ಸಾವರ್ಕರ್ ಬ್ಯಾನರ್ ಅಳವಡಿಕೆಯ ಹಿಂದೆ ಗಲಭೆ ಸೃಷ್ಟಿಸುವ ಪಿತೂರಿ: ಪಾಪ್ಯುಲರ್ ಫ್ರಂಟ್ ಆರೋಪ

Update: 2022-08-16 18:30 GMT

ಬೆಂಗಳೂರು ಆ.16: 'ಬಿಜೆಪಿ ಮುಂಬರುವ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ರಾಜ್ಯದಲ್ಲಿ ಕೋಮು ಧ್ರುವೀಕರಣ ನಡೆಸಲು ಪ್ರಯತ್ನಿಸುತ್ತಿದೆ. ಇದರ ಮುಂದುವರೆದ ಭಾಗವಾಗಿ, ಇತಿಹಾಸದ ಕಳಂಕಿತ ವ್ಯಕ್ತಿ ಸಾವರ್ಕರನ್ನು ಬಿಜೆಪಿ ವೈಭವೀಕರಿಸುತ್ತಾ ಬರುತ್ತಿದೆ. ಬ್ರಿಟಿಷರಿಗೆ ಕ್ಷಮಾಪಣಾ ಪತ್ರ ಬರೆದು ಸ್ವಾತಂತ್ರ್ಯ ಹೋರಾಟಕ್ಕೆ ದ್ರೋಹ ಬಗೆದ ಸಾವರ್ಕರ್ ಬ್ಯಾನರ್ ಅಳವಡಿಕೆಯ ಹಿಂದೆ ಗಲಭೆ ಸೃಷ್ಟಿಸುವ ಹುನ್ನಾರವಿದೆ' ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಆರೋಪಿಸಿದೆ. 

ಮಂಗಳವಾರ ಈ ಕುರಿತು ಪ್ರಕಟನೆ ಹೊರಡಿಸಿರುವ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಅಯ್ಯೂಬ್ ಅಗ್ನಾಡಿ, 'ಈ ಬಾರಿ ಸರಕಾರ ನೀಡಿದ ಸ್ವಾತಂತ್ರ್ಯ ಹೋರಾಟಗಾರರ ಜಾಹೀರಾತಿನಲ್ಲಿ ನೆಹರೂರಂತಹ ಮೇಧಾವಿ ನಾಯಕರನ್ನು ಕೈಬಿಟ್ಟು ಸಾವರ್ಕರ್‍ಗೆ ಪ್ರಮುಖ ಸ್ಥಾನ ನೀಡಲಾಯಿತು. ಇದಕ್ಕೆ ರಾಜ್ಯದ ಜನ ಸೇರಿ ಸಾಹಿತಿಗಳಿಂದ ವಿರೋಧ ವ್ಯಕ್ತವಾಗಿತ್ತು. ನಂತರ ಸಂಘಪರಿವಾರದ ಶಕ್ತಿಗಳು ರಾಜ್ಯದ ಹಲವು ಕಡೆಗಳಲ್ಲಿ ಸಾವರ್ಕರ್ ಬ್ಯಾನರ್ ಅಳವಡಿಸಿದಾಗ ತೀವ್ರ ವಿರೋಧದ ಕಾರಣ ಪೊಲೀಸರೇ ಅದನ್ನು ತೆರವುಗೊಳಿಸಬೇಕಾಯಿತು. ಅಂತೆಯೇ ಶಿವಮೊಗ್ಗದಲ್ಲೂ ಸಾವರ್ಕರ್ ಬ್ಯಾನರ್ ಅಳವಡಿಸಿ ಗಲಭೆ ಹರಡುವ ಪ್ರಯತ್ನ ನಡೆದಿದೆ. ಈ ಘಟನೆಯಲ್ಲಿ ಪಾಪ್ಯುಲರ್ ಫ್ರಂಟ್ ಅನ್ನು ಅನಗತ್ಯವಾಗಿ ಬಿಜೆಪಿ ನಾಯಕರು ಎಳೆದು ತರುವ ಪ್ರಯತ್ನ ನಡೆಸುತ್ತಿದ್ದಾರೆ' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೊದಲೇ ಕೋಮು ಸೂಕ್ಷ್ಮ ಪ್ರದೇಶವಾಗಿರುವ ಶಿವಮೊಗ್ಗದಲ್ಲಿ ಬಿಜೆಪಿ-ಸಂಘಪರಿವಾರದ ನಾಯಕರು ಅಶಾಂತಿ ಹರಡಲು ಪ್ರಚೋದನೆ ನೀಡುತ್ತಾ ಬಂದಿದ್ದಾರೆ. ಹರ್ಷ ಕೊಲೆ ಘಟನೆಯ ವೇಳೆಯೂ ಈಶ್ವರಪ್ಪ ಸೇರಿ ಬಿಜೆಪಿ ನಾಯಕರು ಕೋಮು ದ್ವೇಷ ಭಾಷಣ ಮಾಡಿ ಸಮುದಾಯಗಳ ನಡುವೆ ಬೆಂಕಿ ಹಚ್ಚಿದ್ದರು. ಇದೀಗ ಮತ್ತೇ ಸಾವರ್ಕರ್ ಬ್ಯಾನರ್ ನೆಪದಲ್ಲಿ ಅಶಾಂತಿ ಹರಡುವ ವ್ಯವಸ್ಥಿತ ಪ್ರಯತ್ನ ನಡೆದಿದೆ. ಅದರೊಂದಿಗೆ ಘಟನೆಯ ಹೊಣೆ ಪಾಪ್ಯುಲರ್ ಫ್ರಂಟ್ ಮೇಲೆ ಹೊರಿಸುತ್ತಿರುವ ಬಿಜೆಪಿಯ ವರ್ತನೆ ಖಂಡನೀಯವಾಗಿದೆ ಎಂದು ಹೇಳಿದ್ದಾರೆ. 

