ದೇಶದ ಅತ್ಯಂತ ಅಸಮರ್ಥ ಮುಖ್ಯಮಂತ್ರಿ ಬೊಮ್ಮಾಯಿ: ಸುರ್ಜೇವಾಲಾ ವಾಗ್ದಾಳಿ

Update: 2022-08-16 15:09 GMT

ಬೆಂಗಳೂರು, ಆ.16: ಬಸವರಾಜ ಬೊಮ್ಮಾಯಿ ನೇತೃತ್ವದ ಬಿಎಪಿ ಸರಕಾರ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ಇಡೀ ದೇಶದಲ್ಲಿ ಅತ್ಯಂತ ಅಸಮರ್ಥ ಮುಖ್ಯಮಂತ್ರಿ ಎಂದರೆ ಅದು ಬಸವರಾಜ ಬೊಮ್ಮಾಯಿ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ವಾಗ್ದಾಳಿ ನಡೆಸಿದರು.

ಮಂಗಳವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ರಾಜ್ಯದ ಹಿರಿಯ ಕಾಂಗ್ರೆಸ್ ನಾಯಕರೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷರು, ಉಭಯ ಸದನಗಳ ವಿಪಕ್ಷಗಳ ನಾಯಕರು, ಪ್ರಚಾರ ಸಮಿತಿ ಅಧ್ಯಕ್ಷರು, ಕಾರ್ಯಾಧ್ಯಕ್ಷರೊಂದಿಗೆ ರಾಜ್ಯದಲ್ಲಿನ ರಾಜಕೀಯ ವಿದ್ಯಮಾನಗಳ ವಿಚಾರವಾಗಿ ಚರ್ಚೆ ನಡೆಸಿದ್ದೇವೆ ಎಂದರು.

ಬೊಮ್ಮಾಯಿ 40 ಪರ್ಸೆಂಟ್ ಕಮಿಷನ್ ಸರಕಾರದ ಮುಖಂಡರಾಗಿದ್ದಾರೆ. ಕಿಡಿಗೇಡಿಗಳು, ಸಮಾಜಘಾತುಕ ಸಂಘಟನೆಗಳು ಜನರನ್ನು ಹಾಡಹಗಲೇ ಹತ್ಯೆ ಮಾಡುತ್ತಿದ್ದಾರೆ. ಬಿಜೆಪಿಯ ಕಾರ್ಯಕರ್ತರೇ ಹತ್ಯೆಯಾಗುತ್ತಿದ್ದರೂ ಈ ಸರಕಾರ ಮೈಮರೆತು ಕೂತಿದೆ. ಆ ಮೂಲಕ ಜನರಿಗೆ ದ್ರೋಹ ಬಗೆಯುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಸಮಾಜವನ್ನು ಒಡೆಯಲು ಬಿಜೆಪಿ ಪ್ರಾಯೋಜಿತ ಷಡ್ಯಂತ್ರಗಳ ವಿರುದ್ಧ ಹೋರಾಡಲು ನಮ್ಮ ಪಕ್ಷದ ಎಲ್ಲ ನಾಯಕರು ಪಣ ತೊಟ್ಟಿದ್ದೇವೆ. ಜನರ ಸಹಕಾರದೊಂದಿಗೆ ಈ ಸರಕಾರವನ್ನು ನಾವು ಕಿತ್ತೊಗೆಯುವವರೆಗೂ ವಿರಮಿಸುವುದಿಲ್ಲ. ಮಂಗಳೂರಿನಲ್ಲಿನ ಪ್ರಕರಣ, ಶಿವಮೊಗ್ಗದ ಬೆಳವಣಿಗೆಗಳು ಮುಖ್ಯಮಂತ್ರಿಗಳ ವೈಫಲ್ಯ ಹಾಗೂ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದಕ್ಕೆ ಸಾಕ್ಷಿ. ಇದಕ್ಕೆಲ್ಲ ಕಾರಣವಾಗಿರುವ ಸಮಾಜಘಾತುಕ ಶಕ್ತಿಗಳಿಗೆ ಬಿಜೆಪಿಯೇ ಪ್ರೋತ್ಸಾಹ ನೀಡುತ್ತಿದೆ ಎಂದು ಅವರು ಆರೋಪಿಸಿದರು.

ಸರಕಾರದ ಕಾನೂನು ಸಚಿವರೇ ಈ ಸರಕಾರ ನಡೆಯುತ್ತಿಲ್ಲ ಎಂದು ಹೇಳಿದ್ದಾರೆ. ಒಬ್ಬ ಸಚಿವರು ಮತ್ತೊಬ್ಬ ಸಚಿವರ ವಿರುದ್ಧ ಟೀಕಾ ಪ್ರಹಾರ ನಡೆಸುತ್ತಿದ್ದಾರೆ. ಸಚಿವರೆ ಸಂಪುಟ ಸದಸ್ಯರ ವಿರುದ್ಧ ಆರೋಪ ಮಾಡುತ್ತಿರುವಾಗ ಈ ಸರಕಾರದ ಸ್ಥಿತಿ ಏನು? ಇಂತಹ ಸರಕಾರ ಯಾವ ಪುರುಷಾರ್ಥಕ್ಕೆ ಮುಂದುವರಿಯಬೇಕು? ಎಂದು ಸುರ್ಜೇವಾಲ ಪ್ರಶ್ನಿಸಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಮ್ ಅಹ್ಮದ್ ಮಾತನಾಡಿ, ‘ಯಾರೊಬ್ಬರೂ ಪಾಕಿಸ್ತಾನದ ಪರ ಘೋಷಣೆ ಕೂಗಬಾರದು. ಕೆಲವು ಕಿಡಿಗೇಡಿಗಳು ಈ ರೀತಿ ಮಾಡಿರಬಹುದು. ದೇಶದ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ನಾವು ಎಲ್ಲ ಹಳ್ಳಿ ಹಳ್ಳಿಗಳಲ್ಲಿ ಆಚರಿಸಿದ್ದೇವೆ. ಬಿಜೆಪಿ ಸರಕಾರ ಇದರಲ್ಲೂ ರಾಜಕಾರಣ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸರಕಾರ ಪಂಡಿತ್ ಜವಾಹರ್ ಲಾಲ್ ನೆಹರೂ ಅವರ ಭಾವಚಿತ್ರ ಕೈಬಿಟ್ಟು ಸಣ್ಣತನದ ರಾಜಕಾರಣ ಮಾಡಿದೆ. ಈ ಸರಕಾರಕ್ಕೆ ನಾಚಿಕೆಯಾಗಬೇಕಿತ್ತು. ಸ್ವಾತಂತ್ರ್ಯ ಹೋರಾಟಗಾರ, ದೇಶಕ್ಕಾಗಿ 9 ವರ್ಷಗಳ ಕಾಲ ಸೆರೆವಾಸ ಅನುಭವಿಸಿದ್ದ ನೆಹರೂ ಅವರ ವಿಚಾರದಲ್ಲಿ ರಾಜಕಾರಣ ಮಾಡಬಾರದು ಎಂದು ಅವರು ಹೇಳಿದರು.
 
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News