ಎಸ್‍ಡಿಪಿಐ ವಿಚಾರದಲ್ಲಿ ಬಿಜೆಪಿ ಇಬ್ಬಗೆ ರಾಜಕಾರಣ: ಸಿದ್ದರಾಮಯ್ಯ

Update: 2022-08-16 14:27 GMT

ಬೆಂಗಳೂರು, ಆ.16: 'ಎಸ್‍ಡಿಪಿಐ, ಪಿಎಫ್‍ಐ, ಸಿಎಫ್‍ಐ ಸೇರಿದಂತೆ ಯಾವುದೆ ಸಂಘಟನೆಗಳು ಸಮಾಜದಲ್ಲಿ ಸಾಮರಸ್ಯ ಹಾಳು ಮಾಡಿ, ಗಲಭೆಗಳಿಗೆ ಕಾರಣವಾಗುತ್ತಿದ್ದರೆ ಅವುಗಳನ್ನು ಸರಕಾರ ನಿಷೇಧ ಮಾಡಲಿ. ಸುಮ್ಮನಿರುವುದೇಕೆ' ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದರು.

ಮಂಗಳವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಸಂಘಟನೆಗಳ ವಿಚಾರದಲ್ಲಿ ಬಿಜೆಪಿಯದ್ದು ಇಬ್ಬಗೆ ರಾಜಕಾರಣ. ಅಧಿಕಾರದಲ್ಲಿದ್ದಾಗ ಸುಮ್ಮನಿರುವುದು, ವಿರೋಧ ಪಕ್ಷದಲ್ಲಿದ್ದಾಗ ನಿಷೇಧಕ್ಕೆ ಆಗ್ರಹಿಸುವುದು ಎಂದು ಟೀಕಿಸಿದರು.

