ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಮಹಿಳಾ ಆಯೋಗಕ್ಕೆ ಆಪ್ ದೂರು

Update: 2022-08-16 12:13 GMT

ಬೆಂಗಳೂರು, ಆ.16: ಯುವತಿಯರು ಸರಕಾರಿ ಕೆಲಸ ಪಡೆಯಲು ಮಂಚ ಹತ್ತಬೇಕು ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆಂದು ಆರೋಪಿಸಿ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ವಿರುದ್ದ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಆಮ್ ಆದ್ಮಿ ಪಾರ್ಟಿಯ ಮಹಿಳಾ ಘಟಕವು ರಾಜ್ಯ ಮಹಿಳಾ ಆಯೋಗಕ್ಕೆ ಮಂಗಳವಾರ ಮನವಿ ಸಲ್ಲಿಸಿತು

ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಎಎಪಿಯ ಬೆಂಗಳೂರು ನಗರ ಮಹಿಳಾ ಘಟಕದ ಅಧ್ಯಕ್ಷೆ ಕುಶಲಸ್ವಾಮಿ, ಮಾಜಿ ಸಚಿವ ಪ್ರಿಯಾಂಕ್ ಖರ್ಗೆಯವರು ಆ.12ರಂದು ಕಲಬುರಗಿಯಲ್ಲಿ ಪತ್ರಿಕಾಗೊಷ್ಠಿಯಲ್ಲಿ ಮಾತನಾಡುವಾಗ ಮಹಿಳೆಯರ ವಿರುದ್ಧ ನಾಲಿಗೆ ಹರಿಬಿಟ್ಟಿದ್ದಾರೆ ಎಂದು ಟೀಕಿಸಿದರು.

ಇದು ಲಂಚ-ಮಂಚದ ಸರಕಾರ, ಯುವಕರಿಗೆ ನೌಕರಿ ಬೇಕಂದ್ರೆ ಲಂಚ ಕೊಡಬೇಕು. ಯುವತಿಯರಿಗೆ ನೌಕರಿ ಬೇಕೆಂದರೆ ಮಂಚ ಹತ್ತಬೇಕು ಎನ್ನುವ ಕೀಳು ಹೇಳಿಕೆಯನ್ನು ನೀಡಿದ್ದಾರೆ. ಇದು ಉದ್ಯೋಗಸ್ಥ ಹಾಗೂ ಉದ್ಯೋಗಾಕಾಂಕ್ಷಿ ಮಹಿಳೆಯರಿಗೆ ಮಾಡಿರುವ ಅವಮಾನವಾಗಿದ್ದು, ಮಹಿಳಾ ಆಯೋಗವು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.

ರಾಜಕೀಯವಾಗಿ ತಮ್ಮ ಬೇಳೆ ಬೇಯಿಸಿಕೊಳ್ಳುವ ನಿಟ್ಟಿನಲ್ಲಿ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ಕೀಳು ಹೇಳಿಕೆ ನೀಡುವುದು ಹೊಸತೇನಲ್ಲ. ಆದರೆ, ಪ್ರಿಯಾಂಕ್ ಖರ್ಗೆ ನೀಡಿರುವ ಈ ಹೇಳಿಕೆ ಸರಕಾರಿ ಕೆಲಸ ಪಡೆಯುವ ಎಲ್ಲ ಮಹಿಳಾ ಅಭ್ಯರ್ಥಿಗಳ ಮೇಲೆ ಕಪ್ಪು ಚುಕ್ಕೆ ಬರುವಂತಹದ್ದಾಗಿದೆ ಎಂದು ಎಎಪಿ ಮಾಧ್ಯಮ ವಕ್ತಾರೆ ಉಷಾ ಮೋಹನ್ ಆಕ್ರೋಶ ವ್ಯಕ್ತಪಡಿಸಿದರು.

ಈ ಹೇಳಿಕೆಯ ತೀವ್ರತೆಯನ್ನು ಗಮನಿಸಿ ರಾಜ್ಯ ಮಹಿಳಾ ಆಯೋಗವು ಸ್ವಯಂಪ್ರೇರಿತ ದೂರು ದಾಖಲಿಸಿಕೊಳ್ಳಬೇಕು ಎಂದು ಅವರು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಆಮ್ ಆದ್ಮಿ ಪಾರ್ಟಿಯ ಮಹಿಳಾ ಮುಖಂಡರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News