ಸಜಹ ಸ್ಥಿತಿಗೆ ಮರಳಿದ ಶಿವಮೊಗ್ಗ: ಟಿವಿ ಮಾಧ್ಯಮಗಳಲ್ಲಷ್ಟೇ ಪ್ರಕ್ಷುಬ್ಧ

Update: 2022-08-16 08:19 GMT
ಶಿವಮೊಗ್ಗ ನಗರ

ಶಿವಮೊಗ್ಗ, ಆ.16: ನಗರದ ಅಮೀರ್ ಅಹ್ಮದ್ ವೃತ್ತದಲ್ಲಿ ಸಾವರ್ಕರ್ ಭಾವಚಿತ್ರ ಹಾಕಿದ್ದ ವಿಚಾರವಾಗಿ ಉಂಟಾದ ಗಲಾಟೆ ಮತ್ತು ಗಾಂಧಿ ಬಝಾರ್ ನಲ್ಲಿ ಯುವಕನೋರ್ವನಿಗೆ ಚೂರಿ ಇರಿತದ ಹಿನ್ನೆಲೆಯಲ್ಲಿ ಉಂಟಾಗಿದ್ದ ಪ್ರಕ್ಷುಬ್ಧ ಸ್ಥಿತಿ ಈಗ ತಣ್ಣಗಾಗಿದೆ. ಎಲ್ಲೆಡೆ ಪೊಲೀಸ್ ಬಿಗಿ ಪಹರೆ ಹಾಕಲಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಕಟ್ಟೆಚ್ಚರ ವಹಿಸಲಾಗಿದೆ. 

ನಿಷೇಧಾಜ್ಞೆಯ ಎರಡನೆಯ ದಿನವಾದ ಇಂದು ನೆಹರೂ ರಸ್ತೆ, ಗಾಂಧಿ ಬಝಾರ್, ಓ ಟಿ ರಸ್ತೆ, ಎಂಕೆಕೆ ರಸ್ತೆ, ಬಿ.ಎಚ್. ರಸ್ತೆಯಲ್ಲಿ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಲಾಗಿದೆ. ಜನ ಸಂಚಾರ ಎಂದಿನಂತೆ ಇದೆ. ಮುಂಜಾಗೃತ ಕ್ರಮವಾಗಿ ಶಿವಮೊಗ್ಗ, ಭದ್ರಾವತಿ ಪಟ್ಟಣ ವ್ಯಾಪ್ತಿಯ ಶಾಲೆ-ಕಾಲೇಜಿಗೆ ರಜೆ ಘೋಷಿಸಿರುವುದರಿಂದ ಮಕ್ಕಳ ಓಡಾಟವಿಲ್ಲ. ಸಿಟಿಸೆಂಟರ್ ಮಾಲ್ ಗೆ ಬರುವವರು ವಿರಳವಾಗಿದ್ದಾರೆ. ಅವಶ್ಯ ಕೆಲಸವಿರುವವರು ಮಾತ್ರ ಅಲ್ಲಲ್ಲಿ ಸಂಚರಿಸುತ್ತಿರುವ ದೃಶ್ಯ ಕಂಡುಬರುತ್ತಿದೆ. 

ಪೊಲೀಸ್ ಪಥ ಸಂಚಲನ:  ನಗರದಲ್ಲಿ ಕ್ಷಿಪ್ರ ಕಾರ್ಯಾಚರಣೆ ಪಡೆ (ಆರ್ಎಎಫ್) ತುಕಡಿಯವರು ಶಿವಪ್ಪ ನಾಯಕ ವೃತ್ತದಿಂದ ಅಮೀರ್ ಅಹ್ಮದ್ ವೃತ್ತ, ಎಂಕೆಕೆ ರಸ್ತೆ, ಗಾಂಧಿ ಬಜಾರ್, ಕೆ. ಆರ್. ಪುರಂ ಸೇರಿದಂತೆ ಹಳೆ ಶಿವಮೊಗ್ಗ ಭಾಗದಲ್ಲಿ ಪಥ ಸಂಚಲನ ನಡೆಸಿದರು.

