'ಸಿದ್ದರಾಮಯ್ಯ ಸಿಎಂ ಆಗಬೇಕು' ಎಂಬ ಹೇಳಿಕೆಗೆ ಸ್ಪಷ್ಟನೆ ನೀಡಿದ ಸಚಿವ ಶ್ರೀರಾಮುಲು

Update: 2022-08-17 11:45 GMT

ಬೆಂಗಳೂರು, ಆ. 17: ‘ನಾನು ಯಾವುದೇ ಕಾರಣಕ್ಕೂ ಬಿಜೆಪಿ ಬಿಟ್ಟು ಕಾಂಗ್ರೆಸ್ ಪಕ್ಷಕ್ಕೆ ಹೋಗುವ ಪ್ರಶ್ನೆಯೇ ಇಲ್ಲ. ಬಿಜೆಪಿಯ ಶಿಸ್ತಿನ ಸಿಪಾಯಿ ನಾನು, ನನ್ನ ಕೊನೆಯ ಉಸಿರು ಇರುವವರೆಗೂ ಬಿಜೆಪಿಯಲ್ಲಿರುತ್ತೇನೆ' ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ಅವರು ಸ್ಪಷ್ಟನೆ ನೀಡಿದ್ದಾರೆ.

ಬುಧವಾರ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರನ್ನು ಭೇಟಿ ಮಾಡಿದ ಬಳಿಕ ವಿಪಕ್ಷ ನಾಯಕ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಬೇಕೆಂಬ ತನ್ನ ಹೇಳಿಕೆಗೆ ಸ್ಪಷ್ಟಣೆ ನೀಡಿದ ಅವರು, ‘ತನ್ನ ಹೇಳಿಕೆ ಕುರಿತು ರಾಜ್ಯಾಧ್ಯಕ್ಷರಿಗೆ ವಿವರಣೆ ನೀಡಿದ್ದೇನೆ. ಹಿಂದುಳಿದ ಜಾತಿಗಳನ್ನು ಒಗ್ಗೂಡಿಸುವ ಕೆಲಸ ಪ್ರಧಾನಿ ಮೋದಿ ಮಾಡುತ್ತಿದ್ದಾರೆ' ಎಂದರು.

‘ಇತ್ತೀಚಿನ ಬೆಳವಣಿಗೆ ನೋಡಿದರೆ ಕಾಂಗ್ರೆಸ್‍ನಲ್ಲಿ ಸಿದ್ದರಾಮಯ್ಯಗೆ ಕಿರಿ ಕಿರಿ ಆಗುತ್ತಿದೆ. ಹೀಗಾಗಿ ಇದನ್ನು ನೋಡಿದರೆ ಅವರು ಮುಂದೊಂದು ದಿನ ಬಿಜೆಪಿಗೆ ಬರುತ್ತಾರೆಂಬ ಮನೋಭಾವದಿಂದ ನಾನು ಹೇಳಿಕೆ ನೀಡಿದೆ. ಡಿ.ಕೆ. ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರ ನಡುವಿನ ಜಗಳ ನೋಡಿ ನಮ್ಮ ಪಕ್ಷಕ್ಕೆ ಇಲ್ಲಿಗೆ ಬರಬಹುದು' ಎಂದು ಹೇಳಿದ್ದೇನೆ ಅಷ್ಟೇ' ಎಂದು ವಿವರಿಸಿದರು.

‘ನಾನು ಬಾದಾಮಿ ವಿಧಾನಸಭಾ ಕ್ಷೇತ್ರಕ್ಕೆ ಹೋಗಲು ವಿಳಂಬವಾದ ಕಾರಣಕ್ಕೆ ಸಿದ್ದರಾಮಯ್ಯ ಆ ಕ್ಷೇತ್ರದಲ್ಲಿ ಅಲ್ಪ ಮತದ ಅಂತರದಲ್ಲಿ ಜಯ ಗಳಿಸಿದರು. ನಾನು ಯಾವುದೇ ಕಾರಣಕ್ಕೂ ಕಾಂಗ್ರೆಸ್ ಪಕ್ಷಕ್ಕೆ ಹೋಗುವುದಿಲ್ಲ. ನಾನು ಬಿಜೆಪಿಯ ಶಿಸ್ತಿನ ಸಿಪಾಯಿ. ಯಾವುದೇ ಸಂದರ್ಭದಲ್ಲಿ ಯಾರಿಗೋ ಹೆದರಿಕೊಂಡು ರಾಜಕೀಯ ಮಾಡುವ ಜಾಯಮಾನ ನನ್ನದಲ್ಲ' ಎಂದು ಶ್ರೀರಾಮುಲು ವಿವರಿಸಿದರು.

ಇದನ್ನೂ ಓದಿಬಿಜೆಪಿ ಸಂಸದೀಯ ಮಂಡಳಿ : ಗಡ್ಕರಿಗೆ ಶಾಕ್, ಬಿಎಸ್‌ವೈ ಗೆ ಸ್ಥಾನ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News