ಸೆಪ್ಟೆಂಬರ್ ನಲ್ಲಿ ವಿಧಾನಮಂಡಲದ ಅಧಿವೇಶನ: ಸ್ಪೀಕರ್ ಕಾಗೇರಿ

Update: 2022-08-18 15:27 GMT

ಬೆಂಗಳೂರು, ಆ.18: ರಾಜ್ಯ ವಿಧಾನ ಮಂಡಲದ ಅಧಿವೇಶನವು ಕಳೆದ ಮಾರ್ಚ್‍ನಲ್ಲಿ ನಡೆದಿತ್ತು. ಸಂವಿಧಾನಾತ್ಮಕವಾಗಿ ಆರು ತಿಂಗಳೊಳಗೆ ಮತ್ತೊಮ್ಮೆ ಅಧಿವೇಶನ ನಡೆಯಬೇಕಾಗಿದೆ. ಆದಕಾರಣ, ಸೆಪ್ಟೆಂಬರ್ ತಿಂಗಳಲ್ಲಿ ನಿಶ್ಚಿತವಾಗಿಯೂ ಅಧಿವೇಶನ ನಡೆಯಲಿದೆ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು.

ವಿಧಾನಸಭೆಯ ಸಭಾಧ್ಯಕ್ಷರಾಗಿ ತಾವು ಮೂರು ವರ್ಷಗಳಲ್ಲಿ ಮಾಡಿರುವ ಸಾಧನೆಗಳ ಪುಸ್ತಕವನ್ನು ಗುರುವಾರ ವಿಧಾನಸೌಧದಲ್ಲಿ ಬಿಡುಗಡೆ ಮಾಡಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಧಿವೇಶನದ ದಿನಾಂಕ ಮತ್ತು ಸ್ಥಳವನ್ನು ಮುಖ್ಯಮಂತ್ರಿ ನೇತೃತ್ವದಲ್ಲಿ ನಡೆಯುವ ಸಚಿವ ಸಂಪುಟ ಸಭೆ ತೀರ್ಮಾನಿಸಲಿದೆ ಎಂದರು.

ಸದಸ್ಯರ ಹಾಜರಾತಿ: ವಿಧಾನಸಭೆಯ ಅಧಿವೇಶನದ ಸಂದರ್ಭದಲ್ಲಿ ಸದಸ್ಯರ ಹಾಜರಾತಿ ಕುರಿತಂತೆ ಸಂಬಂಧಿತ ಸದಸ್ಯರಲ್ಲಿ ಅರಿವು ಮತ್ತು ಜಾಗೃತಿ ಇರಬೇಕು. ಅಲ್ಲದೆ, ಶಾಸಕಾಂಗ ಪಕ್ಷದ ನಾಯಕರು ಹಾಗೂ ಶಾಸಕರು ಆಯ್ಕೆಯಾಗಿರುವ ಪಕ್ಷದ ಜವಾಬ್ದಾರಿ ಕೂಡಾ ಇದೆ. ಅಧಿವೇಶನದ ಸಂದರ್ಭದಲ್ಲಿ ಕ್ಷೇತ್ರದಲ್ಲಿನ ಸಭೆ, ಸಮಾರಂಭಗಳಲ್ಲಿ ಪಾಲ್ಗೊಳ್ಳಬಾರದು. ಒಂದು ವೇಳೆ ಅಧಿವೇಶನ ಸಂದರ್ಭದಲ್ಲಿ ಯಾರಾದರೂ ಶಾಸಕರು ಕ್ಷೇತ್ರದಲ್ಲಿನ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದನ್ನು ಕಂಡಾಗ ಜನರು ಕೂಡ ಅವರನ್ನು ಪ್ರಶ್ನಿಸುವ ವಾತಾವರಣ ನಿರ್ಮಾಣವಾಗಬೇಕು ಎಂದು ಕಾಗೇರಿ ಹೇಳಿದರು.

