ಶಿವಮೊಗ್ಗ | ಬಂಜಾರರ ಧಾರ್ಮಿಕ ಕ್ಷೇತ್ರದಲ್ಲಿ RSS ಶಿಬಿರ: ಮುಖಂಡರ ತೀವ್ರ ಖಂಡನೆ

Update: 2022-08-18 14:44 GMT

ಶಿವಮೊಗ್ಗ, ಆ.18: ನ್ಯಾಮತಿ ತಾಲೂಕಿನ ಸೂರಗುಂಡನ ಕೊಪ್ಪದಲ್ಲಿರುವ ಅಖಿಲ ಭಾರತೀಯ ಬಂಜಾರರ ಆರಾಧ್ಯ ಧೈವ ಹಾಗೂ ಕುಲಗುರು ಸಂತ ಶ್ರೇಷ್ಠ ಶ್ರೀ ಸೇವಾಲಾಲ್ ಮಹಾರಾಜರ ಜನ್ಮಸ್ಥಳವಾದ ಧಾರ್ಮಿಕ ಕ್ಷೇತ್ರದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ(RSS)ದವರು ಸೆ.11ರಿಂದ 19ರವರೆಗೆ ಉದ್ಯೋಗಿ ಸ್ವಯಂ ಸೇವಕರ ಪ್ರಾಥಮಿಕ ಶಿಕ್ಷಾ ವರ್ಗ-2022ನ್ನು ಹಮ್ಮಿಕೊಂಡಿರುವುದಕ್ಕೆ ಬಂಜಾರ ಸಮಾಜದ ಮುಖಂಡರು ತೀವ್ರವಾಗಿ ಖಂಡಿಸಿದ್ದಾರೆ.

ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಬಂಜಾರ ವಿದ್ಯಾರ್ಥಿ ಸಂಘದ ರಾಜ್ಯಾಧ್ಯಕ್ಷ ಡಿ.ಆರ್.ಗಿರೀಶ್,  ಮಹಾಮಠದ ಸಮಿತಿಯ ಒಪ್ಪಿಗೆ ಪಡೆಯದೆ ಆರೆಸ್ಸೆಸ್ ಏಕಪಕ್ಷೀಯವಾಗಿ ಈ ಸ್ಥಳವನ್ನು ಆಯ್ಕೆ ಮಾಡಿಕೊಂಡು ಕರಪತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗುತ್ತಿದೆ. ಯಾವ ಕಾರಣಕ್ಕೂ ಇಲ್ಲಿ ಸಿದ್ದಾಂತ ಆಧಾರಿತ ಕಾರ್ಯಕ್ರಮಗಳಿಗೆ ಅವಕಾಶವಿಲ್ಲ. ಶಿಬಿರ ನಡೆಯಲು ಯಾರು ಅನುಮತಿ ನೀಡಿಲ್ಲ ಎಂದು  ತಿಳಿಸಿದರು.

ಶಿಸ್ತಿನ ಸಂಘವಾಗಿರುವ ಆರೆಸ್ಸೆಸ್ ಯಾವುದೇ ಕಾರ್ಯಕ್ರಮ ನಡೆಸಬೇಕಾದರೂ ಅನುಮತಿ ಪಡೆಯಬೇಕಾಗುತ್ತದೆ. ಆದರೆ ಅನುಮತಿ ಪಡೆಯದೆ ಶಿಬಿರ ನಡೆಸುತ್ತಿರುವುದಕ್ಕೆ ನಮ್ಮ ವಿರೋಧವಿದೆ. ಇಲ್ಲಿ ಯೋಗ, ಕೌಶಲ್ಯ ತರಬೇತಿ ಶಿಬಿರ ಸೇರಿದಂತೆ ಇತರೆ ಕಾರ್ಯಕ್ರಮಗಳನ್ನು ಬೇರೆ ಸಮಾಜದವರು ಮಾಡಲು ಅವಕಾಶವಿದೆ. ಆದರೆ ಆರ್‌ಎಸ್‌ಎಸ್ ಒಂದು ಪಕ್ಷಕ್ಕೆ ಬೆಂಬಲಿಸುತ್ತಿರುವುದರಿಂದ ಶಿಬಿರ ನಡೆಸಲು ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ ಎಂದರು.

ಆರೆಸ್ಸೆಸ್ ನ ನ ಏಕಪಕ್ಷೀಯ ಧೋರಣೆಯನ್ನು ಖಂಡಿಸುತ್ತೇವೆ. ನಮ್ಮ ಸಮಾಜಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಶೋಷಣೆಗೆ ಒಳಗಾಗುತ್ತಿದ್ದಾರೆ ಮತ್ತು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಗುಳ್ಳೆ ಹೋಗುತ್ತಿದ್ದರೂ ಆರೆಸ್ಸೆಸ್ ಇದರ ಬಗ್ಗೆ ಧ್ವನಿ ಎತ್ತುತ್ತಿಲ್ಲ. ಇಂತಹ ಸಂಘಟನೆಗೆ ಶಿಬಿರ ನಡೆಸಲು ಅವಕಾಶ ನೀಡುತ್ತಿರುವುದು ಏಕೆ ಎಂಬ ಯಕ್ಷ ಪ್ರಶ್ನೆಯಾಗಿದೆ ಎಂದರು.

ಮುಂದಿನ ವಿಧಾನಸಭೆಯ ಚುನಾವಣೆ ಗಮನದಲ್ಲಿಟ್ಟುಕೊಂಡು ಬಂಜಾರನನ್ನು ಸೆಳೆಯಲು ಕೆಲವರು ಈ ರೀತಿಯ ಕೆಲಸ ಆರಂಭಿಸಿದ್ದಾರೆ. ಇದಕ್ಕೆ ನಮ್ಮ ವಿರೋಧವಿದೆ ಎಂದರು.

ಧಾರ್ಮಿಕ ಕ್ಷೇತ್ರದಲ್ಲಿ ರಾಜಕೀಯ ಮಾಡಬಾರದು ಒಂದು ವೇಳೆ ಈ ಕೇತ್ರದಲ್ಲಿ ಶಿಬಿರ ನಡೆದರೆ ಬಾಯಘಡ್ ಬಚಾವೋ ಅಂದೋಲನವನ್ನು ಹಮ್ಮಿಕೊಳ್ಳಲಾಗುವುದು ಹಾಗೂ ಈ ಧಾರ್ಮಿಕ ಕ್ಷೇತ್ರದಲ್ಲಿ ಆ.21ರಂದು ನಡೆಯುವ ಸಮಾಜದ ಮುಖಂಡರ ಸಮಾವೇಶದಲ್ಲಿ ಉಗ್ರ ಹೋರಾಟದ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

ಇದನ್ನೂ ಓದಿ: ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸೆದ ಪ್ರಕರಣ: ಇಂತಹ ಘಟನೆಗಳು ನಡೆಯಬಾರದು ಎಂದ ಬಿಎಸ್ ವೈ

ಪತ್ರಿಕಾಗೋಷ್ಠಿಯಲ್ಲಿ ಸಮಾಜದ ಮುಖಂಡರಾದ ಡಾ. ಇಂದ್ರಾನಾಯ್ಕ್, ಶಶಿಕುಮಾರ್, ಹರೀಶ್‌ನಾಯ್ಕ್, ಕೃಷ್ಣನಾಯ್ಕ್, ನಾನ್ಯಾನಾಯ್ಕ್, ಹನುಮಂತನಾಯ್ಕ್, ಗಿರೀಶ್‌ನಾಯ್ಕ್ ಉಪಸ್ಥಿತರಿದ್ದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News