ಇತಿಹಾಸ ತಿರುಚುವ ಹುನ್ನಾರವನ್ನು ಬಿಜೆಪಿ ಮುಂದುವರಿಸಿದೆ: ಸಿದ್ದರಾಮಯ್ಯ ಆಕ್ರೋಶ

Update: 2022-08-18 15:37 GMT

ಬೆಂಗಳೂರು, ಆ. 18: ‘ಸಾವರ್ಕರ್ ಬ್ರಿಟಿಷರಿಗೆ ನಾನು ನಿಮ್ಮ ಸೇವಕ ಎಂದಿದ್ದರು. ಹಾಗಿದ್ದರೆ ಅವರು ದೇಶಪ್ರೇಮಿ ಸ್ವಾತಂತ್ರ್ಯ ಹೋರಾಟಗಾರರಾಗುವುದು ಹೇಗೆ? ಸ್ವಾತಂತ್ರ್ಯ ಹೋರಾಟಗಾರರನ್ನು, ‘ಹೋರಾಟಗಾರರಲ್ಲ ಎಂದು, ಗುಲಾಮಗಿರಿ ಮಾಡಿದವರನ್ನು ಸ್ವಾತಂತ್ರ್ಯ ಹೋರಾಟಗಾರರು' ಎಂದು ಇತಿಹಾಸವನ್ನು ತಿರುಚುವ ಹುನ್ನಾರವನ್ನು ಬಿಜೆಪಿ ಮುಂದುವರೆಸಿದೆ' ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ಗುರುವಾರ ಈ ಕುರಿತು ಪ್ರಕಟನೆ ನೀಡಿರುವ ಸಿದ್ದರಾಮಯ್ಯ, ‘ತಮ್ಮ ರಾಜಕೀಯ ಅಜೆಂಡಾಗಳಿಗೆ ಯಾರೂ ಗತಿಯಿಲ್ಲ ಎಂಬುದನ್ನು ಬಿಜೆಪಿ ಪದೇ ಪದೇ ತೋರ್ಪಡಿಸುತ್ತಿದೆ. ಬಿಜೆಪಿಯವರು ಮೊದಲು ಭಗತ್‍ಸಿಂಗ್‍ರನ್ನು ಆಶ್ರಯಿಸಿದರು. ಆದರೆ, ನಿಜವಾದ ಸ್ವಾತಂತ್ರ್ಯವೀರ, ಮಹಾನ್ ದೇಶಪ್ರೇಮಿಯಾಗಿದ್ದ, ಚಿಂತನೆಗಳಲ್ಲಿ ಹುಟ್ಟಾ ಎಡಪಂಥೀಯರಾಗಿದ್ದ, ಸಮಾಜವಾದಿಯಾಗಿದ್ದ ಮತ್ತು ‘ನಾನೇಕೆ ನಾಸ್ತಿಕ’ ಎಂದು ಪುಸ್ತಕ ಬರೆದ ಭಗತ್‍ಸಿಂಗ್ ತಮ್ಮ ಪುರೋಹಿತಶಾಹಿ, ಸನಾತನವಾದಿ ಮತ್ತು ತಾರತಮ್ಯವಾದಿ ಕೊಳಕು ಮನಸ್ಥಿತಿಗೆ ಸಂಪೂರ್ಣ ವಿರುದ್ಧವಾದ ನಿಲುವು ಹೊಂದಿದ್ದರು. ಮಾನವತಾವಾದಿಯೂ, ಸಮಾನತಾವಾದಿಯೂ ಆಗಿದ್ದ ಭಗತ್ ಸಿಂಗ್ ಚಿಂತನೆಗಳು ತಮಗೆ ಡಿಕ್ಕಿ ಹೊಡೆದು ಪುಡಿ ಮಾಡುತ್ತಿವೆ ಎಂದ ಕೂಡಲೇ ಅವರನ್ನು ನಿರ್ಲಕ್ಷಿಸಲು ಪ್ರಾರಂಭಿಸಿದರು' ಎಂದು ತಿರುಗೇಟು ನೀಡಿದ್ದಾರೆ.

