ಶಿವಮೊಗ್ಗ ಸರಣಿ ಕೋಮುಗಲಭೆಗೆ ಈಶ್ವರಪ್ಪ ನೇರ ಹೊಣೆ: ಎಸ್‍ಡಿಪಿಐ ಆರೋಪ

Update: 2022-08-18 18:00 GMT

ಬೆಂಗಳೂರು, ಆ.18: ಶಿವಮೊಗ್ಗದಲ್ಲಿ ನಡೆದ ಕೋಮು ಗಲಭೆ ಪ್ರಕರಣ ಸಂಬಂಧ ಬಿಜೆಪಿ ಶಾಸಕ ಕೆ.ಎಸ್.ಈಶ್ವರಪ್ಪ ಅವರೇ ನೇರ ಹೊಣೆಗಾರರಾಗಿದ್ದು, ಈ ಘಟನೆಯನ್ನು ನ್ಯಾಯಾಂಗ ತನಿಖೆಗೆ ವಹಿಸಬೇಕೆಂದು ಎಸ್‍ಡಿಪಿಐ ಪ್ರಧಾನ ಕಾರ್ಯದರ್ಶಿ ಅಫ್ಸರ್ ಕೊಡ್ಲಿಪೇಟೆ ಒತ್ತಾಯಿಸಿದ್ದಾರೆ.

ಗುರುವಾರ ನಗರದ ಹಮೀದ್ ಶಾ ಕಟ್ಟಡದಲ್ಲಿರುವ ಎಸ್‍ಡಿಪಿಐ ಕೇಂದ್ರಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಬ್ಯಾರೀಸ್ ಸಿಟಿ ಸೆಂಟರ್ ನಲ್ಲಿ ಶಿವಮೊಗ್ಗ ನಗರಸಭೆ ವತಿಯಿಂದ ಕಾರ್ಯಕ್ರಮವೊಂದನ್ನು ಆಯೋಜಿಸಲಾಗಿತ್ತು. ಅದರಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಫೋಟೊಗಳನ್ನು ಪ್ರದರ್ಶಿಸಲಾಗಿತ್ತು. ಅದರಲ್ಲಿ ಒಂದೇಒಂದು ಮುಸ್ಲಿಮ್ ಸ್ವಾತಂತ್ರ್ಯ ಹೋರಾಟಗಾರರ ಫೋಟೊ ಇರಲಿಲ್ಲ. ಆದರೆ, ಸಾವರ್ಕರ್ ಫೋಟೊ ಅಳವಡಿಸಲಾಗಿತ್ತು. ಇದಕ್ಕೆ ಕಾಂಗ್ರೆಸ್, ಎಸ್‍ಡಿಪಿಐ ನಾಯಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ನಂತರದಲ್ಲಿ ಸಾವರ್ಕರ್ ಫೋಟೊ ತೆಗೆದು ನೈಜ ಸ್ವಾತಂತ್ರ್ಯ ಹೋರಾಟಗಾರರ ಫೋಟೊ ಅಳವಡಿಸಲಾಯಿತು. ಆ ನಂತರ ಅಲ್ಲಿಗೆ ಬಂದ ಬಿಜೆಪಿ ಕಾರ್ಯಕರ್ತರು ಸಂಘರ್ಷಮಯ ವಾತಾವರಣ ಸೃಷ್ಟಿಸಿ ಗುಲ್ಲೆಬ್ಬಿಸಿದರು ಎಂದು ಆರೋಪಿಸಿದರು.

ಕ್ಷುಲ್ಲಕ ವಿಚಾರ ಇಟ್ಟುಕೊಂಡು ಅಂದು ಸಿಟಿ ಸೆಂಟರ್ ಶಾಪಿಂಗ್ ಮಾಲ್‍ನ ಹೊರಗಡೆ ಮೇಯರ್ ಸ್ಮಿತಾ ಅಣ್ಣಪ್ಪ ಮತ್ತು ಆಕೆಯ ಪತಿಯ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಆ ಪ್ರತಿಭಟನೆಯಲ್ಲಿ ಉದ್ರೇಕಕಾರಿ ಭಾಷಣಗಳನ್ನು ನಡೆಸಲಾಯಿತು ಎಂದು ಅವರು ದೂರಿದರು.