ಕಾಮನ್‍ವೆಲ್ತ್ ಶೃಂಗ ಸಭೆಗೆ ರವಾನೆ: ಕೆನಡಾದ ಹೆಲಿಫ್ಯಾಕ್ಸ್‍ನಲ್ಲಿ ಆ.22 ರಿಂದ 26ರವರೆಗೆ ನಡೆಯಲಿರುವ 65ನೇ ಕಾಮನ್‍ವೆಲ್ತ್ ಸಂಸದೀಯ ಸಂಘದ ಶೃಂಗ ಸಭೆಯಲ್ಲಿ ವಿಧಾನ ಸಭೆಯ ಸಭಾಧ್ಯಕ್ಷರಾಗಿ ತಾವು ಮತ್ತು ರಾಜ್ಯ ವಿಧಾನ ಪರಿಷತ್ತಿನ ಪ್ರತಿನಿಧಿಯಾಗಿ ಬಸವರಾಜ ಹೊರಟ್ಟಿ ಪಾಲ್ಗೊಳ್ಳಲಿದ್ದು, ನಾಳೆ ಸಂಜೆ ವಿದೇಶ ಪ್ರಯಾಣಕ್ಕೆ ತೆರಳುತ್ತಿರುವುದಾಗಿ ಅವರು ತಿಳಿಸಿದರು.

68 ದೇಶಗಳ ಪ್ರತಿನಿಧಿಗಳು ಪಾಲ್ಗೊಳ್ಳುವ ಈ ಶೃಂಗದಲ್ಲಿ ‘ಸುಸ್ಥಿರ ಅಭಿವೃದ್ಧಿ ಸಾಧಿಸುವಲ್ಲಿ ಸಂಸತ್ತಿನ ಪಾತ್ರ ಹಾಗೂ ಹವಾಮಾನ ತುರ್ತು ಪರಿಸ್ಥಿತಿ, ತುರ್ತು ಸ್ಥಿತಿ, ಸಂಸತ್ತು ಸರಕಾರಗಳನ್ನು ತಮ್ಮ ಹಿಡಿತದಲ್ಲಿ ಇಟ್ಟುಕೊಳ್ಳುತ್ತವೆಯೇ’ ವಿಷಯ ಕುರಿತು ತಾವು ಮಹಾಪ್ರಬಂಧವನ್ನು ಮಂಡಿಸುವುದಾಗಿ ಮಾಹಿತಿ ನೀಡಿದ ಸ್ಪೀಕರ್, ಈ ಸಮ್ಮೇಳನದಲ್ಲಿ ಪಾಲ್ಗೊಂಡ ನಂತರ ಯುನೈಟೆಡ್ ಕಿಂಗ್‍ಡಮ್ ಮತ್ತು ಫ್ರಾನ್ಸ್‍ಗೆ ಅಧ್ಯಯನ ಪ್ರವಾಸಕ್ಕೆ ತೆರಳಿ, ಸೆ.4ರಂದು ಬೆಂಗಳೂರಿಗೆ ಹಿಂದಿರುಗುವುದಾಗಿ ಹೇಳಿದರು. 

ಸಾಧನೆಗಳು: ಸಂಸತ್ತಿನ ಮಾದರಿಯಲ್ಲಿ ನಮ್ಮ ರಾಜ್ಯದಲ್ಲಿಯೂ ‘ಅತ್ಯುತ್ತಮ ಶಾಸಕ’ ಪ್ರಶಸ್ತಿಯನ್ನು ನೀಡಲು ಮಾರ್ಗಸೂಚಿಗಳನ್ನು ನಿಗದಿಪಡಿಸಿ, ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಕಳೆದ ಸಾಲಿನ ಸೆ.24ರಂದು ವಿಧಾನಸಭೆಯ ಸಭಾಂಗಣದಲ್ಲಿ ಉಭಯ ಸದನಗಳ ಸದಸ್ಯರನ್ನು ಉದ್ದೇಶಿಸಿ ‘ಪ್ರಜಾಪ್ರಭುತ್ವದಲ್ಲಿ ಸಂಸದೀಯ ಮೌಲ್ಯಗಳ ರಕ್ಷಣೆ’ ಕುರಿತು ಭಾಷಣ ಮಾಡಿದ ಸಂದರ್ಭದಲ್ಲಿ ಬಿ.ಎಸ್.ಯಡಿಯೂರಪ್ಪ ಅವರಿಗೆ ‘ಅತ್ಯುತ್ತಮ ಶಾಸಕ’ ಪ್ರಶಸ್ತಿ ನೀಡಿ ಗೌರವಿಸಲಾಯಿತು ಎಂದು ಅವರು ಹೇಳಿದರು.

