ಲೋಕ್ ಅದಾಲತ್; ರಾಜ್ಯಾದ್ಯಂತ 8.34 ಲಕ್ಷ ಕೇಸ್ ಇತ್ಯರ್ಥ: ನ್ಯಾ.ವೀರಪ್ಪ

Update: 2022-08-15 16:25 GMT

ಬೆಂಗಳೂರು, ಆ.15: ರಾಜ್ಯಾದ್ಯಂತ ಎಲ್ಲ ನ್ಯಾಯಾಲಯಗಳಲ್ಲಿ 2022ರ ಆ.13ರಂದು ನಡೆದ ಮೆಗಾ ರಾಷ್ಟ್ರೀಯ ಲೋಕ್ ಅದಾಲತ್‍ನಲ್ಲಿ ದಾಖಲೆಯ 8,34,620 ಪ್ರಕರಣಗಳು ಇತ್ಯರ್ಥವಾಗಿವೆ. ಅವುಗಳಲ್ಲಿ 120 ದಂಪತಿಗಳು ವೈಮನಸ್ಸು ದೂರು ಮಾಡಿಕೊಂಡು ಮತ್ತೆ ಒಂದಾಗಿ ಬಾಳ್ವೆ ನಡೆಸಲು ನಿರ್ಧರಿಸಿದ್ದಾರೆ ಎಂದು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ(ಕೆಎಸ್‍ಎಲ್‍ಎಸ್‍ಎ) ಕಾರ್ಯಕಾರಿ ಅಧ್ಯಕ್ಷರು ಹಾಗೂ ಕರ್ನಾಟಕ ಹೈಕೋರ್ಟ್ ಹಿರಿಯ ನ್ಯಾಯಮೂರ್ತಿ ಬಿ ವೀರಪ್ಪ ತಿಳಿಸಿದ್ದಾರೆ.

ಹೈಕೋರ್ಟ್‍ನ ಹಿರಿಯ ನ್ಯಾ.ಬಿ.ವೀರಪ್ಪ ಅವರು ಸುದ್ದಿಗೋಷ್ಠಿ ನಡೆಸಿ ವಿವರಗಳನ್ನು ಹಂಚಿಕೊಂಡರು. ಈ ಬಾರಿ 8,34,620 ಪ್ರಕರಣಗಳು ಇತ್ಯರ್ಥವಾಗಿರುವುದು ಸಾರ್ವಕಾಲಿಕ ದಾಖಲೆ ಎಂದರು.

ರಾಜೀ ಸಂಧಾನದ ಮೂಲಕ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳುವುದರಿಂದ ಸಮಯ, ಹಣ ಉಳಿತಾಯವಾಗುವುದರ ಜತೆಗೆ, ತ್ವರಿತವಾಗಿ ಪ್ರಕರಣ ವಿಲೇವಾರಿಯಾಗಲಿದೆ. ದಿನೇ ದಿನೇ ಅದಾಲತ್ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಹೆಚ್ಚಾಗುತ್ತಿದೆ. ಹಾಗಾಗಿಯೇ ಹೆಚ್ಚಿನ ಜನರು ವ್ಯಾಜ್ಯಗಳನ್ನು ಪರಿಹರಿಸಿಕೊಳ್ಳಲು ಮುಂದಾಗುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದರು.

ಅದಾಲತ್‍ನಲ್ಲಿ ಒಟ್ಟು 1,380 ವೈವಾಹಿಕ ಪ್ರಕರಣಗಳು ಇತ್ಯರ್ಥವಾಗಿವೆ. ಅವುಗಳಲ್ಲಿ 120ಕ್ಕಿಂತಲೂ ಹೆಚ್ಚಿನ ಪ್ರಕರಣಗಳಲ್ಲಿ ದಂಪತಿಗಳು ರಾಜಿ ಸಂಧಾನದಿಂದ ಪುನಹ ಒಂದಾಗಿ ಜೀವನ ನಡೆಸಲು ತೀರ್ಮಾನಿಸಿದ್ದಾರೆ ಎಂದರು. 