‘ಕೆಲ ಕಾಲ ಸ್ವಾಮಿ ವಿವೇಕಾನಂದರನ್ನು ಗುತ್ತಿಗೆ ತೆಗೆದುಕೊಂಡವರಂತೆ ಓಡಾಡಿದರು. ಆದರೆ, ವಿವೇಕಾನಂದರು ಈ ದೇಶದ ಎಲ್ಲ ಶಾಪಗಳಿಗೆ ಸ್ಥಗಿತತೆಯಲ್ಲಿ, ಅಮಾನವೀಯತೆಯಲ್ಲಿ ಕೊಳೆಯುತ್ತಿರುವ ಮನುವಾದಿ ಪುರೋಹಿತಶಾಹಿಗಳೇ ಕಾರಣ. ಹಾಗಾಗಿ ಅವರನ್ನು ಕಡಲುಗಳಾಚೆಗೆ ಎಸೆದರೆ ಮಾತ್ರ ಇಲ್ಲಿ ನೆಮ್ಮದಿ ಸಾಧ್ಯ ಎಂದಿದ್ದರು, ಹಾಗಾಗಿ ನಿಧಾನಕ್ಕೆ ಬಿಜೆಪಿಯವರು ವಿವೇಕಾನಂದರನ್ನೂ ಬಿಟ್ಟುಕೊಟ್ಟರು. ಒಂದಷ್ಟು ಕಾಲ ಸುಭಾಶ್‍ಚಂದ್ರ ಬೋಸರನ್ನು ಆತುಕೊಂಡು ಬಳಿಕ ಅವರನ್ನೂ ಬಿಟ್ಟರು. ದೇಶ ಭಕ್ತರೆಂದು ಹೇಳಿಕೊಳ್ಳುವ ಸಾವರ್ಕರ್ ‘ಬ್ರಿಟಿಷರೆ ನಾವು ನಿಮ್ಮ ಜೊತೆ ಇದ್ದೇವೆ' ಎಂದು ಹೇಳಿ ಬ್ರಿಟಿಷರ ಯುದ್ಧಕ್ಕೆ ಬೇಕಾದ ಸೈನ್ಯದ ನೇಮಕಾತಿಗೆ ಬೆಂಬಲವಾಗಿ ನಿಂತರು. ಇದೆಲ್ಲ ಬಿಜೆಪಿಯವರಿಗೆ ಯಾರಾದರೂ ಹೇಳಿಕೊಡಬೇಕಾಗಿದೆ' ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ಸಾವರ್ಕರ್ ಅವರನ್ನು ಸ್ವಾತಂತ್ರ್ಯ ಹೋರಾಟಗಾರ, ದೇಶಪ್ರೇಮಿ ಎಂದು ಹೇಗೆ ಕರೆಯಬೇಕು? ಏಕೆ ಕರೆಯಬೇಕು? ಎಂದು ಬಿಜೆಪಿಯವರು ಹೇಳಬೇಕು. ಈ ಕುರಿತು ಮುಕ್ತವಾದ ಬಹಿರಂಗ ಚರ್ಚೆ ನಡೆಯಲಿ. ಆರೆಸೆಸ್ಸಿಗೆ ಸಂಪೂರ್ಣ ತಲೆಬಾಗಿದ್ದೇನೆಂದು ಹೇಳುತ್ತಿರುವ ಬೊಮ್ಮಾಯಿಯವರೆ ಈ ಚರ್ಚೆಯ ನೇತೃತ್ವ ವಹಿಸಲಿ. ಸನಾತನವಾದಿ, ಪುರೋಹಿತಶಾಹಿ ಮೌಲ್ಯಗಳು ಹಾಗೂ ದ್ವೇಷಯುತವಾದ ವಿಚಾರಗಳನ್ನು ಬಿಟ್ಟರೆ ಸಾವರ್ಕರ್ ಅವರಿಂದ ದೇಶದ ಜನರು ಏನು ಕಲಿಯಲು ಸಾಧ್ಯ?' ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