ತದನಂತರ, ಬಜರಂಗದಳ ನಾಯಕರಾದ ನಾಗೇಶ್, ಶಿವು ಮತ್ತು ದೀನ್ ದಯಾಳ್ ನೇತೃತ್ವದ ತಂಡ ಸಿಟಿ ಸೆಂಟರ್ ಮಾಲ್‍ಗೆ ನುಗ್ಗಿ ಅಲ್ಲಿದ್ದ ಮುಹಮ್ಮದ್ ಅಲ್ಫಾಝ್ ಎಂಬ ಅಪ್ರಾಪ್ತ ವಯಸ್ಸಿನ ಹುಡುಗನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದರು ಎಂದು ದೂರಿದ ಅವರು, ಕನ್ನಡ ಪರ ಸಂಘಟನೆಯ ಅಧ್ಯಕ್ಷ ಹಾಗೂ ಹಾಲಿ ನಗರಸಭೆ ಸದಸ್ಯೆಯ ಪತಿ ಆಸಿಫ್ ಶರೀಫ್‍ರನ್ನು ಬಂಧಿಸಿದರು. ಇವರನ್ನು ಬಿಡುಗಡೆಗೊಳಿಸಬೇಕೆಂದು ಒತ್ತಾಯಿಸಿ ಠಾಣೆಯ ಮುಂಭಾಗದಲ್ಲಿ ಜನರು ಜಮಾಮಿಸಿ ಆಗ್ರಹಿಸಿದರು. ಇದಾದ ಬಳಿಕ ಉದ್ದೇಶಪೂರ್ವಕವಾಗಿ ಅವರನ್ನು 14ರಂದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಯಿತು ಎಂದು ಆರೋಪ ಮಾಡಿದರು.

ನಂತರ ಮರುದಿನ ಆ. 15ರಂದು ಅಮೀರ್ ಅಹ್ಮದ್ ಸರ್ಕಲ್‍ನಲ್ಲಿ ಮತ್ತು ಶಿವಮೊಗ್ಗ ಇತರ ಕಡೆಗಳಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ ನಡೆದಿತ್ತು. ಈ ವೇಳೆ ದೀನ್ ದಯಾಳ್, ನಗರಸಭೆ ಸದಸ್ಯ ಚೆನ್ನಬಸಪ್ಪ ಮತ್ತು ಇತರ ಸಂಘಪರಿವಾರದ ನಾಯಕರ ನೇತೃತ್ವದಲ್ಲಿ ತಂಡವೊಂದು ಮುಸ್ಲಿಮ್ ಸಮುದಾಯದ ವಿರುದ್ಧ ಘೋಷಣೆ ಕೂಗುತ್ತಾ ಸಾಗಿ ಬಂದು ಅದೇ ವೃತ್ತದಲ್ಲಿ ಸಾವರ್ಕರ್  ಕಟೌಟ್ ಅಳವಡಿಸುತ್ತಾರೆ. ಬಹಳಷ್ಟು ಪೊಲೀಸರು ಅಲ್ಲಿ ಕರ್ತವ್ಯದಲ್ಲಿದ್ದು, ಅವರ ಸಮ್ಮುಖದಲ್ಲೇ ಅಲ್ಲಿ ಕಟೌಟ್‍ಅನ್ನು ಅಳವಡಿಸುತ್ತಾರೆ. ಆದರೆ, ಇತರೆ ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರ ಅಳವಡಿಸಿಲ್ಲ ಎಂದು ಅವರು ಹೇಳಿದರು.

