ತೆಲಂಗಾಣ ಸಿಎಂ ನಾಳೆ ಅರ್ಧ ರಾಜ್ಯವನ್ನೇ ಕೇಳುತ್ತಾರೆ, ಆಗಲೂ ಇದೇ ಮೌನವೇ?: ಸಿಎಂ ವಿರುದ್ಧ ದಿನೇಶ್ ಗುಂಡೂರಾವ್ ಆಕ್ರೋಶ

Update: 2022-08-18 12:15 GMT

ಬೆಂಗಳೂರು, ಆ. 18: ‘ಕನ್ನಡಿಗರು ಮತ್ತು ತೆಲುಗು ಭಾಷಿಕರ ನಡುವೆ ಅಣ್ಣ ತಮ್ಮಂದಿರ ಸೌಹಾರ್ದತೆಯಿದೆ. ರಾಯಚೂರು ವಿಚಾರವಾಗಿ ತೆಲಂಗಾಣ ಮುಖ್ಯಮಂತ್ರಿ ಹೇಳಿಕೆ ಈ ಸಂಬಂಧಕ್ಕೆ ಹುಳಿ ಹಿಂಡುವ ಯತ್ನ. ಈಗಾಗಲೇ ಅಖಂಡ ಆಂಧ್ರ ಇಬ್ಭಾಗ ಮಾಡಿರುವ ಕೆಸಿಆರ್ ಈಗ ಕರ್ನಾಟಕ ಒಡೆಯುವ ಯತ್ನ ಮಾಡುತ್ತಿದ್ದಾರೆ. ಆದರೆ, ಕೆ.ಚಂದ್ರಶೇಖರ್ ರಾವ್ ಯತ್ನ ಕರ್ನಾಟಕದಲ್ಲಿ ನಡೆಯುವುದಿಲ್ಲ. ಇದು ರಾಜ್ಯದ ಅಸ್ಮಿತೆಯ ಪ್ರಶ್ನೆ' ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗುರುವಾರ ಸರಣಿ ಟ್ವೀಟ್ ಮಾಡಿರುವ ಅವರು, ‘ರಾಯಚೂರು ತೆಲಂಗಾಣಕ್ಕೆ ಸೇರಬೇಕು ಎಂಬರ್ಥದಲ್ಲಿ ಅಲ್ಲಿನ ಸಿಎಂ ಕೆಸಿಆರ್ ಹೇಳಿದ್ದಾರೆ. ಇದು ಉದ್ಧಟತನದ ಹೇಳಿಕೆ. ಅವರು ಕೇಳಿದ ತಕ್ಷಣ ಕೊಡಲು ರಾಯಚೂರು ಅವರ ಪಿತ್ರಾರ್ಜಿತ ಆಸ್ತಿಯಲ್ಲ. ಅದು ಕರ್ನಾಟಕದ ಅವಿಭಾಜ್ಯ ಅಂಗ. ತೆಲಂಗಾಣ ಸಿಎಂ ಆಡಳಿತದಲ್ಲಿ ತೆಲಂಗಾಣ ಹಾಳು ಕೊಂಪೆಯಾಗಿದೆ. ಮೊದಲು ತೆಲಂಗಾಣ ಉದ್ಧಾರ ಮಾಡಲಿ. ಆಮೇಲೆ ನೆರೆ ರಾಜ್ಯದ ಮಾತು' ಎಂದು ಸಲಹೆ ನೀಡಿದ್ದಾರೆ.

‘ನೆರೆ ರಾಜ್ಯದ ಮುಖ್ಯಮಂತ್ರಿಯೊಬ್ಬರು ರಾಯಚೂರು ವಿಚಾರವಾಗಿ ತಗಾದೆ ತೆಗೆದಿದ್ದಾರೆ. ಇಷ್ಟಾದರೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರಕಾರ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ನೆಲ-ಜಲ, ನಾಡು-ನುಡಿಯ ವಿಚಾರದಲ್ಲಿ ಈ ಸರಕಾರಕ್ಕೆ ಬದ್ಧತೆ, ಕಾಳಜಿ ಇಲ್ಲವೆ? ಇಂದು ರಾಯಚೂರು ಕೇಳಿದ ತೆಲಂಗಾಣ ಮುಖ್ಯಮಂತ್ರಿ, ನಾಳೆ ಅರ್ಧ ರಾಜ್ಯವನ್ನೇ ಕೇಳುತ್ತಾರೆ. ಆಗಲೂ ಇದೇ ಮೌನವೇ?' ಎಂದು ದಿನೇಶ್ ಗುಂಡೂರಾವ್ ವಾಗ್ದಾಳಿ ನಡೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News