‘ಕೊಲೆ ಕೇಸೊಂದರಲ್ಲಿ ಜೈಲಿಗೆ ಹೋದ ಸಾವರ್ಕರ್ ಅವರು ಜೈಲಿಗೆ ಹೋದ ಮೇಲೆ ಏಕೆ ಒಂದಾದ ಮೇಲೊಂದು ಶರಣಾಗತಿಯ 6 ಪತ್ರಗಳನ್ನು ಬ್ರಿಟಿಷರಿಗೆ ಬರೆದರು? ‘ನಾನು ನಿಮ್ಮ ವಿನಮ್ರ ಸೇವಕ' ಎಂದು ಏಕೆ ಬರೆದರು? ಸ್ವಾತಂತ್ರ್ಯ ವೀರ ಭಗತ್‍ಸಿಂಗ್ ಅವರು ನನಗೆ ನೇಣು ಹಾಕಬೇಡಿ, ಬೇಕಿದ್ದರೆ ಗುಂಡು ಹೊಡೆದು ವೀರೋಚಿತವಾಗಿ ಎದುರಿಸಿ ಎಂದು ಬ್ರಿಟಿಷರ ಎದುರು ನಿಂತು ಹುತಾತ್ಮರಾಗಿ ಸ್ವಾತಂತ್ರ್ಯ ಪ್ರೇಮಿ ಎನ್ನಿಸಿಕೊಂಡು ಭಾರತದ ಚರಿತ್ರೆಯಲ್ಲಿ ಅಜರಾಮರರಾದ ಭಗತ್‍ಸಿಂಗರೆಲ್ಲಿ, ‘ನಾನು ನಿಮ್ಮ ವಿನಮ್ರ ಸೇವಕ' ಎಂದ ಸಾವರ್ಕರರೆಲ್ಲಿ?' ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

‘ಸಾವರ್ಕರ್ ಅವರು ಬ್ರಿಟಿಷರಲ್ಲಿ ದಮ್ಮಯ್ಯ ಎಂದು ಬೇಡಿಕೊಂಡು ಜೈಲಿನಿಂದ ಬಿಡುಗಡೆಯಾದ ಮೇಲೆ ಮಾಡಿದ್ದೇನು? ತಮ್ಮ ಜೊತೆಯಲ್ಲಿ ಅಂಡಮಾನಿನ ಜೈಲಿನಲ್ಲಿದ್ದ ಕೈದಿಗಳ ಬಿಡುಗಡೆಗೆ ಹೋರಾಟ ಮಾಡಿದರೆ? ಸಾವರ್ಕರರೇಕೆ ಬ್ರಿಟಿಷ್ ಸರಕಾರ ನೀಡುತ್ತಿರುವ ಪಿಂಚಣಿ ಹಣ ಸಾಕಾಗುತ್ತಿಲ್ಲ ಅದನ್ನು ಹೆಚ್ಚಿಸಿ ಎಂದು ದುಂಬಾಲು ಬಿದ್ದರು? ಇಂದಿನ ಬಿಜೆಪಿಯವರು ಒಂದೊ ಮೆದುಳು, ಹೃದಯಗಳನ್ನು ಕಳೆದುಕೊಂಡಿದ್ದಾರೆ ಮತ್ತು ಅಧಿಕಾರ ಲಾಲಸೆಗೆ ಬಲಿಬಿದ್ದು ಈ ನೆಲದ ಸಕಲ ಪರಂಪರೆಗೆ ದ್ರೋಹ ಬಗೆಯುತ್ತಿದ್ದಾರೆ' ಎಂದು ಸಿದ್ದರಾಮಯ್ಯ ದೂರಿದ್ದಾರೆ.

‘ಭಾರತ ವಿಭಜನೆಗೆ ನೆಹರೂ ಕಾರಣ ಎಂಬ ಸುಳ್ಳು ಸಿದ್ಧಾಂತವನ್ನು ಬಿಜೆಪಿಯವರು ತೇಲಿಬಿಡುತ್ತಿದ್ದಾರೆ. ವಾಸ್ತವವೇನೆಂದರೆ ಮೊಟ್ಟ ಮೊದಲಿಗೆ ಎರಡು ರಾಷ್ಟ್ರಗಳ ಸಿದ್ಧಾಂತವನ್ನು ಮಂಡಿಸಿದ್ದೆ ಸಾವರ್ಕರ್. 1937ರಲ್ಲಿ ಗುಜರಾತಿನ ಅಹಮದಾಬಾದಿನಲ್ಲಿ ನಡೆದ ಹಿಂದೂ ಮಹಾಸಭಾದ ಕಾರ್ಯಕ್ರಮದಲ್ಲಿ ಮೊದಲ ಬಾರಿ ಈ ಕುರಿತು ಮಾತನಾಡಿದರು. ಸಾವರ್ಕರ್ ಈ ಕುರಿತು ಮಾತನಾಡಿದ 3 ವರ್ಷಗಳ ನಂತರ ಮಹಮದ್ ಆಲಿ ಜಿನ್ನಾ ಅವರು ದ್ವಿರಾಷ್ಟ್ರ ಸಿದ್ಧಾಂತವನ್ನು ಮಂಡಿಸಿದರು' ಎಂದು ಸಿದ್ದರಾಮಯ್ಯ ವಿವರಣೆ ನೀಡಿದ್ದಾರೆ.

