×
Ad

ರಾಯಚೂರು ತೆಲಂಗಾಣಕ್ಕೆ ಸೇರಲಿ ಎಂಬ ಚಂದ್ರಶೇಖರ ರಾವ್ ಹೇಳಿಕೆ ಆಕ್ಷೇಪಿಸದ ಬೊಮ್ಮಾಯಿ: ಪ್ರಿಯಾಂಕ್ ಖರ್ಗೆ ಆಕ್ರೋಶ

Update: 2022-08-18 13:02 IST

ಬೆಂಗಳೂರು: 'ರಾಯಚೂರನ್ನು ತೆಲಂಗಾಣದದಲ್ಲಿ ವಿಲೀನ ಮಾಡಲು ಅಲ್ಲಿನ ಜನ ಬಯಸಿದ್ದಾರೆ ಎಂದು ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್‌ (K.Chandrashekar Rao) ಹೇಳಿಕೆ ನೀಡಿ 24 ಗಂಟೆಗಳಾದರೂ, ರಾಜ್ಯದ ಮುಖ್ಯಮಂತ್ರಿಯಾಗಲಿ, ಸರ್ಕಾರದ ಪ್ರತಿನಿಧಿಗಳಾಗಲಿ ಆಕ್ಷೇಪಿಸಿಲ್ಲ' ಎಂದು ಮಾಜಿ ಸಚಿವ,  ಕಾಂಗ್ರೆಸ್‌ ಶಾಸಕ ಪ್ರಿಯಾಂಕ್‌ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ಅವರು,  ''ಈ ವಿಚಾರದಲ್ಲಿ ಮಲತಾಯಿ ಧೋರಣೆ ಏಕೆ? ಬೆಳಗಾವಿ ಗಡಿ ಸಮಸ್ಯೆಯಾಗಿದ್ದರೆ ಇಡೀ ಸಚಿವ ಸಂಪುಟವೇ ರಕ್ಷಣೆಗೆ ಮುಂದಾಗುತ್ತಿತ್ತು, ಬಿಜೆಪಿ ಸರ್ಕಾರ ನಮ್ಮನ್ನು ಕರ್ನಾಟಕದ ಭಾಗವೆಂದು ಪರಿಗಣಿಸುತ್ತದೆಯೇ ಅಥವಾ ಇಲ್ಲವೇ? ತೆಲಂಗಾಣದಲ್ಲಿ ವಿಲೀನ ಮಾಡಲು ಸೂಚಿಸಿದ ನಿಮ್ಮ ಶಾಸಕರ ವಿರುದ್ಧ ಏನು ಕ್ರಮ ಕೈಗೊಂಡಿದ್ದೀರಿ?'' ಎಂದು ಪ್ರಶ್ನೆ ಮಾಡಿದ್ದಾರೆ. 

ಕಾಂಗ್ರೆಸ್ ಆಕ್ರೋಶ 

'ಅಭಿವೃದ್ದಿ, ಮೂಲಸೌಕರ್ಯಗಳನ್ನು ಮುಂದಿಟ್ಟು ಹಿಂದೆ ಕರ್ನಾಟಕದ ಬಂಡವಾಳ ಹೂಡಿಕೆದಾರರನ್ನು ತೆಲಂಗಾಣಕ್ಕೆ ಆಹ್ವಾನಿಸಿದ್ದರು, ಈಗ ರಾಯಚೂರನ್ನೇ ಆಹ್ವಾನಿಸುತ್ತಿದ್ದಾರೆ. ಇದು ನಿಮ್ಮ ಅಭಿವೃದ್ಧಿಶೂನ್ಯ ಆಡಳಿತಕ್ಕೆ ಮಾಡುತ್ತಿರುವ 'ಅಣಕ' ಅಲ್ಲವೇ, ಅಸಮರ್ಥ ಬಿಜೆಪಿಯ ಆಡಳಿತದಲ್ಲಿ ಕರ್ನಾಟಕ ಎಲ್ಲವನ್ನೂ ಕಳೆದುಕೊಳ್ಳಬೇಕೆ?' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಕಾಂಗ್ರೆಸ್ ಟ್ವೀಟ್ ಮೂಲಕ ಪ್ರಶ್ನೆ ಮಾಡಿದೆ. 

'ಬಿಜೆಪಿ ಶಾಸಕ ಶಿವರಾಜ್ ಪಾಟೀಲ್ ಅವರ ಹೇಳಿಕೆಯ ಆಧಾರದಲ್ಲಿ ತೆಲಂಗಾಣದ ಸಿಎಂ 'ರಾಯಚೂರಿನ ಜನ ತೆಲಂಗಾಣಕ್ಕೆ ಸೇರಲು ಬಯಸುತ್ತಿದ್ದಾರೆ' ಎಂದಿದ್ದಾರೆ.  ಇಂತಹ ಗಂಭೀರ ಹೇಳಿಕೆಗೆ ನಿಮ್ಮ ಉತ್ತರವಿಲ್ಲವೇಕೆ? ನಿಮ್ಮ ಈ 'ಮೌನ' ಸಮ್ಮತಿಯ ಲಕ್ಷಣವೇ? ಕಲ್ಯಾಣ ಕರ್ನಾಟಕದೆಡೆಗಿನ ನಿರ್ಲಕ್ಷ್ಯವೇ? ಅಭಿವೃದ್ಧಿ ವಂಚಿಸಿದ ಪಾಪಪ್ರಜ್ಞೆಯೇ?' ಎಂದು ಬೊಮ್ಮಾಯಿ ಅವರನ್ನು ಕಾಂಗ್ರೆಸ್ ಪ್ರಶ್ನೆ ಮಾಡಿದೆ. 

'ಟಿಆರ್‌ಎಸ್(TRS) ಸರ್ಕಾರದ ಕಲ್ಯಾಣ ಯೋಜನೆಗಳಿಂದ ಆಕರ್ಷಿತರಾಗಿರುವ ಕರ್ನಾಟಕದ ರಾಯಚೂರು ಜಿಲ್ಲೆಯ ಜನರು ತಮ್ಮ ಪ್ರದೇಶವನ್ನು ತೆಲಂಗಾಣಕ್ಕೆ ವಿಲೀನಗೊಳಿಸಬೇಕೆಂದು ಒತ್ತಾಯಿಸುತ್ತಿದ್ದಾರೆ' ಎಂದು ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್(K Chandrashekhar Rao) ಹೇಳಿಕೆ ನೀಡಿದ್ದರು.  

ಇದನ್ನೂ ಓದಿ:  ತೆಲಂಗಾಣದೊಂದಿಗೆ ಸೇರಲು ರಾಯಚೂರಿನ ಜನರು ಬಯಸುತ್ತಿದ್ದಾರೆ: ಸಿಎಂ ಚಂದ್ರಶೇಖರ ರಾವ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News