ಈ ಹಿಂದೆ ಶಿವಮೊಗ್ಗದಲ್ಲಿ ಮಂಜುನಾಥ್ ಮತ್ತು ರೌಡಿಶೀಟರ್ ಹರ್ಷನ ಕೊಲೆ ನಡೆದಾಗ ಬಿಜೆಪಿ, ಅದನ್ನು ಪಾಪ್ಯುಲರ್ ಫ್ರಂಟ್ ತಲೆಗೆ ಕಟ್ಟಿತ್ತು. ಮಂಜುನಾಥ್ ಕೌಟುಂಬಿಕ ಕಲಹದಿಂದ ಹತ್ಯೆಯಾಗಿದ್ದರೆ, ಹರ್ಷನದ್ದು ಗ್ಯಾಂಗ್ ವಾರ್ ಕೊಲೆ ಎಂದು ನಂತರ ಪೊಲೀಸರ ತನಿಖೆಯಲ್ಲಿ ಬಯಲಾಗಿದೆ ಎಂದು ತಿಳಿಸಿದ್ದಾರೆ.

ಬಿಜೆಪಿ ಸರಕಾರವು ಘಟನೆಯ ನೈಜ ಆರೋಪಿಗಳ ರಕ್ಷಣೆಯಲ್ಲಿ ತೊಡಗಿದ್ದು, ತನಿಖೆಯ ಹಾದಿ ತಪ್ಪಿಸುವ ಪ್ರಯತ್ನ ನಡೆಸುತ್ತಿರುವುದು ಕಂಡು ಬರುತ್ತಿದೆ. ರಾಜ್ಯದ ಹಲವು ಕಡೆಗಳಲ್ಲಿ ಅನಗತ್ಯ ಬ್ಯಾನರ್ ಅಳವಡಿಸಿ ಗಲಭೆಗೆ ಪ್ರಚೋದನೆ ನೀಡಿದ ಬಿಜೆಪಿ-ಸಂಘಪರಿವಾರದ ನಾಯಕರು ಮತ್ತು ಕಾರ್ಯಕರ್ತರ ಮೇಲೆ ಪೊಲೀಸ್ ಇಲಾಖೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ನಾಡಿಗೆ ಬೆಂಕಿ ಹಚ್ಚುವ ಬೆದರಿಕೆಯೊಡ್ಡಿ ಅಶಾಂತಿ ಹರಡುವ ಕಿಡಿಗೇಡಿಗಳನ್ನು ಮಟ್ಟ ಹಾಕಬೇಕು. ಪೊಲೀಸರು ರಾಜಕೀಯ ಒತ್ತಡಕ್ಕೆ ಒಳಗಾಗಿ ಮುಸ್ಲಿಮ್ ಸಮುದಾಯದ ವಿರುದ್ಧ ಪೂರ್ವಗ್ರಹಪೀಡಿತರಾಗಿ ವರ್ತಿಸದೇ, ನಿಷ್ಪಕ್ಷಪಾತ ತನಿಖೆ ನಡೆಸಬೇಕು. ರಾಜ್ಯ ಸರಕಾರವೂ ಗೊಂದಲದ ವಾತಾವರಣ ಸೃಷ್ಟಿಸದೇ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ತನ್ನ ಹೊಣೆಗಾರಿಕೆಯನ್ನು ನಿಭಾಯಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News