81ನೆ ಅಖಿಲ ಭಾರತ ಪೀಠಾಸೀನಾಧಿಕಾರಿಗಳ ವರ್ಚುಯಲ್ ಸಮ್ಮೇಳನದಲ್ಲಿ ಲೋಕಸಭೆಯ ಸ್ಪೀಕರ್ ಅವರೊಂದಿಗೆ ಭಾಗವಹಿಸಿ, ‘ನೈಜ್ಯ ಅರ್ಥದಲ್ಲಿ ಪರಿಣಾಮಕಾರಿ ಪ್ರಜಾಪ್ರಭುತ್ವಕ್ಕಾಗಿ ಶಾಸಕಾಂಗದ ಪಾತ್ರ’ ವಿಷಯದ ಕುರಿತು ತನ್ನ ನಿಲುವನ್ನು ಮಂಡಿಸಿದೆ. ಸಂವಿಧಾನ ದಿನಾಚರಣೆ, ಸಂಸದೀಯ ಮೌಲ್ಯಗಳ ಕುಸಿತವನ್ನು ತಡೆಗಟ್ಟುವ ನಿಟ್ಟಿನಲ್ಲಿ ಆತ್ಮಾವಲೋಕನ ಸಭೆ, ರಾಷ್ಟ್ರೀಯ ಹಾಗೂ ಅಂತರ್‍ರಾಷ್ಟ್ರೀಯ ಸಮ್ಮೇಳನಗಳಲ್ಲಿ ರಾಜ್ಯವನ್ನು ಪ್ರತಿನಿಧಿಸಿದ್ದೇನೆ ಎಂದು ಅವರು ತಿಳಿಸಿದರು.

ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಶತಮಾನೋತ್ಸವ ಆಚರಣೆಯಲ್ಲಿ ಭಾಗಿ, 8ನೆ ಕಾಮನ್‍ವೆಲ್ತ್ ಸಂಸದೀಯ ಸಂಘ, ಭಾರತ ವಲಯದ ಸಮ್ಮೇಳನದಲ್ಲಿ ಭಾಗಿಯಾಗಿದ್ದೇನೆ. ಅತ್ಯುತ್ತಮ ವಿಧಾನಪರಿಷತ್ತು, ವಿಧಾನಸಭೆಗೆ ಪ್ರಶಸ್ತಿ ನೀಡಲು ಮಾನದಂಡಗಳನ್ನು ರೂಪಿಸಲು ರಚಿಸಿರುವ ಪೀಠಾಸೀನಾಧಿಕಾರಿಗಳ ಸಮಿತಿಗೆ ನನ್ನನ್ನು ಲೋಕಸಭೆ ಸ್ಪೀಕರ್ ಅವರು ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದಾರೆ ಎಂದು ಕಾಗೇರಿ ಹೇಳಿದರು.

