ ನಡಿಗೆ ಕಾರ್ಯಕ್ರಮದ ಸಮಾರೋಪದಲ್ಲಿ ಮಾತನಾಡಿದ ಅವರು, ಮಹಾತ್ಮಗಾಂಧಿ, ಜವಾಹರ್ ಲಾಲ್ ನೆಹರು, ಮೌಲಾನ ಅಬುಲ್ ಕಲಾಂ ಅಝಾದ್ ಸೇರಿದಂತೆ ಹಲವು ಸ್ವಾತಂತ್ರ್ಯ ಹೋರಾಟಗಾರರು, ಕೇವಲ ಬ್ರಿಟಿಷರ ದಾಸ್ಯದಿಂದ ದೇಶವನ್ನು ಮುಕ್ತವಾಗಿಸಲು ಹೋರಾಡಲಿಲ್ಲ. ಸ್ವಾತಂತ್ರ್ಯದ ಹೋರಾಟವು ಮನುಷ್ಯರ ನಡುವಿನ ಅಸಮಾನತೆ, ಅಸ್ಪೃಶ್ಯತೆಯ ವಿರುದ್ಧದ ಹೋರಾಟವೂ ಆಗಿತ್ತು ಎಂದರು.

ಇವತ್ತು ಪ್ರಜಾಪ್ರಭುತ್ವದ ಉಳಿವಿಗಾಗಿ ಹೋರಾಟ ಮಾಡಬೇಕಾದ ಅಗತ್ಯ ಇದೆ. ದೇಶದ ಸಂವಿಧಾನದ ಮೇಲೆ ದಾಳಿಯಾಗುತ್ತಿದೆ.ರಾಜಕೀಯ ದುರುದ್ದೇಶದಿಂದ ಸಾಂವಿಧಾನಿಕವಾಗಿ ರಚನೆಯಾಗಿರುವತ ನಿಖಾ ಸಂಸ್ಥೆಗಳನ್ನು ದುರುಪಯೋಗ ಮಾಡಲಾಗುತ್ತಿದೆ. ಅಲ್ಪಸಂಖ್ಯಾತರು, ದಲಿತರು, ಮಹಿಳೆಯರ ಮೇಲೆ ದಾಳಿಗಳು ನಡೆಯುತ್ತಿವೆ. ಭಾಷೆ, ಬಣ್ಣ, ಉಡುಗೆ, ತೊಡುಗೆ ಆಧಾರದಲ್ಲಿ ಭೇದ ಭಾವ ನಡೆಯುತ್ತಿದೆ ಎಂದು ರಣದೀಪ್ ಸಿಂಗ್ ಸುರ್ಜೇವಾಲ ಹೇಳಿದರು.

ಈ ದೇಶವುಎಲ್ಲ ವರ್ಗಗಳು, ಎಲ್ಲಧರ್ಮದವರಿಗೆ ಸೇರಿದ್ದು. ಪ್ರತಿಯೊಬ್ಬರಿಗೂ ಸಂವಿಧಾನದಲ್ಲಿ ಸಮಾನ ಅವಕಾಶಗಳು, ಸಮಾನ ಹಕ್ಕುಗಳನ್ನು ನೀಡಲಾಗಿದೆ. ಯಾರೊಬ್ಬರೂ ಮತ್ತೊಬ್ಬರ ಹಕ್ಕುಗಳನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ. ಸಂವಿಧಾನದ ವಿರುದ್ಧವಾಗಿ ಯಾರಾದರೂ ಮತ್ತೊಬ್ಬರ ಹಕ್ಕುಗಳನ್ನು ಕಸಿದುಕೊಳ್ಳಲು ಮುಂದಾದರೆ ಅಂತಹವರ ವಿರುದ್ಧ ನಮ್ಮ ಹೋರಾಟ ಮುಂದುವರೆಯಲಿದೆ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News