ಐಜಿಪಿ ತ್ಯಾಗರಾಜನ್ ಸೋಮವಾರ ರಾತ್ರಿಯಿಂದಲೇ  ನಗರಕ್ಕಾಗಮಿಸಿದ್ದು ನಗರದ ಹಲವು ಪ್ರದೇಶಗಳಲ್ಲಿ ಸಂಚರಿಸಿ ಪರಿಶೀಲನೆ ನಡೆಸಿದರು. ಎನ್ ಟಿ ರಸ್ತೆ, ನ್ಯೂ ಮಂಡ್ಲಿ, ಊರಗಡೂರು, ಸೀಗೆಹಟ್ಟಿ, ಗಾಂಧಿಬಜಾರ್ನಲ್ಲಿ ಸಂಚರಿಸಿದರು. ಈ ಪ್ರದೇಶಗಳ ಸೂಕ್ಷ್ಮ ಪಾಯಿಂಟ್ಗಳಲ್ಲಿ ಕೆಎಸ್ ಆರ್ಪಿ ತುಕಡಿಯನ್ನು ಅವರು ನಿಯೋಜಿಸಿದ್ದಾರೆ.

ಸೋಮವಾರ ಗಾಂಧಿ ಬಝಾರಿನ ಪ್ರೇಮ್ ಸಿಂಗ್ ಎಂಬವರಿಗೆ ಸೋಮವಾರ ಸಂಜೆ ಚೂರಿಯಿಂದ ಇರಿದು ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಜಬಿ, ಅಬ್ದುರ್ರಹ್ಮಾನ್ ಹಾಗೂ ನದೀಂ ಬಂಧಿತ ಆರೋಪಿಗಳಾಗಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿ ಅಬ್ದುರ್ರಹ್ಮಾನ್ ಹಾಗೂ ನದೀಂನನ್ನು ಸೋಮವಾರ ಬಂಧಿಸಿದ್ದಾರೆ. ಮಂಗಳವಾರ ನಸುಕಿನ ವೇಳೆ  ಪೊಲೀಸರು ಬಂಧಿಸಲು ತೆರಳಿದ್ದ ವೇಳೆ ಹಲ್ಲೆಗೆ ಮುಂದಾದ ಆರೋಪಿ ಜಬೀ ಕಾಲಿಗೆ ಗುಂಡಿಕ್ಕಿದ ವಿನೋಬ ನಗರ ಠಾಣೆ ಪೊಲೀಸರು ಆತನನ್ನು ಬಂಧಿಸಿದ್ದಾರೆ.

ಮಾಧ್ಯಮಗಳಲ್ಲಷ್ಟೇ ಪ್ರಕ್ಷುಬ್ಧ: ಶಿವಮೊಗ್ಗ ನಗರ ಸಹಜ ಸ್ಥಿತಿಗೆ ಮರಳುತ್ತಿದೆ. ಎಂದಿನಂತೆ ಜನರು ತಮ್ಮ ದೈನಂದಿನ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ ಟಿವಿ ಮಾಧ್ಯಮಗಳಲ್ಲಿ ಮಾತ್ರ ಶಿವಮೊಗ್ಗ ಪ್ರಕ್ಷುಬ್ಧ ಎಂಬ ತಲೆಬರಹದಡಿ ಸುದ್ದಿ ಪ್ರಸಾರ ಮಾಡಲಾಗುತ್ತಿದೆ. ರಾಜ್ಯದ ವಿವಿಧೆಡೆಯಿಂದ ರಾಷ್ಟ್ರೀಯ ಮಾಧ್ಯಮಗಳು ಶಿವಮೊಗ್ಗದಲ್ಲಿ ಬೀಡುಬಿಟ್ಟಿವೆ.

ಇದನ್ನೂ ಓದಿ:  ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಲಿ ಎಂದು ಆಸೆ ಪಡುವ ವ್ಯಕ್ತಿಗಳಲ್ಲಿ ನಾನೂ ಒಬ್ಬ: ಸಚಿವ ಶ್ರೀರಾಮುಲು

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News