ವಿಧಾನಪರಿಷತ್ತಿನ ನೂತನ ಸದಸ್ಯರಿಗಾಗಿ ಆಯೋಜಿಸಿದ್ದ ತರಬೇತಿ ಶಿಬಿರದಲ್ಲಿ ‘ಸಂವಿಧಾನದ ಅಡಿಯಲ್ಲಿ ಜನರ ನಿರೀಕ್ಷೆ ಹಾಗೂ ಶಾಸಕರ ಜವಾಬ್ದಾರಿ’ ವಿಷಯದ ಕುರಿತು ಉಪನ್ಯಾಸ ನೀಡಿದ್ದೇನೆ. ಚುನಾವಣೆ ವ್ಯವಸ್ಥೆಯಲ್ಲಿ ಸುಧಾರಣೆಗಳ ಅಗತ್ಯತೆ ಕುರಿತು ಸದನದಲ್ಲಿ ಚರ್ಚಿಸಲು ಅವಕಾಶ ಕಲ್ಪಿಸಲಾಗಿತ್ತು. ಈ ಸಂಬಂಧ ನಡೆದ ಜಿಲ್ಲಾವಾರು ಸಂವಾದಗಳಲ್ಲಿಯೂ ಭಾಗಿಯಾಗಿದ್ದೇನೆ ಎಂದು ಅವರು ಹೇಳಿದರು.

ವಿಧಾನಸಭೆಯಲ್ಲಿ ‘ನಮ್ಮ ಸಂವಿಧಾನ ನಮ್ಮ ಹೆಮ್ಮೆ’ ವಿಷಯದ ಕುರಿತು ವಿಶೇಷ ಚರ್ಚೆ ನಡೆಸಲಾಗಿದೆ. ಅಧಿಕಾರಿ, ನೌಕರರ ಕಾರ್ಯದಕ್ಷತೆ ಹೆಚ್ಚಿಸಲು ತರಬೇತಿ, ಕಳೆದ ಒಂದು ವರ್ಷದ ಅವಧಿಯಲ್ಲಿ ಒಟ್ಟು ಮೂರು ಅಧಿವೇಶನಗಳಲ್ಲಿ 40 ವಿಧೇಯಕಗಳನ್ನು ಮಂಡಿಸಲಾಗಿದ್ದು, ಮಂಡನೆಯಾಗಿ ಬಾಕಿಯಿದ್ದ 2 ವಿಧೇಯಕಗಳು ಸೇರಿದಂತೆ ಒಟ್ಟು 42 ವಿಧೇಯಕಗಳನ್ನು ಅಂಗೀಕರಿಸಲಾಗಿದೆ. ಪಿಆರ್ ಎಸ್ ಲೆಜಿಸ್ಲೇಟಿವ್ ಸಮೀಕ್ಷೆಯಲ್ಲಿ 2021ರಲ್ಲಿ 48 ಮಸೂದೆಗಳನ್ನು ಅಂಗೀಕರಿಸುವ ಮೂಲಕ ಕರ್ನಾಟಕವು ಸತತ ಎರಡನೆ ಬಾರಿ, ದೇಶದಲ್ಲಿ ಮೊದಲ ಸ್ಥಾನವನ್ನು ಪಡೆದುಕೊಂಡಿದೆ ಎಂದು ಅವರು ಮಾಹಿತಿ ನೀಡಿದರು. 

2021-22ರ ಒಂದು ವರ್ಷದ ಅವಧಿಯಲ್ಲಿ ನಡೆದ ಮೂರು ಅಧಿವೇಶನಗಳಲ್ಲಿ ಒಟ್ಟು 9222 ಪ್ರಶ್ನೆಗಳನ್ನು ಅಂಗೀಕರಿಸಲಾಗಿದೆ. 705 ಚುಕ್ಕೆ ಗುರುತಿನ ಪ್ರಶ್ನೆಗಳ ಪೈಕಿ 681 ಪ್ರಶ್ನೆಗಳಿಗೆ ಸದನದಲ್ಲಿ ಉತ್ತರಿಸಲಾಗಿದ್ದು, ಚುಕ್ಕೆ ಗುರುತಿಲ್ಲದ 8517 ಪ್ರಶ್ನೆಗಳ ಪೈಕಿ 7560 ಉತ್ತರಗಳನ್ನು ಸ್ವೀಕರಿಸಿ ಸದಸ್ಯರಿಗೆ ಒದಗಿಸಲಾಗಿದೆ. ವಿಧಾನಮಂಡಲದ ಸಮಿತಿಗಳು ಯಶಸ್ವಿ ಅಧ್ಯಯನ ಪ್ರವಾಸ ಕೈಗೊಂಡಿವೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News