ಜನರು ಅನಗತ್ಯವಾಗಿ ವರ್ಷಾನುಗಟ್ಟಲೆ ನ್ಯಾಯಾಲಯಗಳಿಗೆ ಅಲೆಯುವುದನ್ನು ತಪ್ಪಿಸಲು ಹಾಗೂ ಖರ್ಚಿಲ್ಲದೆ ವ್ಯಾಜ್ಯಗಳನ್ನು ಬಗೆಹರಿಸಿಕೊಳ್ಳಲು ರಾಜಿ-ಸಂಧಾನ ಸೂಕ್ತ ವಿಧಾನ. ಕಕ್ಷಿದಾರರು ಅದಾಲತ್‍ಗಳ ಮೂಲಕ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಕೇಸ್‍ಗಳನ್ನು ಇತ್ಯರ್ಥಪಡಿಸಿಕೊಳ್ಳಲು ಮುಂದಾಗಬೇಕು, ಇದರಿಂದ ಎಲ್ಲರಿಗೂ ಒಳ್ಳೆಯದಾಗಲಿದೆ' ಎಂದು ಕೆಎಸ್‍ಎಲ್‍ಎಸ್‍ಎ ಕಾರ್ಯ ನಿರ್ವಾಹಕ ಅಧ್ಯಕ್ಷ ನ್ಯಾ.ಬಿ.ವೀರಪ್ಪ ಹೇಳಿದ್ದಾರೆ.  

ಸಂಚಾರಿ ಪ್ರಕರಣಗಳು, ವಾಣಿಜ್ಯ ದಾವೆಗಳು, ಚೆಕ್ ಬೌನ್ಸ್, ಸತಿ-ಪತಿ ವಿಚ್ಛೇದನಾ ಕೇಸ್, ಕೌಟುಂಬಿಕ ಪ್ರಕರಣಗಳನ್ನು ರಾಷ್ಟ್ರೀಯ ಲೋಕ್ ಅದಾಲತ್‍ನಲ್ಲಿ ಇತ್ಯರ್ಥಪಡಿಸಲಾಗಿದೆ ಎಂದು ತಿಳಿಸಿದರು. 

ಲೋಕ್ ಅದಾಲತ್ ಬಗ್ಗೆ ಅಪಪ್ರಚಾರ ಮಾಡಬೇಡಿ: ನ್ಯಾ.ಬಿ.ವೀರಪ್ಪ ಮನವಿ

ತಹಶೀಲ್ದಾರ್ ಅವರ ಮುಂದೆ ಇದ್ದ ಖಾತೆ ಬದಲಾವಣೆ ವಿಚಾರದ ಕೇಸ್‍ನ್ನು ಇತ್ಯರ್ಥಗೊಳಿಸಿದರೆ ಅದು ಹೇಗೆ ಕ್ಷುಲ್ಲಕ ಪ್ರಕರಣವಾಗುತ್ತದೆ? ಇವೆಲ್ಲವೂ ದಾವೆ ಪೂರ್ವ ಪ್ರಕರಣಗಳಾಗಿವೆ. ಹೀಗಾಗಿ, ಆರಂಭಿಕ ಹಂತದಲ್ಲೇ ಇತ್ಯರ್ಥಪಡಿಸಲಾಗುತ್ತದೆ. ಲೋಕ ಅದಾಲತ್ ಕುರಿತು ಜನರಲ್ಲಿ ವ್ಯಾಪಕ ಅರಿವು ಮೂಡುತ್ತಿದ್ದು, ಅದರ ಸದುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಇದು ಹಲವರಿಗೆ ಸಂಕಟ ಉಂಟು ಮಾಡಿದೆ. ನಾವೆಲ್ಲರೂ ಜನರ ಸೇವೆ ಮಾಡುತ್ತಿದ್ದೇವೆ. ಕೆಲವರು ಇದಕ್ಕೆ ಏಕೆ ಅಡ್ಡಿ ಉಂಟು ಮಾಡುತ್ತಿದ್ದಾರೆ ಎಂಬುದು ತಿಳಿದಿಲ್ಲ. ಯಾರು ಕೂಡ ಅಪಪ್ರಚಾರ ಮಾಡಬಾರದು. ಏನಾದರೂ ಅನುಮಾನಗಳಿದ್ದರೆ ನಮ್ಮನ್ನು ಸಂಪರ್ಕಿಸಬಹುದು ಎಂದು ಕರ್ನಾಟಕ ಹೈಕೋರ್ಟ್ ಹಿರಿಯ ನ್ಯಾಯಮೂರ್ತಿ ಬಿ. ವೀರಪ್ಪ ಮನವಿ ಮಾಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News