ಗುರುಪುರ ಗ್ರಾಪಂ ಆಯೋಜನೆ; ಸ್ವಾತಂತ್ರ್ಯೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ‘ಸಾವರ್ಕರ್’ ಫೋಟೊ ವಿವಾದ

Update: 2022-08-15 16:25 GMT

ಮಂಗಳೂರು, ಆ.15: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಗುರುಪುರ ಗ್ರಾಪಂ ವತಿಯಿಂದ ಸೋಮವಾರ ಗ್ರಾಪಂ ಆವರಣದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸ್ಥಳೀಯ ಖಾಸಗಿ ಶಾಲಾ ಮಕ್ಕಳ ನೃತ್ಯರೂಪಕದ ವೇಳೆ ‘ಸಾವರ್ಕರ್’ ಭಾವಚಿತ್ರ ಪ್ರದರ್ಶನವು ವಿವಾದಕ್ಕೆ ಕಾರಣವಾಯಿತು ಎಂದು ತಿಳಿದು ಬಂದಿದೆ.

ಸಾವರ್ಕರ್ ಪ್ರದರ್ಶನವನ್ನು ಎಸ್‌ಡಿಪಿಐ ಬೆಂಬಲಿತ ಗ್ರಾಪಂ ಸದಸ್ಯರು ಮತ್ತು ಬೆಂಬಲಿಗರು ಪ್ರಶ್ನಿಸಿ ಆಕ್ಷೇಪಿಸಿದರಲ್ಲದೆ ಡ್ಯಾನ್ಸ್ ಶಿಕ್ಷಕಿಯ ಬಳಿ ಕ್ಷಮೆ ಕೇಳುವಂತೆ ಒತ್ತಾಯಿಸಿದರು ಎನ್ನಲಾಗಿದೆ. ಇದಕ್ಕೆ ಬಿಜೆಪಿ ಬೆಂಬಲಿತರ ಗ್ರಾಪಂ ಸದಸ್ಯರು ಮತ್ತು ಬೆಂಬಲಿಗರು ವಿರೋಧ ವ್ಯಕ್ತಪಡಿಸಿದ್ದಾರೆ. ಹಾಗಾಗಿ ಕೆಲಕಾಲ ಸ್ಥಳದಲ್ಲಿ ಗೊಂದಲ ಸೃಷ್ಟಿಯಾಯಿತು ಎಂದು ಹೇಳಲಾಗಿದೆ. ಇದರಿಂದಾಗಿ ಸಾಂಸ್ಕೃತಿಕ ಕಾರ್ಯಕ್ರಮ ರದ್ದುಗೊಂಡಿತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ವಿಷಯ ತಿಳಿದ ಬಜ್ಪೆಪೊಲೀಸ್ ಇನ್‌ಸ್ಪೆಕ್ಟರ್ ಪ್ರಕಾಶ್ ಮತ್ತಿತರರು ಗ್ರಾಪಂ ಕಚೇರಿಗೆ ತೆರಳಿ ಪರಿಸ್ಥಿತಿ ನಿಯಂತ್ರಿಸಿದರು. ಘಟನೆಗೆ ಸಂಬಂಧಿಸಿದಂತೆ ಪಿಡಿಒ ದೂರು ನೀಡಿದ್ದಾರೆ ಎಂದು ಇನ್‌ಸ್ಪೆಕ್ಟರ್ ಪ್ರಕಾಶ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News