ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆರೋಪ: ಪರಿಷತ್ ಸದಸ್ಯ ಮುನಿರಾಜುಗೌಡ ವಿರುದ್ಧದ ಪ್ರಕರಣ ರದ್ದುಪಡಿಸಿದ ಹೈಕೋರ್ಟ್

Update: 2022-08-17 14:37 GMT

ಬೆಂಗಳೂರು, ಆ.17: ಲೋಕಸಭೆ ಮತ್ತು ವಿಧಾನಸಭೆ ಚುನಾವಣೆ ವೇಳೆ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆರೋಪಕ್ಕೆ ಸಂಬಂಧಿಸಿದಂತೆ ವಿಧಾನ ಪರಿಷತ್ ಸದಸ್ಯ ತುಳಸಿ ಮುನಿರಾಜುಗೌಡ ವಿರುದ್ಧ ದಾಖಲಾಗಿದ್ದ ಎರಡು ಪ್ರಕರಣಗಳನ್ನು ಹೈಕೋರ್ಟ್ (High Court of Karnataka) ರದ್ದುಗೊಳಿಸಿದೆ. 

ಹಾರೋಹಳ್ಳಿ ಹಾಗೂ ಯಶವಂತಪುರ ಠಾಣೆಗಳಲ್ಲಿ ದಾಖಲಾಗಿದ್ದ ಕೇಸ್‍ಗಳ ರದ್ದು ಕೋರಿ ಮುನಿರಾಜುಗೌಡ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠ, ಈ ಆದೇಶ ನೀಡಿದೆ.  

2014ರ ಲೋಕಸಭೆ ಚುನಾವಣೆ ವೇಳೆ ಮುನಿರಾಜುಗೌಡ ಅವರು ಕನಕಪುರ ತಾಲೂಕು ಮರಳವಾಡಿ ಹೋಬಳಿ ಗ್ರಾಮದಲ್ಲಿ ಸಾರ್ವಜನಿಕರಿಗೆ ಕರಪತ್ರ ವಿತರಣೆ ಮಾಡುತ್ತಿದ್ದರು. ಈ ಕರಪತ್ರಗಳಲ್ಲಿ ಹಳೆಯ ದಿನಾಂಕ ನಮೂದು ಮಾಡಲಾಗಿತ್ತು ಎಂದು ಕರಪತ್ರ ವಶಪಡಿಸಿಕೊಂಡಿದ್ದ ಚುನಾವಣಾಧಿಕಾರಿ ಚುನಾವಣೆ ನಿಯಮ ಉಲ್ಲಂಘನೆ ಆರೋಪ ಹೊರಿಸಿ ಪ್ರಕರಣ ದಾಖಲಿಸಿದ್ದರು.

2018ರಲ್ಲಿ ನಡೆದಿದ್ದ ವಿಧಾನಸಭಾ ಚುನಾವಣೆಯಲ್ಲಿ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಪಿ.ಎಂ.ಮುನಿರಾಜುಗೌಡ ಪರ ಕೆಲ ಯುವಕರು ನೀತಿ ಸಂಹಿತೆ ಉಲ್ಲಂಘಿಸಿ ಪ್ರಚಾರ ಮಾಡುತ್ತಿದ್ದಾರೆ ಎಂದು ಆರೋಪಿಸಿ ಯಶವಂತಪುರ ಪೆÇಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣವನ್ನೂ ನ್ಯಾಯಮೂರ್ತಿ ಎಸ್.ಸುನಿಲ್ ದತ್ ಯಾದವ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಇದೇ ವೇಳೆ ರದ್ದುಗೊಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News