ಅಷ್ಟೇ ಅಲ್ಲದೆ, ಈ ವೇಳೆ ಸದ್ದಾಂ ಅನ್ನುವ ಮುಸ್ಲಿಮ್ ಯುವಕನಿಗೆ ಮಾರಣಾಂತಿಕ ಹಲ್ಲೆ ನಡೆಸಿರುವ ವಿಚಾರ ಕೇಳಿ ಬಂತು. ಅದಾದ ಬಳಿಕ ಎರಡೂ ಕಡೆಯಿಂದ ಚೂರಿ ಇರಿತ ನಡೆದಿರುವ ವಿಚಾರ ಕೇಳಿ ಬರುತ್ತದೆ. ಇನ್ನೂ, ಕೆಲ ಮಾಧ್ಯಮಗಳಲ್ಲಿ ಬಜರಂಗ ದಳದ ಯುವಕರ ಮೇಲೆ ನಡೆಸಿದ ದಾಳಿಯನ್ನು ಎತ್ತಿ ತೋರಿಸಲಾಗಿದೆಯೇ ವಿನಃ ಬಜರಂಗ ದಳದ ಸದಸ್ಯರು ಅನಗತ್ಯವಾಗಿ ಅಮೀರ್ ಅಹ್ಮದ್ ಸರ್ಕಲ್ ಬಳಿ ಸಾವರ್ಕರ್ ಫೋಟೋ ಅವಳವಡಿಸಿದ್ದಾಗಲೀ, ಭಾರೀ ಸಂಖ್ಯೆಯಲ್ಲಿ ಜಮಾಯಿಸಿ ಸ್ಥಳದಲ್ಲಿ ಪ್ರಕ್ಷುಬ್ದ ವಾತಾವರಣ ಸೃಷ್ಟಿಸಿದ್ದಾಗಲೀ, ಮುಸ್ಲಿಮ್ ಯುವಕನಿಗೆ ಗಂಭೀರವಾಗಿ ಥಳಿಸಿದ ವಿಚಾರ ಪ್ರಸಾರವಾಗುವುದೇ ಇಲ್ಲ ಎಂದು ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುತ್ತಾ ಹೋದಾಗ ಪೊಲೀಸರು ಪರಿಸ್ಥಿತಿ ನಿಯಂತ್ರಣಕ್ಕಾಗಿ ಲಾಠಿ ಚಾರ್ಜ್ ನಡೆಸಿ ಭಾರೀ ಸಂಖ್ಯೆಯಲ್ಲಿ ಸೇರಿದ್ದ ಬಜರಂಗದಳದ ಸದಸ್ಯರನ್ನು ಅಲ್ಲಿಂದ ಚದುರಿಸಿದರು. ಮತ್ತೊಂದೆಡೆ ಗುಂಪುಗೂಡಿದ್ದ ಮುಸ್ಲಿಮ್ ಯುವಕರನ್ನೂ ತೆರವುಗೊಳಿಸಿದರು. ಈ ವೇಳೆ ಅಲ್ಲೇ ಸರ್ಕಲ್‍ನಲ್ಲಿದ್ದ ಬಜರಂಗದ ದಳದ ಹಲವು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡರು. ಜೊತೆಗೆ ಕೆಲವೊಂದು ಮುಸ್ಲಿಮ್ ಯುವಕರನ್ನು ಬಂಧಿಸಿದರು ಎಂದರು.

ಚೂರಿ ಇರಿತ ಘಟನೆಗೆ ಸಂಬಂಧಿಸಿದಂತೆ ನಾಲ್ವರು ಮುಸ್ಲಿಮ್ ಯುವಕರನ್ನು ಬಂಧಿಸಲಾಗಿದೆ. ಈ ಪೈಕಿ ಝಬೀವುಲ್ಲಾ ಎಂಬವರನ್ನು ರಾತ್ರಿ 9 ಗಂಟೆಗೆ ಅವರ ಮನೆಯಿಂದಲೇ ಪೊಲೀಸರು ಬಂಧಿಸಿದ್ದಾರೆ. ಕೇವಲ ವಿಚಾರಣೆಗೆ ಕರೆದುಕೊಂಡು ಹೋಗುತ್ತಿದ್ದೇವೆ ಎಂದು ಪೊಲೀಸರು ಮನೆಮಂದಿಗೆ ತಿಳಿಸಿ. ಆ ಬಳಿಕ ಮಧ್ಯರಾತ್ರಿ 2.30ರ ಸುಮಾರಿಗೆ ಪೊಲೀಸರು ಕಣ್ಣಿಗೆ ಬಟ್ಟೆ ಕಟ್ಟಿ ಝಬೀವುಲ್ಲಾನನ್ನು ನಿರ್ಜನ ಪ್ರದೇಶಕ್ಕೆ ಕೊಂಡೊಯ್ದು ಕಾಲಿಗೆ ಗುಂಡು ಹಾರಿಸಿದ್ದಾರೆ ಎಂದು ಅವರ ಕುಟುಂಬಸ್ಥರು ತಿಳಿಸಿದ್ದಾರೆ ಎಂದು ಅವರು ನುಡಿದರು.

ಇದು ಬಿಜೆಪಿ-ಬಜರಂಗ ದಳದ ನಾಯಕರು ಮತ್ತು ಕಾರ್ಯಕರ್ತರನ್ನು ಸಮಾಧಾನ ಪಡಿಸಲು ಪೊಲೀಸರು ನಡೆಸಿರುವ ವ್ಯವಸ್ಥಿತ ಪಿತೂರಿ ಎಂದು ಅವರು, ಈ ಎಲ್ಲ ಘಟನೆಗಳ ಬಗ್ಗೆ ಹಾಲಿ ಹೈಕೋರ್ಟ್ ನ್ಯಾಯಾಧೀಶರಿಂದ ನ್ಯಾಯಾಂಗ ತನಿಖೆ ನಡೆಸಬೇಕೆಂದು ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ರಿಯಾಝ್, ಮಜೀದ್‍ಖಾನ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News