ಕಾಂಗ್ರೆಸ್ ಬಗ್ಗೆ ಸುಳ್ಳು ಹೇಳಿ, ಅದನ್ನು ಸಮರ್ಥನೆ ಮಾಡೋದು. ಆನಂತರ ಕಾಂಗ್ರೆಸ್ ಮೇಲೆ ಗೂಬೆ ಕೂರಿಸುವುದು. ಇದನ್ನು ಬಿಜೆಪಿಯವರು ವ್ಯವಸ್ಥಿತವಾಗಿ ಮಾಡಿಕೊಂಡು ಬಂದಿದ್ದಾರೆ. ಶಿವಮೊಗ್ಗದಲ್ಲಿ ನಡೆದ ಘಟನೆಗೂ ಕಾಂಗ್ರೆಸ್ ಪಕ್ಷಕ್ಕೂ ಏನು ಸಂಬಂಧ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ಮುಸ್ಲಿಮರು ಇರುವ ಪ್ರದೇಶದಲ್ಲಿ ಸಾವರ್ಕರ್ ಭಾವಚಿತ್ರವನ್ನು ಹಾಕಿದ್ದಾರೆ. ಹಾಕಲಿ, ನಮ್ಮದೇನು ತಕರಾರಿಲ್ಲ. ಸಾವರ್ಕರ್ ಚಿತ್ರವನ್ನು ಹಾಕುವವರು ಟಿಪ್ಪು ಸುಲ್ತಾನ್ ಭಾವಚಿತ್ರಕ್ಕೆ ಯಾಕೆ ವಿರೋಧ ಮಾಡುತ್ತಾರೆ. ಮೊದಲು ಕಿತಾಪತಿ ಮಾಡೋದು ಇವರೇ, ಆನಂತರ ಕಾಂಗ್ರೆಸ್ ಮೇಲೆ ಆರೋಪ ಮಾಡುವವರು ಇವರೇ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಮಂಗಳೂರಿನಲ್ಲಿ ಹತ್ಯೆಯಾದ ಬಿಜೆಪಿ ಕಾರ್ಯಕರ್ತ ಪ್ರವೀಣ್ ಮನೆಗೆ ಹೋಗಿ ಪರಿಹಾರ ನೀಡುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಅದೇ ಜಿಲ್ಲೆಯಲ್ಲಿ ಹತ್ಯೆಯಾಗಿದ್ದ ಮಸೂದ್ ಮನೆಗೆ ಹೋಗುವುದಿಲ್ಲ, ಅವರಿಗೆ ಪರಿಹಾರವನ್ನು ನೀಡುವುದಿಲ್ಲ. ಸರಕಾರದಿಂದ ನೀಡುವ ಪರಿಹಾರ ಜನರ ತೆರಿಗೆ ಹಣದಿಂದಲೆ ಅಲ್ಲವೇ? ಇದರಲ್ಲಿ ಯಾಕೆ ತಾರತಮ್ಯ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ಮಾಜಿ ಸಚಿವ ಈಶ್ವರಪ್ಪಗೆ ಬುದ್ಧಿ ಇಲ್ಲ. ದಿಲ್ಲಿಯ ಕೆಂಪುಕೋಟೆ ಮೇಲೆ ರಾಷ್ಟ್ರಧ್ವಜದ ಜಾಗದಲ್ಲಿ ಭಗವಾಧ್ವಜವನ್ನು ಹಾರಿಸುತ್ತೇವೆ ಎಂದು ಹೇಳಿಕೆ ನೀಡಿದ್ದ ಈತನಿಗೆ, ಈಗ ಏಕಾಏಕಿ ರಾಷ್ಟ್ರಧ್ವಜದ ಮೇಲೆ ಅಭಿಮಾನ ಬಂದಿದೆ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಮಾಧುಸ್ವಾಮಿ ಅವರು ಬೊಮ್ಮಾಯಿ ಸರಕಾರದಲ್ಲಿ ಹಿರಿಯ ಸಚಿವರು. ಈ ಸರಕಾರದಲ್ಲಿ ಆಡಳಿತ ನಡೆಯುತ್ತಿಲ್ಲ. ಸರಕಾರವನ್ನು ತಳ್ಳಿಕೊಂಡು ಹೋಗುತ್ತಿದ್ದೇವೆ ಎಂದು ಹೇಳಿದ್ದಾರೆ. ಬೊಮ್ಮಾಯಿ ಈ ಸತ್ಯ ಮುಚ್ಚಿಹಾಕಲು ಸಚಿವರಾದ ಮುನಿರತ್ನ, ಸೋಮಶೇಖರ್ ಅವರನ್ನು ಮಾಧುಸ್ವಾಮಿ ವಿರುದ್ಧ ಎತ್ತಿಕಟ್ಟಿದ್ದಾರೆ ಎಂದು ಅವರು ಟೀಕಿಸಿದರು.

ಪ್ರವೀಣ್ ಹತ್ಯೆ ಖಂಡಿಸಿ ಅವರ ಪಕ್ಷದವರೇ ಟೀಕೆ ಮಾಡುತ್ತಿದ್ದಾರೆ. ಹೀಗಾಗಿ ಜನ ಚುನಾವಣೆ ಯಾವಾಗ ನಡೆಯಲಿದೆ ಎಂದು ಕಾಯುತ್ತಿದ್ದಾರೆ. ಈ ಸರಕಾರದಲ್ಲಿ ಯಾರಿಗೂ ರಕ್ಷಣೆ ಇಲ್ಲ, ಬಡವರಿಗೆ ನ್ಯಾಯ ಸಿಗುವುದಿಲ್ಲ. ರೈತರಿಗೆ, ಮಹಿಳೆಯರಿಗೆ, ಯುವಕರಿಗೆ ನ್ಯಾಯ ಸಿಗುವುದಿಲ್ಲ. ಹೀಗಾಗಿ ಈ ಸರಕಾರ ಕಿತ್ತು ಹಾಕಲು ಜನಾಭಿಪ್ರಾಯ ರೂಪಿಸಬೇಕು ಎಂಬ ವಿಚಾರವಾಗಿ ನಮ್ಮ ನಾಯಕರೆಲ್ಲರೂ ಚರ್ಚೆ ಮಾಡಿದ್ದೇವೆ ಎಂದು ಸಿದ್ದರಾಮಯ್ಯ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News