‘ನಾಡಿನ ಯುವಜನರು, ವಿವೇಕವಂತರು ತುಸು ಆಸಕ್ತಿವಹಿಸಿ ಮೂಲ ಇತಿಹಾಸದ ಪುಟಗಳನ್ನು ಅಧ್ಯಯನ ಮಾಡಿ ಸತ್ಯವೇನೆಂದು ತಿಳಿದುಕೊಳ್ಳಬೇಕು. ಇಲ್ಲದಿದ್ದರೆ  ಅಂಬೇಡ್ಕರ್ ಹೇಳಿದಂತೆ ‘ಇತಿಹಾಸವನ್ನು ಅರಿಯದವರು ಇತಿಹಾಸವನ್ನು ನಿರ್ಮಾಣ ಮಾಡಲಾರರು' ಎಂದಾಗುತ್ತದೆ. ವಿವೇಕ ಇರುವವರು ಸರಿಯಾದ ದಿಕ್ಕಿನಲ್ಲಿ ಇತಿಹಾಸವನ್ನು ಅರ್ಥ ಮಾಡಿಕೊಳ್ಳದಿದ್ದರೆ ಸುಳ್ಳುಗಳು ಸತ್ಯವಾಗುತ್ತವೆ ಸತ್ಯಗಳನ್ನು ಸುಳ್ಳುಗಳೆಂದು ಬಿಂಬಿಸುವ ದೆವ್ವಗಳು ಸಮಾಜದಲ್ಲಿ ಕುಣಿಯಲಾರಂಭಿಸುತ್ತವೆ' ಎಂದು ಅವರು ತಿಳಿಸಿದ್ದಾರೆ.

‘ಈ ದೇಶದ ಇತಿಹಾಸವನ್ನು ಓದಿ ಅರ್ಥ ಮಾಡಿಕೊಂಡಿರುವವರು ಯಾರೂ ಸಾವರ್ಕರ್ ಅಂಥವರನ್ನು ದೇಶಭಕ್ತ, ಸ್ವಾತಂತ್ರ್ಯ ಹೋರಾಟಗಾರರೆಂದು ಕರೆಯಲು ಸಾಧ್ಯವಿಲ್ಲ. ಏಕೆಂದರೆ ಅವರು ಬ್ರಿಟಿಷರ ಜೊತೆ ಇದ್ದರು. ಜನರು ಬ್ರಿಟಿಷರ ಗುಂಡು, ಲಾಠಿ, ಫಿರಂಗಿಗಳಿಗೆ ಎದೆಯೊಡ್ಡಿ ನಿಂತಿದ್ದರು. ಯುವಜನರು ಎಚ್ಚೆತ್ತುಕೊಳ್ಳದೆ ಹೋದರೆ ಈ ನೆಲ ಮತ್ತೊಂದು ಸ್ವಾತಂತ್ರ್ಯ ಹೋರಾಟಕ್ಕೆ ಸಿದ್ಧವಾಗಬೇಕಾಗುತ್ತದೆ. ಬಿಜೆಪಿಯವರು ದೇಶದ ಸಮಸ್ತವನ್ನೂ ಕಾರ್ಪೊರೇಟ್ ಧಣಿಗಳಿಗೆ ಕೊಟ್ಟು ರಾಜ್ಯ-ದೇಶದ ಆರ್ಥಿಕತೆಯನ್ನು ಸಂಪೂರ್ಣ ಹಾಳು ಮಾಡುತ್ತಿದ್ದಾರೆ. ಯುವಕರು-ಹಿಂದುಳಿದವರು, ದಲಿತರು, ಮಹಿಳೆಯರು ಸೇರಿ ಎಲ್ಲ ವರ್ಗಗಳು ಸಂಕಷ್ಟಕ್ಕೆ ಸಿಲುಕಿಕೊಂಡಿವೆ. ಇವುಗಳನ್ನೆಲ್ಲ ಮರೆಮಾಚಿ ಬಿಜೆಪಿಯವರು ಜನರನ್ನು ದಾರಿತಪ್ಪಿಸುವ ಕೆಲಸ ಮಾಡುತ್ತಿದ್ದಾರೆ'

-ಸಿದ್ದರಾಮಯ್ಯ ವಿಪಕ್ಷ ನಾಯಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News