ಹಾಸನ | ಪ್ರೀತಿ ನಿರಾಕರಿಸಿದ್ದಕ್ಕೆ ಯುವತಿ ಮೇಲೆ ಕಾರು ಹರಿಸಿ ಹತ್ಯೆ ಪ್ರಕರಣ: ಆರೋಪಿಯ ಬಂಧನ

Update: 2022-08-18 13:55 GMT

ಹಾಸನ, ಆ.17: ಪ್ರೀತಿಗೆ ವಿರೋಧವ್ಯಕ್ತಪಡಿಸಿದ ಕಾರಣಕ್ಕೆ ಯುವತಿಯೊಬ್ಬಳ ಮೇಳೆ ಕಾರು ಹರಿಸಿ ಹತ್ಯೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ತಿಳಿಸಿದ್ದಾರೆ. 

ಹಾಸನ ನಗರದ ಬೊಮ್ಮನಾಯಕನಹಳ್ಳಿ ನಿವಾಸಿ ಜಿ.ಆರ್. ಭರತ್ ಬಂಧಿತ ಆರೋಪಿಯಾಗಿದ್ದು, ನಗರದ ಬಡಾವಣೆ ಠಾಣೆಯ ಪೊಲೀಸರರು ಬಂಧಿಸಿದ್ದಾರೆ.

ನಗರದ ಸಮೀಪ ಬೂವನಹಳ್ಳಿ ಕ್ರಾಸ್ ಬಳಿ ಇರುವ ಭಾರತಿ ಅಸೋಸಿಯೇಟ್ ಮುಂಭಾಗದ ಬಿ.ಎಂ. ರಸ್ತೆಯ ಬಳಿ ಯುವತಿ ಶರಣ್ಯ ಎಂಬುವವರು ಕೆಲಸಕ್ಕೆಂದು ನಡೆದುಕೊಂಡು ಹೋಗುತ್ತಿದ್ದಾಗ ಆರೋಪಿ ಭರತ್ ಪ್ರೀತಿಸುವಂತೆ ಯುವತಿಗೆ ಪ್ರತಿದಿನ ಹಿಂಸೆ ನೀಡುತ್ತಿದ್ದ. 

ಬಳಿಕ ಪ್ರೀತಿಗೆ ವಿರೋಧ ವ್ಯಕ್ತಪಡಿಸಿದ ಶರಣ್ಯಳನ್ನು ಕೊಲೆ ಮಾಡಲು ಹೊಂಚು  ಹಾಕಿದ್ದ ಆರೋಪಿ ಭರತ್, ಆಗಸ್ಟ್ ೩ ರಂದು ಆಕೆ ನಡೆದುಕೊಂಡು ಹೋಗುವ ದಾರಿಯಲ್ಲಿ ಕಾದು ಕುಳಿತು ಕಾರು ಹರಿಸಿ ಪರಾರಿಯಾಗಿದ್ದ ಎಂದು ತೀಳಿಸಿದರು. ಪ್ರೀತಿಸದೆ ವಿರೋಧ ಮಾಡಿದ್ದರಿಂದ ಕೊಲೆ ಮಾಡುವ ಉದ್ದೇಶದಿಂದಲೇ ಭರತ್ ಮೈಸೂರಿನಿಂದ ಮಾರುತಿ ಸುಜಕಿ ಕಾರನ್ನು ಬಾಡಿಗೆ ಪಡೆದುಕೊಂಡು ಬಂದಿದ್ದ ಎಂದು ತಿಳಿಸಿದರು. 

ತೀವ್ರ ಗಾಯಗೊಂಡಿದ್ದ ಶರಣ್ಯಳನ್ನು ನಗರದ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆಂದು ಸೇರಿಸಿದರೂ ಚಿಕಿತ್ಸೆ ಫಲಿಸದೇ ಒಂದು ದಿನಗಳ ನಂತರ ಮೃತಪಟ್ಟಿದ್ದರು. ಈಕೆಯ ಸಹೋದರ  ನೀಡಿದ ದೂರಿನ ಮೇರೆಗೆ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆ ಕೈಗೊಳ್ಳಲಾಗಿತ್ತು.

ಸದ್ಯ ಆರೋಪಿಯನ್ನು  ಸಕಲೇಶಪುರ ಬಸ್ ನಿಲ್ದಾಣದ ಬಳಿ ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಸತ್ಯಾಂಶ ಹೊರಬಂದಿದೆ ಎಂದು ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News